ಲೈಂಗಿಕ ದೌರ್ಜನ್ಯ ಮೂಲಭೂತ ಹಕ್ಕಿನ ಉಲ್ಲಂಘನೆ

KannadaprabhaNewsNetwork | Published : Nov 30, 2024 12:46 AM

ಸಾರಾಂಶ

ಕೆಲಸದ ಸ್ಥಳದಲ್ಲಿ ಮಹಿಳಾ ನೌಕರರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಮೂಲಭೂತ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದ್ದು, ಮಹಿಳಾ ನೌಕರರ ಘನತೆ ಕಾಪಾಡುವುದು ಎಲ್ಲ ಪುರಷ ನೌಕರರ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಕೆಲಸದ ಸ್ಥಳದಲ್ಲಿ ಮಹಿಳಾ ನೌಕರರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಮೂಲಭೂತ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದ್ದು, ಮಹಿಳಾ ನೌಕರರ ಘನತೆ ಕಾಪಾಡುವುದು ಎಲ್ಲ ಪುರಷ ನೌಕರರ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ, ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನದ ಅಂಗವಾಗಿ, ನಗರದ ಬಾಲ ಭವನದಲ್ಲಿ ಶುಕ್ರವಾರ ಆಯೋಜಿಸಲಾದ, ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ (ನಿರೋಧ, ನಿರ್ಬಂಧ ಹಾಗೂ ನಿವಾರಣೆ) ಕಾಯ್ದೆ-2013ರ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಮುಕ್ತ ವಾತಾವರಣ ಕಲ್ಪಿಸಬೇಕು. ಲಿಂಗಾಧಾರಿತ ಶೋಷಣೆ ತಡೆದು, ಸಮಾನತೆ, ಜೀವಿಸುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ ನೀಡಬೇಕು. ಸ್ವಾತಂತ್ರ ನಂತರ ದೇಶದಲ್ಲಿ ಮಹಿಳೆಯರ ರಕ್ಷಣೆಗೆ ಸಾಕಷ್ಟು ಕಾಯ್ದೆ ಜಾರಿಯಾದರೂ, ಕೆಲಸದ ಸ್ಥಳದಲ್ಲಿ ರಕ್ಷಣೆ ನೀಡಲು ಪ್ರತ್ಯೇಕ ಕಾನೂನು ಇರಲಿಲ್ಲ. 1997 ರಲ್ಲಿ ಬನ್ವಾರಿ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಕೆಲಸ ಸ್ಥಳದಲ್ಲಿ ಮಹಿಳೆಯರ ರಕ್ಷಣೆಗಾಗಿ ವಿಶಾಕ ಮಾರ್ಗಸೂಚಿಗಳನ್ನು ರೂಪಿಸಿತು ಎಂದು ತಿಳಿಸಿದರು.

ಇದನ್ನು ಆಧರಿಸಿ 2013ರಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ದೌರ್ಜನ್ಯ ಕಾಯ್ದೆ ಜಾರಿ ಮಾಡಲಾಗಿದೆ. ಇದಕ್ಕೂ ಮೊದಲು 1979 ರಲ್ಲಿ ವಿಶ್ವ ಸಂಸ್ಥೆ ಕಾರ್ಯಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ಎಲ್ಲ ತಾರತಮ್ಯ ಹಾಗೂ ದೌರ್ಜನ್ಯಗಳನ್ನು ತಡೆಯಲು ಸಮಾವೇಶ ನಡೆಸಿ ಅಂತರಾಷ್ಟ್ರೀಯ ಒಪ್ಪಂದವನ್ನು ಜಾರಿ ಮಾಡಿತು. 1993 ರಲ್ಲಿ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿತು. ಆದಾಗ್ಯೂ ಪ್ರತ್ಯೇಕ ಕಾನೂನು ರಚಿಸಲು ಸುಮಾರು 20 ವರ್ಷಗಳ ಸುದೀರ್ಘ ಕಾಲ ಹಿಡಿದಿದ್ದು, ದೇಶದ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಎಂ. ವಿಜಯ್ ವಿಷಾದ ವ್ಯಕ್ತ ಪಡಿಸಿದರು.ಜಿಪಂ. ಸಿಇಓ ಎಸ್.ಜೆ. ಸೋಮಶೇಖರ್ ಮಾತನಾಡಿ, ಜಿಲ್ಲಾ ಪಂಚಾಯತಿಯಲ್ಲಿ ಮಹಿಳಾ ನೌಕರರ ರಕ್ಷಣೆಗೆ ಕ್ರಮ ವಹಿಸಿ, ಆಂತರಿಕ ಸಮಿತಿ ರಚನೆ ಮಾಡಲಾಗಿದೆ. ಮಹಿಳಾ ಆಧಾರಿತ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಮಾಡುವ ಆಟೋ ಟಿಪ್ಪರ್‌ಗಳ ವಾಹನ ಚಾಲನೆ ತರಬೇತಿಯನ್ನು ಮಹಿಳಾ ಕಾರ್ಮಿಕರಿಗೆ ನೀಡಲಾಗಿದೆ. ನಲ್-ಜಲ್-ಮಿತ್ರ ಯೋಜನೆಯಡಿ ನೀರುಗಂಟಿ ಕೆಲಸಕ್ಕೂ ಮಹಿಳೆಯರನ್ನು ನೇಮಿಸಲಾಗುತ್ತಿದೆ ಎಂದು ತಿಲಿಸಿದರು.

ಮಹಿಳಾ ಸ್ವ ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಇ- ಮಾರುಕಟ್ಟೆ ಕಲ್ಪಿಸಲು ತಂತ್ರಾಂಶ ರೂಪಿಸಲಾಗುತ್ತಿದೆ. ಈ ಬಗ್ಗೆ ಆಯ್ದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಬೆಂಗಳೂರಿನಲ್ಲಿ ಮಾರುಕಟ್ಟೆ ಕುರಿತು ತರಬೇತಿ ನೀಡಲಾಗುವುದು ಎಂದು ಸಿಇಓ ಎಸ್.ಜೆ. ಸೊಮಶೇಖರ್ ತಿಳಿಸಿದರು.

ಜಿಲ್ಲಾ ಆಂತರಿಕ ಸಮಿತಿ ಅಧ್ಯಕ್ಷೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದ್ಯಸೆ ಡಿ.ಕೆ.ಶೀಲಾ ಮಾತನಾಡಿ, 2013ರ ಕಾಯ್ದೆಯ ಅನುಸಾರ 10 ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ, ಹಿರಿಯ ಮಹಿಳಾ ನೌಕರರ ಅಧ್ಯಕ್ಷತೆಯಲ್ಲಿ ಆಂತರಿಕ ಸಮಿತಿ ರಚಿಸಬೇಕು. ಮಹಿಳೆಯರು ದೂರು ಸಲ್ಲಿಸಲು ಅನುವಾಗುವಂತೆ ದೂರ ಪೆಟ್ಟಿಗೆ ಇರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ವಿಜಯ್‌ಕುಮಾರ್ ಸೇರಿದಂತೆ, ಹಲವು ಇಲಾಖೆಗಳ ಆಂತರಿಕ ಸಮಿತಿ ಮುಖ್ಯಸ್ಥರು ಭಾಗವಹಿಸಿದ್ದರು.

Share this article