ಬಳ್ಳಾರಿ: ಇಲ್ಲಿನ ತಾಳೂರು ರಸ್ತೆಯ ಎಚ್‌ಎಲ್‌ಸಿ ಉಪ ಕಾಲುವೆ ಬಳಿಯಿದ್ದ ಗುಡಿಸಲುಗಳನ್ನು ತೆರವುಗೊಳಿಸಿದ ಬಳಿಕ ಹತ್ತಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದ ಬಡ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ.
ಗುಡಿಸಲು ತೆರವಾದ ಬಳಿಕ ಸೂರಿಲ್ಲದೆ ಕಂಗಾಲಾದ ಕುಟುಂಬಗಳನ್ನು ಭೇಟಿ ಮಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು, ಮಳೆ-ಬಿಸಿಲಿಗೆ ಪುಟ್ಟ ಮಕ್ಕಳು ಬಳಲಬಾರದು ಎಂಬ ಕಾರಣಕ್ಕೆ ಒಂದಷ್ಟು ಶೆಡ್ ನಿರ್ಮಿಸಿಕೊಟ್ಟು, ತಿಂಗಳಾಗುವಷ್ಟು ಆಹಾರ ಧಾನ್ಯಗಳನ್ನು ಪೂರೈಸಿದ್ದಾರೆ. ಸದ್ಯಕ್ಕೆ ರಸ್ತೆಯಲ್ಲಿಯೇ ಆಹಾರ ತಯಾರಿಸಿಕೊಂಡು ದಿನ ಸವೆಸುತ್ತಿರುವ ನಿರಾಶ್ರಿತರು, ಮುಂದೇನು? ಎಂಬ ಆತಂಕದಲ್ಲಿದ್ದಾರೆ.ಕರುಣೆ ತೋರಲಿಲ್ಲ:
ಸುಮಾರು 30 ವರ್ಷಗಳಿಂದ ನಾವಿಲ್ಲಿ ವಾಸವಾಗಿದ್ದೇವೆ. ಆಗ ಈ ಭಾಗದಲ್ಲಿ ಯಾವ ಮನೆಗಳು ನಿರ್ಮಾಣವಾಗಿರಲಿಲ್ಲ. ಇದೀಗ ದೊಡ್ಡ ಬಂಗಲೆಗಳು ಎದ್ದಿವೆ. ಗುಡಿಸಲು ತೆರವಿಗೆ ಈ ಹಿಂದೆ ನೋಟಿಸ್ ನೀಡಿದ್ದು ನಿಜ. ನಮಗಷ್ಟೇ ಅಲ್ಲ; ಕಾಲುವೆ ಬಳಿಯಿದ್ದ ಎಲ್ಲರಿಗೂ ನೊಟೀಸ್ ನೀಡಿದ್ದಾರೆ. ಆದರೆ, ಏಕಾಏಕಿ ಬೆಳಿಗ್ಗೆಯೇ ಜೆಸಿಬಿಯೊಂದಿಗೆ ಆಗಮಿಸಿ ನಮ್ಮ ಗುಡಿಸಲುಗಳನ್ನು ತೆರವುಗೊಳಿಸುತ್ತಾರೆ ಎಂದುಕೊಂಡಿರಲಿಲ್ಲ.ಗುಡಿಸಲು ತೆರವಿಗೆ ಬಂದಾಗ ನಾಲ್ಕೈದು ದಿನ ಸಮಯ ಕೊಡಿ. ಮನೆಯ ಸಾಮಾನು, ಆಹಾರ ಧಾನ್ಯಗಳನ್ನು ತೆಗೆದಿಟ್ಟುಕೊಳ್ಳುತ್ತೇವೆ ಎಂದು ಅಂಗಲಾಚಿದೆವು. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಯಾವುದೇ ಕರುಣೆ ಬರಲಿಲ್ಲ. ಆದೇಶವಾಗಿದೆ, ಗುಡಿಸಲು ತೆರವು ಮಾಡುತ್ತೇವೆ ಎಂದು ಗುಡಿಸಲಿನಿಂದ ಹೊರಬನ್ನಿ ಎಂದರು. ಮಹಿಳಾ ಪೊಲೀಸರಿಂದ ನಮ್ಮನ್ನು ಹೊರ ಹಾಕಿಸಿದರು. ಹಸುಕೂಸು ನೋಡಿಯಾದರೂ ಅವರಿಗೆ ದಯೆ ಬರಲಿಲ್ಲ ಎಂದು ಸಂತ್ರಸ್ತರು ಕನ್ನಡಪ್ರಭ ಜೊತೆ ಅಳಲು ತೋಡಿಕೊಂಡರು.
ಬೀದಿಯಲ್ಲೇ ಅಡುಗೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕಷ್ಟ ನೋಡಿ ಅವರಿವರು ಆಹಾರ ಕೊಡುತ್ತಿದ್ದಾರೆ. ಅದನ್ನೇ ಉಂಡು ಜೀವನ ನಡೆಸುತ್ತಿದ್ದೇವೆ. ಶೌಚ, ಸ್ನಾನಕ್ಕಾಗಿ ಪರದಾಡುತ್ತಿದ್ದೇವೆ. ಮಕ್ಕಳಿಗೆ ಡೆಂಘೀಜ್ವರ ಬಂದರೆ ಹೇಗೆ ಎಂಬ ಭಯದಲ್ಲಿದ್ದೇವೆ ಎಂದು ಆತಂಕಗೊಂಡರು.ಶ್ರೀರಾಮುಲುರನ್ನು ನಂಬಿಕೊಂಡಿದ್ದೇವೆ:
ಅದೆಷ್ಟೇ ಕಷ್ಟವಾಗಲಿ ಬಡವರ ಪರ ನಿಲ್ಲುತ್ತೇನೆ. ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಬೀದಿಗೆ ಬಂದ ನಮಗೆ ಶೆಡ್ ನಿರ್ಮಿಸಿ, ಆಹಾರ ಧಾನ್ಯಗಳನ್ನು ನೀಡಿದ್ದಾರೆ. 15 ದಿನ ಸಮಯ ಕೊಡಿ ಎಂದಿದ್ದಾರೆ. ಅಲ್ಲಿವರೆಗೆ ಇಲ್ಲಿಯೇ ಇರುತ್ತೇವೆ. ಪುಟ್ಟ ಮಕ್ಕಳಿದ್ದಾರೆ. ವಿಪರೀತ ಸೊಳ್ಳೆಗಳಿವೆ. ಹಾಗಂತ ಈ ಜಾಗ ಬಿಟ್ಟು ಎಲ್ಲಿಗೆ ಹೋಗೋಣ? ನಮಗೆ ನ್ಯಾಯ ಸಿಗುವವರೆಗೆ ಇಲ್ಲಿಯೇ ಇರುತ್ತೇವೆ. ಶ್ರೀರಾಮುಲು ಅವರನ್ನು ನಂಬಿಕೊಂಡಿದ್ದೇವೆ. ಎಷ್ಟೇ ದಿನಗಳಾಗಲಿ ಕಾಯುತ್ತೇವೆ ಎಂದು ಸಂತ್ರಸ್ತರು ಕಣ್ಣೀರಿಟ್ಟರು. ನೋಟಿಸ್ ಬಳಿಕ ತೆರಳು:ನೀರಾವರಿ ನಿಗಮಕ್ಕೆ ಸೇರಿದ ನಗರದ ತಾಳೂರು ರಸ್ತೆಯ ಎಚ್‌ಎಲ್‌ಸಿ ಉಪ ಕಾಲುವೆಯ ಬಳಿಯ ಜಾಗದಲ್ಲಿ ಸುಮಾರು 30 ವರ್ಷಗಳಿಂದ 9 ಕುಟುಂಬಗಳ 35ಕ್ಕೂ ಹೆಚ್ಚು ಜನರು ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದು, ಈ ಹಿಂದೆ ಗುಡಿಸಲು ನಿವಾಸಿಗಳಿಗೆ ನೊಟೀಸ್‌ಗಳನ್ನು ಜಾರಿಗೊಳಿಸಲಾಗಿದ್ದು ನ್ಯಾಯಾಲಯ ಆದೇಶದನ್ವಯ ಪೊಲೀಸರ ರಕ್ಷಣೆಯಲ್ಲಿ ಗುಡಿಸಲು ತೆರವುಗೊಳಿಸಲಾಗಿದೆ.
ಗುಡಿಸಲು ತೆರವುಗೊಳಿಸಿದ್ದರಿಂದ ಬಡವರು ಬೀದಿಗೆ ಬಂದಿದ್ದಾರೆ. ಬೇರೆಡೆ ಅವರಿಗೆ ಸೂರು ಕಲ್ಪಿಸಲು ಕ್ರಮ ಜರುಗಿಸಬೇಕು. ಸಂಕಷ್ಟದಲ್ಲಿರುವವರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕು ಎನ್ನುತ್ತಾರೆ ಆಮ್‌ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ್.ಗುಡಿಸಲು ನಾವೇ ತೆರವು ಮಾಡುತ್ತೇವೆ. ನಾಲ್ಕೈದು ದಿನ ಸಮಯ ಕೊಡಿ ಎಂದರೂ ಲೆಕ್ಕಿಸದೇ ನಮ್ಮನ್ನು ಹೊರ ದಬ್ಬಿ, ಗುಡಿಸಲುಗಳನ್ನು ನೆಲಸಮ ಮಾಡಿದರು. ದಿಕ್ಕು ತೋಚದ ಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ನಿರಾಶ್ರಿತೆ ಸುಬ್ಬಲಕ್ಷ್ಮಿ.