ತರೀಕೆರೆ ಪ್ರದೇಶದಲ್ಲಿ ಅಂತರ್ಜಲ ತೀವ್ರ ಕುಸಿತ: ಕುಡಿವ ನೀರಿಗೂ ಹಾಹಾಕಾರ

KannadaprabhaNewsNetwork | Published : Apr 5, 2024 1:04 AM

ಸಾರಾಂಶ

ಭದ್ರಾ ನದಿ ದಡದಲ್ಲೇ ತರೀಕೆರೆ ತಾಲೂಕು ಇದ್ದರೂ ಈ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುವಂತಾಗಿದೆ. ಪ್ರತಿ ವರ್ಷ ಕಾಲಕಾಲಕ್ಕೆ ಬರಬೇಕಾದ ಮಳೆ ಬಂದರೆ ಮಾತ್ರ ತರೀಕೆರೆ ತಾಲೂಕಿನ ಕೆರೆ ಕಟ್ಟೆಗಳು-ಬಾವಿ-ಹಳ್ಳ-ಕೊಳ್ಳ ಜಲ ತೊರೆಗಳು ನೀರಿನಿಂದ ತುಂಬಿ ಹರಿದು ಸಮೃದ್ಧ ವಾಗಿರುತ್ತದೆ. ಆದರೆ ಒಂದೇ ಒಂದು ವರ್ಷ ಮಳೆ ಬಾರದಿದ್ದರೆ ಇಲ್ಲಿನ ಪರಿಸ್ಥಿತಿ ತೀವ್ರ ಬಿಗಡಾಯಿಸುತ್ತದೆ. ಜತೆಗೆ ಕಳೆದ ವರ್ಷವೂ ಸಾಕಷ್ಟು ಮಳೆ ಬಾರದಿದ್ದರಿಂದ, ಪ್ರಸಕ್ತ ವರ್ಷ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

- ಪಕ್ಕದಲ್ಲೇ ಭದ್ರಾ ನದಿ ಇದ್ದರೂ ಹನಿ ನೀರಿಗೆ ತತ್ವಾರ । ಮಳೆಗಾಗಿ ಮೊರೆ

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ

ಭದ್ರಾ ನದಿ ದಡದಲ್ಲೇ ತರೀಕೆರೆ ತಾಲೂಕು ಇದ್ದರೂ ಈ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುವಂತಾಗಿದೆ. ಪ್ರತಿ ವರ್ಷ ಕಾಲಕಾಲಕ್ಕೆ ಬರಬೇಕಾದ ಮಳೆ ಬಂದರೆ ಮಾತ್ರ ತರೀಕೆರೆ ತಾಲೂಕಿನ ಕೆರೆ ಕಟ್ಟೆಗಳು-ಬಾವಿ-ಹಳ್ಳ-ಕೊಳ್ಳ ಜಲ ತೊರೆಗಳು ನೀರಿನಿಂದ ತುಂಬಿ ಹರಿದು ಸಮೃದ್ಧ ವಾಗಿರುತ್ತದೆ. ಆದರೆ ಒಂದೇ ಒಂದು ವರ್ಷ ಮಳೆ ಬಾರದಿದ್ದರೆ ಇಲ್ಲಿನ ಪರಿಸ್ಥಿತಿ ತೀವ್ರ ಬಿಗಡಾಯಿಸುತ್ತದೆ. ಜತೆಗೆ ಕಳೆದ ವರ್ಷವೂ ಸಾಕಷ್ಟು ಮಳೆ ಬಾರದಿದ್ದರಿಂದ, ಪ್ರಸಕ್ತ ವರ್ಷ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.ಜನವರಿಯಿಂದಲೇ ಬೇಸಿಗೆ ವಾತಾವರಣ ಕಾಣಿಸಿಕೊಂಡಿದ್ದು, ಏಪ್ರಿಲ್ ನಲ್ಲಿ ಬಿಸಿಲಿನ ತೀವ್ರತೇ ಮತ್ತೂ ಹೆಚ್ಚಿದೆ. ಇಂತಹ ಕಡು ಬೇಸಿಗೆ, ಹೆಚ್ಚಿದ ತಾಪಮಾನದಿಂದಾಗಿ ಜನ-ಜಾನುವಾರುಗಳ ಪರಿಸ್ಥಿತಿ ಬಾಣೆಲೆಯಿಂದ ಬೆಂಕಿಗೆ ಹಾಕಿದಂತಾಗಿದೆ. ಮೊದಲೇ ಮಳೆ ಕೊರತೆಯಿಂದ ಕುಡಿದಿದ್ದ ಅಂತರ್ಜಲ ಬೇಸಿಗೆಯಿಂದಾಗಿಇಲ್ಲಿನ ಕೆರೆ ಕಟ್ಟೆಗಳೆಲ್ಲಾ ಬರಿದಾಗಿದೆ. ಸಾವಿರಾರು ಅಡಿ ಭೂಮಿ ಕೊರೆದರೂ ಜಲ ಕಣ್ಣುಗಳೇ ಕಾಣದಂತಾಗಿದೆ.ಭದ್ರೆ ತಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ:

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭದ್ರಾ ಅಣೆಕಟ್ಟು ತಾಲೂಕಿನಲ್ಲೇ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ನೀಗಿಲ್ಲ. ಲಿಂಗದಹಳ್ಳಿ ಹೋಬಳಿ ಕಲ್ಲತ್ತಿ ಜಲಪಾತದಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದೆ. ಇದರ ಫಲವಾಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಕುಡಿವ ನೀರಿಗಾಗಿ ಬಹುಗ್ರಾಮ ಕುಡಿಯುವ ಯೋಜನೆ, ಜಲ ಜೀವನ್ ಮಿಷನ್ ನಂತಹ ಯೋಜನೆಗಳಿದ್ದರೂ ಅವುಗಳ ಸಮರ್ಪಕ ನಿರ್ವಹಣಿ ಕೊರತೆಯಿಂದ ತಾಲೂಕಿನ ಹಾದೀಕೆರೆ, ಯರೇಹಳ್ಳಿ, ಮಲ್ಲೇನಹಳ್ಳಿ, ಸುಣ್ಣದಹಳ್ಳಿ, ಕೆಂಚಾಪುರ, ಲಿಂಗದಹಳ್ಳಿ, ಉಡೇವಾ, ಗುಳ್ಳದಮನೆ, ಪಿರುಮೇನಹಳ್ಳಿ ಯಂತಹ ಅನೇಕ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡತೊಡಗಿದೆ. ಸ್ಥಳೀಯ ಆಡಳಿತದಿಂದ ಟ್ಯಾಂಕರ್ ನಿಂದ ನೀರು ಪೊರೈಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಬಿಂದಿಗೆ ಹಿಡಿದು ತೋಟದ ಕೊಳವೆ ಬಾವಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಇದ್ದು, ತಾಲೂಕಿನ ಅನೇಕ ಗ್ರಾಮಗಳಿಗೆ ತಾಲೂಕು ಅಡಳಿತ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿದೆ.ಅಂತರ್ಜಲ ಕುಸಿತ:

ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಕೆಂಚಾಪುರ, ಚಾಕೋನಹಳ್ಳಿ ಬೋವಿ ಕಾಲೋನಿ. ಮಲ್ಲೇನಹಳ್ಳಿ, ಸಿದ್ದರಹಳ್ಳಿ. ಹುಲಿತಿಮ್ಮಾಪುರ, ಬೇಲೇನಹಳ್ಳಿ ತಾಂಡ್ಯ ಹಾಗೂ ತಾಲೂಕಿನ ಮತ್ತಿತರ ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ತೋಟಗಳಿಗೆ ಟ್ಯಾಂಕರ್ ನೀರು:

ಉಬ್ರಾಣಿ- ಅಮೃತಾಪುರ ಏತನೀರಾವರಿ ಯೋಜನೆ ಇದ್ದು ಇಲ್ಲದಂತಾಗಿದೆ, ಮಳೆಗಾಲದಲ್ಲಿ ಮಾತ್ರ ಕೆರೆಗಳಿಗೆ ನೀರನ್ನು ಪೊರೈಸುವುದರಿಂದ ಈ ಬಾರಿ ಕೆರೆಗಳು ಖಾಲಿಯಾಗಿರುವುದರಿಂದ ಸಾವಿರ ಅಡಿ ಕೊರೆದರು ನೀರು ಸಿಗುತ್ತಿಲ್ಲ. ವಾಣಿಜ್ಯ ಬೆಳೆಯಾದ ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಗಳ ಮೊರೆ ಹೋಗಿದ್ದಾರೆ. ಲಿಂಗದಹಳ್ಳಿ ಸುಣ್ಣದಹಳ್ಳಿ, ಲಿಂಗದಹಳ್ಳಿ, ತ್ಯಾಗದಬಾಗಿ, ಕೆಂಚಾಪುರ, ಅಮೃತಾಪುರ ಹೋಬಳಿಯ ಹಾದೀಕೆರೆ, ಯರೇಹಳ್ಳಿ, ಮಲ್ಲೇನಹಳ್ಳಿ, ಭಾಗಗಳಲ್ಲಿ ತೋಟಗಳಿಗೆ ರೈತರು ಟ್ಯಾಂಕರ್, ಲಾರಿಗಳಿಂದ ನೀರುನ್ನು ಪೊರೈಸುತ್ತಿದ್ದಾರೆ. ಈಗ ಉದ್ಬವಿಸಿರುವ ಇಂತಹ ಗಂಭಿರ ಸಮಸ್ಯೆಗಳಿಗೆ ಮಳೆ ಬರುವುದೊಂದೆ ಪರಿಹಾರ.

ಕಾಡು ಪ್ರಾಣಿ ಪಕ್ಷಿಗಳಿಗೂ ನೀರಿನ ಸಮಸ್ಯೆ:

ಕಾಡಂಚಿನ ಭಾಗಗಳಲ್ಲಿ ಕೆರೆಗಳಲ್ಲಿ ನೀರು ಇಲ್ಲದೆ, ಆಹಾರ ಅರಸಿಕೊಂಡು ಕಾಡು ಪ್ರಾಣಿ ಪಕ್ಷಿಗಳು ಊರಿನತ್ತ ದಾವಿಸುತ್ತಿವೆ. ಬಹುತೇಕ ಕೆರೆ, ಕಟ್ಟೆಗಳು, ಝರಿಗಳಲ್ಲಿ ನೀರಿಲ್ಲದಿರುವುದರಿಂದ ಪ್ರಾಣಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.--ಕೋಟ್ಃ

ಬರಗಾಲ ಘೋಷಣೆ ಮಾಡಿ 6 ತಿಂಗಳು ಆಯಿತು, ಅದರೂ ಸ್ಥಳೀಯ ಅಡಳಿತ ಕುಡಿಯುವ ನೀರು ಪೂರೈಸಲು ವಿಫಲವಾಗಿದೆ. ಇದರಿಂದ ಸಾರ್ವಜನಿಕರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿ ಸಮಸ್ಯೆ ಉಂಟಾಗಿದೆ. ಕೂಡಲೇ ತಾಲೂಕು ಅಡಳಿತ ಕುಡಿಯುವ ನೀರು ಪೂರೈಸಬೇಕು

ಹಳಿಯೂರು ಸೋಮಶೇಖರಯ್ಯ

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ -- ಕೋಟ್--

ಮಳೆ ಅಭಾವದಿಂದ ತಾಲೂಕಿನ ವಿವಿಧ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೆ ತೊಂದರೆಯಾಗಿದೆ. ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ತಾಲೂಕು ಅಡಳಿತ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಪಡೆದು ಟ್ಯಾಂಕರ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರು ಜಲಮೂಲಗಳ ಸಂರಕ್ಷಣೆ ಜೊತೆಗೆ ನೀರನ್ನು ಮಿತವಾಗಿ ಬಳಸ ಬೇಕು

ಗಣೇಶ್, ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ

ತರೀಕೆರೆ ತಾಲೂಕು ಪಂಚಾಯಿತಿ ---

4ಕೆಟಿಆರ್.ಕೆ.1ಃ ತರೀಕೆರ ತಾಲೂಕು ಅಡಳಿತದಿಂದ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.4ಕೆಟಿಆರ್.ಕೆ.2ಃ ಹಳಿಯೂರು ಸೋಮಶೇಖರಯ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷರು4ಕೆಟಿಆರ್.ಕೆ.3ಃ ಗಣೇಶ್, ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ

Share this article