ತೀವ್ರ ಬರಗಾಲ; ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ಹಾಹಾಕಾರ

KannadaprabhaNewsNetwork | Published : May 3, 2024 1:01 AM

ಸಾರಾಂಶ

ಬೋರ್ ಕೊರೆಯುವ ಯಂತ್ರಗಳ ಮಾಲೀಕರ ಬಳಿ ಪಿಡಿಒಗಳು ಅಂಗಲಾಚಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ವತಿಯಿಂದ ಹೊಸದಾಗಿ ಕೊರೆಯುವ ಬೋರ್‌ವೆಲ್ ಗಳ ಮಿತಿಯನ್ನು ಸರ್ಕಾರ 500 ಅಡಿಗೆ ಮಿತಿಗೊಳಿಸಿದೆ. ಬಹುತೇಕ ಕಡೆ 500 ಅಡಿ ಕೊರೆದರೂ ನೀರು ಬರದೆ ಬೋರ್ ವೆಲ್ ಗಳು ಫೇಲ್ ಆಗುತ್ತಿವೆ. ಇದೂ ಕೂಡ ಗ್ರಾಮಿಣ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತೀವ್ರ ಬರಗಾಲದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವುದು ಗ್ರಾಮ ಪಂಚಾಯತಿಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಮಳೆಯಿಲ್ಲದೇ ತಾಲೂಕಿನ ಕೆರೆ-ಕಟ್ಟೆಗಳು ಬರಿದಾಗಿರುವ ಪರಿಣಾಮ ಅಂತರ್ಜಲ ಮಟ್ಟ ಕುಸಿದು ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.

ತಾಲೂಕಿನಲ್ಲಿ 37 ಗ್ರಾಮ ಪಂಚಾಯತಿಗಳ ಪೈಕಿ ಸರ್ಕಾರಿ ಮಾಹಿತಿಯಂತೆ ಪ್ರಸ್ತುತ 14 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕಾಗಿ ಗ್ರಾಪಂ ವತಿಯಿಂದ ಹೊಸ ಬೋರ್ ವೆಲ್ ಗಳನ್ನು ಕೊರೆಸಿದರೂ ಅಂತರ್ಜಲ ಕುಸಿತದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ.

ಟ್ಯಾಂಕರ್ ಮೂಲಕ ತೀವ್ರ ಅಭಾವ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜನಸಂಖ್ಯೆ ಆಧರಿಸಿ ದೊಡ್ಡ ದೊಡ್ಡ ಗ್ರಾಮಗಳಿಗೆ ಬೆಳಿಗ್ಗೆ ಮತ್ತು ಸಂಜೆ ಹಾಗೂ ಪುಟ್ಟ ಗ್ರಾಮಗಳಿಗೆ ಒಂದು ಟ್ಯಾಂಕರ್‌ನಂತೆ ನಿತ್ಯ ನೀರು ಪೂರೈಕೆ ಮಾಡಲಾಗುತ್ತಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮ ಪಂಚಾಯತಿಗಳ ಮುಂದೆ ಈಗಾಗಲೇ ಪ್ರತಿಭಟನೆಗಳು ಆರಂಭಗೊಂಡಿವೆ.

ರಾಜ್ಯ ಸರ್ಕಾರ ಒಂದು ಟ್ಯಾಂಕರ್ ನೀರು ಪೂರೈಕೆಗೆ 800 - 850 ರು. ನಿಗಧಿ ಪಡಿಸಿದೆ. ಗ್ರಾಮೀಣ ಪ್ರದೇಶದ ರೈತಾಪಿ ಸಮುದಾಯ ಜಾನುವಾರುಗಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಆದರೆ, ಜನರಿಗೆ ಪೂರೈಕೆ ಮಾಡುತ್ತಿರುವ ನೀರು ಸಾಕಾಗುತ್ತಿಲ್ಲ. ಜೊತೆಗೆ ಟ್ಯಾಂಕರ್ ನೀರಿನ ಶುದ್ಧತೆಯನ್ನು ಪರಿಶೀಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ನೀರಿನ ಸಮಸ್ಯೆ ಇರುವ ಗ್ರಾಮಗಳು:

ತಾಲೂಕಿನ ನಾಡಬೋಗನಹಳ್ಳಿ, ಮಾಂಡಲೀಕನಹಳ್ಳಿ, ದೇವರಹಳ್ಳಿ, ಜಕ್ಕನಹಳ್ಳಿ, ಬೋಳಮಾರನಹಳ್ಳಿ, ಅಂಚೆಬೀರನಹಳ್ಳಿ, ಚೀಕನಹಳ್ಳಿಕೊಪ್ಪಲು, ವೆಂಕಟರಾಜಪುರ, ಅಂಚೆಮುದ್ದನಹಳ್ಳಿ, ಗಂಜೀಗೆರೆ, ಕರುಬರ ಬಸ್ತಿ ಮತ್ತು ರಾಜೇನಹಳ್ಳಿ, ಮಡುವಿನಕೋಡಿ, ಹೊಸಕೋಟೆ, ಬಿಲ್ಲೇನಹಳ್ಳಿ, ಗೊರವಿ ಮತ್ತು ದೊಡ್ಡಹಾರನಹಳ್ಳಿ, ಚೌಡೇನಹಳ್ಳಿ, ಶೆಟ್ಟಿಹಳ್ಳಿ, ರಾಮನಹಳ್ಳಿ ಮತ್ತು ಜಕ್ಕನಹಳ್ಳಿ, ಆಲೇನಹಳ್ಳಿ, ಬೇವಿನಹಳ್ಳಿ, ಅರಳಕುಪ್ಪೆ, ಗೊಲ್ಲರಹಳ್ಳಿ, ಕಾಳೇನಹಳ್ಳಿ, ಚಿಲ್ಲದಹಳ್ಳಿ, ಬೊಮ್ಮನಾಯಕನಹಳ್ಳಿ, ಮೆಣಸ, ಗುಡ್ಡೇನಹಳ್ಳಿ ಮತ್ತು ಬೊಪ್ಪನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ.

ಕೆರೆಗಳಿಗೆ ನೀರು ತುಂಬಿಸಲು ನಿರ್ಲಕ್ಷ್ಯ:

ತಾಲೂಕಿನ ಹೇಮಾವತಿ ನದಿ ಅಂಚಿನ ಅಕ್ಕಿಹೆಬ್ಬಾಳು, ಕಸಬಾ ಮತ್ತು ಕಿಕ್ಕೇರಿ ಹೋಬಳಿಯ ಕೆಲವು ಭಾಗಗಳು ಹೇಮೆಯ ನೀರನ್ನು ಅವಲಂಬಿಸಿದ್ದರೆ, ಉಳಿದಂತೆ ಕೆಲವು ಪ್ರದೇಶಗಳು ಹೇಮಾವತಿ ಜಲಾಶಯದ ಎಡದಂಡೆ ನಾಲೆಯಿಂದಾಗಿ ಅರೆ ನೀರಾವರಿಗೆ ಒಳಪಟ್ಟಿವೆ. ಸಂತೇಬಾಚಹಳ್ಳಿ, ಶೀಳನೆರೆ ಹಾಗೂ ಬೂಕನಕೆರೆ ಹೋಬಳಿಗಳು ಸಂಪೂರ್ಣ ಮಳೆಯಾಶ್ರಿತವಾಗಿವೆ. ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೇಮೆ ನದಿಯಿಂದ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ.

ಬೋರ್ ಕೊರೆಯುವ ಯಂತ್ರಗಳಿಗೂ ಅಭಾವ:

ತೀವ್ರ ಬರಗಾಲದಿಂದ ತಮ್ಮ ಬೆಳೆ ಉಳಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿರುವ ರೈತರು ತಮ್ಮ ಜಮೀನಿಗಳಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಸಲು ಆರಂಭಿಸಿದ್ದಾರೆ. ಅಂತರ್ಜಲ ಮಟ್ಟ ಸಾವಿರ ಅಡಿ ಆಳಕ್ಕೆ ತಲುಪಿದ್ದರೂ ರೈತರು ಮಾತ್ರ ಹಠ ಬಿಡದೇ ಬೋರ್ ಕೊರೆಸುತ್ತಲೇ ಇದ್ದಾರೆ. ಪರಿಣಾಮ ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಹೊಸ ಬೋರ್ ಕೊರೆಸಲು ಯಂತ್ರಗಳೇ ಸಿಗುತ್ತಿಲ್ಲ. ಬೋರ್ ಕೊರೆಯುವ ಯಂತ್ರಗಳ ಮಾಲೀಕರ ಬಳಿ ಪಿಡಿಒಗಳು ಅಂಗಲಾಚಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ವತಿಯಿಂದ ಹೊಸದಾಗಿ ಕೊರೆಯುವ ಬೋರ್‌ವೆಲ್ ಗಳ ಮಿತಿಯನ್ನು ಸರ್ಕಾರ 500 ಅಡಿಗೆ ಮಿತಿಗೊಳಿಸಿದೆ. ಬಹುತೇಕ ಕಡೆ 500 ಅಡಿ ಕೊರೆದರೂ ನೀರು ಬರದೆ ಬೋರ್ ವೆಲ್ ಗಳು ಫೇಲ್ ಆಗುತ್ತಿವೆ. ಇದೂ ಕೂಡ ಗ್ರಾಮಿಣ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ.

‘ಹಳ್ಳಿಗಳಲ್ಲಿ ಜನ- ಜಾನುವಾರುಗಳು ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿವೆ. ಈ ಬಗ್ಗೆ ಕ್ರಮ ವಹಿಸಬೇಕಾದ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಚುನಾವಣೆ ಗುಂಗಿನಲ್ಲಿದ್ದಾರೆ. ಕೂಡಲೇ ಗ್ರಾಮಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಿ ಎಮ್ಮೆ ದನಗಳ ನೀರಿನ ದಾಹವನ್ನು ತಣಿಸಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು.’

ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ.

Share this article