ಅಂತರ್ಜಲ ತೀವ್ರ ಕುಸಿತ; ಅಡಕೆ ಬೆಳೆಗಾರರಿಗೆ ಹೊಡೆತ

KannadaprabhaNewsNetwork | Published : Apr 28, 2024 1:15 AM

ಸಾರಾಂಶ

ತಾಲೂಕಿನ ತುಂಬಾ ಸಾವಿರಾರು ಎಕರೆಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದ ರೈತರ ಮುಖದಲ್ಲಿ ಆತಂಕ ಮನೆ ಮಾಡಿದೆ. ಬರಗಾಲ ಆವರಿಸಿರುವ ತಾಲೂಕಿನಲ್ಲಿ ಅಂತರ್ಜಲ ಬತ್ತಿ ಬೋರ್‌ವೆಲ್‌ ಸ್ತಬ್ಧವಾಗಿಬಿಟ್ಟಿವೆ.

ರಮೇಶ್ ಬಿದರಕೆರೆ

ಹಿರಿಯೂರು: ತಾಲೂಕಿನ ತುಂಬಾ ಸಾವಿರಾರು ಎಕರೆಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿದ್ದ ರೈತರ ಮುಖದಲ್ಲಿ ಆತಂಕ ಮನೆ ಮಾಡಿದೆ. ಬರಗಾಲ ಆವರಿಸಿರುವ ತಾಲೂಕಿನಲ್ಲಿ ಅಂತರ್ಜಲ ಬತ್ತಿ ಬೋರ್‌ವೆಲ್‌ ಸ್ತಬ್ಧವಾಗಿಬಿಟ್ಟಿವೆ. ಕಾದ ಬಾಣಲಿಯಂತಾದ ನೆಲದಲ್ಲಿ ನೀರಿಲ್ಲದೆ ಅಡಕೆ ಸಸಿಗಳು, ಮರಗಳು ಬಾಡಲು ಪ್ರಾರಂಭಿಸಿವೆ. ಬೆಳೆ ಉಳಿಸಿಕೊಳ್ಳುವುದು ಕಷ್ಟ ಎಂಬಂತಾಗಿದೆ. 2018-19ರಲ್ಲಿ 11 ಸಾವಿರ ಎಕರೆಯಷ್ಟಿದ್ದ ಅಡಕೆ ತೋಟ 2022-23ರ ಹೊತ್ತಿಗೆ ಬರೋಬ್ಬರಿ 24 ಸಾವಿರ ಎಕರೆಯಷ್ಟಾಗಿದೆ. ಖಾಲಿ ಜಮೀನುಗಳೆಲ್ಲ ಅಡಕೆ ತೋಟಗಳಾಗಿ ಪರಿವರ್ತನೆಯಾಗಿವೆ. 6-7 ವರ್ಷದ ಹಿಂದೆ ಇದೇ ರೀತಿ ಮಳೆಯಿಲ್ಲದೇ ತೆಂಗಿನ ತೋಟಗಳು ಒಣಗಿಹೋಗಿದ್ದವು. ಆನಂತರ ತೆಂಗಿನ ತೋಟ ಕಟ್ಟಲು ಮನಸಾಗದ ರೈತರು ಅದೇ ಜಮೀನುಗಳಲ್ಲಿ ಮುಕ್ಕಾಲು ಭಾಗ ಅಡಕೆ ನಾಟಿ ಮಾಡಿದರು. ನೀರಾವರಿ ಜೊತೆಗೆ ಖುಷ್ಕಿ ಜಮೀನುಗಳಿಗೂ ಸಹ ನೀರಿನ ಸೌಲಭ್ಯ ಮಾಡಿಕೊಂಡು ಅಡಕೆ ತೋಟ ಕಟ್ಟಿದರು. ಕೇವಲ ಮೂರ್ನಾಲ್ಕು ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚಿನ ಅಡಕೆ ತೋಟಗಳು ತಾಲೂಕಿನಲ್ಲಿ ನಿರ್ಮಾಣವಾದವು. ಮತ್ತೊಂದು ಮಲೆನಾಡು ಆಗಲಿದೆ ಹಿರಿಯೂರು ಎಂಬಂತಹ ಮಾತುಗಳು ಚಾಲ್ತಿಯಲ್ಲಿದ್ದಾಗಲೇ ಮಳೆ ಮುಗಿಲು ಸೇರಿದ್ದು, ರೈತರು ಆತಂಕದ ಸ್ಥಿತಿಯಲ್ಲಿದ್ದಾರೆ.

ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಕೆಲವು ಕಡೆ ಸಂಪೂರ್ಣ ನಿಂತೇ ಹೋಗಿವೆ. ಕೆಲವು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಆದರೂ ಸಹ ಅಡಕೆ ಗಿಡಗಳನ್ನು ಉಳಿಸಿಕೊಳ್ಳುವ ಬಗ್ಗೆ ನಂಬಿಕೆ ರೈತರಿಗಿಲ್ಲ. ವಿದ್ಯುತ್‌ ಏರಿಳಿತ ಬೇರೆ. ಕಡಿಮೆ ನೀರಿನಲ್ಲಿ ಹೊಡೆದು ಪಂಪ್‌ ಸೆಟ್‌ಗಳು ಸುಟ್ಟು ಹೋಗುತ್ತಿವೆ.

2022ರಲ್ಲಿ ಸುರಿದ ಮಳೆಯಿಂದಾಗಿ ವಿವಿ ಸಾಗರ, ಗಾಯಿತ್ರಿ ಜಲಾಶಯ ಸೇರಿ ತಾಲೂಕಿನ ಎಲ್ಲಾ ಚೆಕ್ ಡ್ಯಾಂಗಳು ಹಳ್ಳ ಕೊಳ್ಳಗಳು, ವೇದಾವತಿ ನದಿ ತುಂಬಿ ತುಳುಕಿದ್ದವು. ಆದರೆ ಎರಡೇ ವರ್ಷಕ್ಕೆ ಅಂತರ್ಜಲ ಮಟ್ಟ ದಾಖಲೆಯ ಪ್ರಮಾಣದಲ್ಲಿ ಕುಸಿದಿದ್ದು, ಮತ್ತೆ ರೈತರು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಬೋರ್‌ವೆಲ್‌ ವಾಹನಗಳ ಸದ್ದು ಪ್ರತಿ ಹಳ್ಳಿಯಲ್ಲೂ ಕೇಳುತ್ತಿದ್ದು ನೀರಿನ ಲಭ್ಯತೆಯೇ ಕಡಿಮೆಯಾಗಿದೆ. 3, 4, 5 ಬೋರ್ ಕೊರೆಸಿ ವಿಫಲವಾದ ರೈತ ಆಕಾಶ ನೋಡುತ್ತ ಕುಳಿತಿದ್ದಾನೆ. ಅಡಕೆ ಬೆಲೆ ಕಂಡು ಬೆಳೆ ವಿಸ್ತರಣೆ ಮಾಡಿದ ರೈತನನ್ನು ಈಗ ಉಳಿಸುವವರಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

Share this article