ಕೃಷ್ಣ ಎನ್. ಲಮಾಣಿಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಿಂದಾಗಿ ಬಸ್‌ಗಳು ಭರ್ತಿಯಾಗುತ್ತಿವೆ. ಇದರಿಂದ ಜಿಲ್ಲೆಯ ಹಲವು ಮಾರ್ಗಗಳಲ್ಲಿ ಹೆಚ್ಚಿನ ಬಸ್‌ಗಳ ಬೇಡಿಕೆಯೂ ಬಂದಿದೆ. ಹಾಗಾಗಿ ವಿಜಯನಗರ ವಿಭಾಗ 50 ಬಸ್‌ಗಳ ನಿರೀಕ್ಷೆಯಲ್ಲಿದೆ.
2023ರ ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಈ ಯೋಜನೆ ಜಾರಿಯಾದ ಬಳಿಕ ಬಸ್‌ನಲ್ಲಿ ಪ್ರಯಾಣಿಕರ ಓಡಾಟ ಸಂಖ್ಯೆಯಲ್ಲಿ ಶೇ. 30ರಷ್ಟು ಹೆಚ್ಚಳವಾಗಿದೆ. ಆದಾಯ ಕೂಡ ಏರಿಕೆಯಾಗಿದೆ. ಹಾಗಾಗಿ ಹೊಸ ಬಸ್‌ಗಳ ಬೇಡಿಕೆ ಸಹಜವಾಗಿ ಹೆಚ್ಚಿದೆ. ಅದರಲ್ಲೂ ಕೊಪ್ಪಳ, ಹಂಪಿ, ಹುಲಿಗಿ, ಸಂಡೂರು, ಕಂಪ್ಲಿ, ಬಳ್ಳಾರಿ, ಹರಪನಹಳ್ಳಿಯಿಂದ ದಾವಣಗೆರೆ, ಹೂವಿನಹಡಲಿ, ಹಾವೇರಿ, ರಾಣಿಬೆನ್ನೂರು ಮಾರ್ಗಗಳಿಗೂ ಬಸ್‌ಗಳ ಬೇಡಿಕೆ ಹೆಚ್ಚಿದೆ. ಹೊಸಪೇಟೆ ಬಸ್ ನಿಲ್ದಾಣದಿಂದಲೇ ದಿನಕ್ಕೆ ಒಂದು ಲಕ್ಷ ಪ್ರಯಾಣಿಕರು ಬೇರೆಡೆ ಸಂಚರಿಸುತ್ತಿದ್ದಾರೆ. ಹಾಗಾಗಿ ಹೊಸಪೇಟೆಯಿಂದಲೇ ಬೇರೆ ನಗರಗಳಿಗೆ ಹೊಸ ಬಸ್‌ಗಳ ಓಡಾಟ ಕಲ್ಪಿಸಬೇಕಿದೆ. ಹೊಸ ಬಸ್‌ಗಳನ್ನು ನೀಡಿದರೆ ಜಿಲ್ಲೆಯ ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸಬಹುದು ಎಂದು ಹೇಳುತ್ತಾರೆ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕಾರಿಗಳು.ಬಸ್‌ಗಳು ಭರ್ತಿ: ಹಂಪಿ, ಹುಲಿಗಿ, ಸಂಡೂರು, ಕೊಪ್ಪಳ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಭರ್ತಿ ಆಗುತ್ತಿವೆ. ಹೊಸಪೇಟೆ ನಿಲ್ದಾಣದಿಂದ ಈ ಮಾರ್ಗಗಳಿಗೆ ಭಾರೀ ಬೇಡಿಕೆ ಇದೆ. ನಾನ್ ಸ್ಟಾಪ್ ಬಸ್‌ಗಳನ್ನು ಕೂಡ ಹಳ್ಳಿ, ಗ್ರಾಮಗಳಲ್ಲಿ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿಗಿ ಮತ್ತು ಹಂಪಿಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿರುವುದರಿಂದ ಈ ಮಾರ್ಗಗಳ ಬಸ್‌ಗಳು ತುಂಬಿ ತುಳುಕುತ್ತಿವೆ.
ವಿಜಯನಗರ ವಿಭಾಗದಲ್ಲಿ 454 ಬಸ್‌ಗಳು ಇದ್ದು, ಈ ಪೈಕಿ 425 ಬಸ್‌ಗಳನ್ನು ನಿತ್ಯವೂ ಓಡಿಸಲಾಗುತ್ತಿದೆ. 25 ಬಸ್‌ಗಳು ಸಣ್ಣಪುಟ್ಟ ರಿಪೇರಿ ಸೇರಿದಂತೆ ವಿವಿಧ ಸಮಸ್ಯೆಯಿಂದಾಗಿ ಓಡಿಸಲಾಗುತ್ತಿಲ್ಲ. ಈಗ ಮತ್ತೆ 50 ಬಸ್‌ಗಳು ಬಂದರೆ; ಬಸ್‌ಗಳ ಒತ್ತಡವೂ ಕಡಿಮೆ ಆಗಲಿದೆ. ಅಲ್ಲದೇ, ಸಿಬ್ಬಂದಿ ಕೊರತೆಯೂ ಇದೆ. ಅದರಲ್ಲೂ ಚಾಲಕ ಹಾಗೂ ನಿರ್ವಾಹಕರ ಕೊರತೆ ಇದ್ದು, ಹೊಸದಾಗಿ ನೇಮಕ ಮಾಡಿಕೊಂಡವರಿಗೆ ಮಾರ್ಚ್ 10ರೊಳಗೆ ಆದೇಶ ನೀಡುವ ಸಾಧ್ಯತೆ ಇದ್ದು, ವಿಭಾಗಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ್.2.42 ಕೋಟಿ ಮಹಿಳಾ ಪ್ರಯಾಣಿಕರು: ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2,42,76,657 ಮಹಿಳಾ ಪ್ರಯಾಣಿಕರು 2023ರ ಜೂನ್ 11ರಿಂದ 2024ರ ಫೆಬ್ರವರಿ 24ರ ವರೆಗೆ ಪ್ರಯಾಣ ಮಾಡಿದ್ದಾರೆ. ₹88,52,17,900 ವಿಜಯನಗರ ವಿಭಾಗಕ್ಕೆ ಮಹಿಳಾ ಪ್ರಯಾಣಿಕರಿಂದ ಆದಾಯ ಹರಿದುಬಂದಿದೆ. ಶಕ್ತಿ ಯೋಜನೆಯಿಂದ ಶೇ. 30ರಷ್ಟು ಪ್ರಯಾಣಿಕರು ಹೆಚ್ಚಿದ್ದು, ಶೇ. 40ರಷ್ಟು ಆದಾಯ ಕೂಡ ಸಾರಿಗೆ ಇಲಾಖೆಗೆ ಹರಿದುಬಂದಿದೆ. ಈ ಯೋಜನೆಯಡಿಯಲ್ಲಿ 2023ರ ಡಿಸೆಂಬರ್ ತಿಂಗಳೊಂದರಲ್ಲೇ 30,82,136 ಮಹಿಳಾ ಪ್ರಯಾಣಿಕರು ಜಿಲ್ಲೆಯಲ್ಲಿ ಉಚಿತವಾಗಿ ಬಸ್‌ನಲ್ಲಿ ಸಂಚರಿಸಿದ್ದಾರೆ. 2024ರ ಜನವರಿಯಲ್ಲಿ 29,86,881 ಮಹಿಳಾ ಪ್ರಯಾಣಿಕರು ಜಿಲ್ಲೆಯಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಫೆಬ್ರವರಿಯಲ್ಲಿ 29,26,527 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಹೊಸ ಬಸ್‌ಗಳ ಬೇಡಿಕೆ: ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 2,42,76,657 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ₹88,52,17,900 ಆದಾಯ ಬಂದಿದೆ. ಸರ್ಕಾರ ಈ ವೆಚ್ಚ ಭರಿಸುತ್ತಿದೆ. ಬಸ್‌ಗಳು ಭರ್ತಿ ಆಗುತ್ತಿವೆ. ಹೊಸ ಬಸ್‌ಗಳ ಬೇಡಿಕೆ ಇದೆ. ಇನ್ನೂ 50 ಬಸ್‌ಗಳನ್ನು ಹೊಸದಾಗಿ ನೀಡುವ ನಿರೀಕ್ಷೆ ಇದೆ ಎಂದು ವಿಜಯನಗರ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ್ ತಿಳಿಸಿದರು.
ಶೇ. 100 ಯಶಸ್ವಿ: ಶಕ್ತಿ ಯೋಜನೆಗೆ ಭಾರೀ ಬೇಡಿಕೆ ಇದೆ. ಹೊಸಪೇಟೆ ಬಸ್ ನಿಲ್ದಾಣದಲ್ಲೇ ತಿಂಗಳಿಗೆ 7 ಲಕ್ಷ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹಾಗಾಗಿ ಈ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.