ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಪತಿಯ ಕುಡಿತದ ಚಟದಿಂದ ತೀವ್ರವಾಗಿ ನೊಂದ ಈ ಮಹಿಳೆಯು ಆರ್ಥಿಕವಾಗಿ ತಾನೂ ಸ್ವಾವಲಂಬಿಯಾಗಿ
ತನ್ನಂತೆ ತೊಂದರೆಗೆ ಒಳಗಾಗಿರುವ 25ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವಾವಲಂಬಿ ಜೀವನಕಲ್ಪಿಸಿಕೊಡುವ ಮೂಲಕ ಮಹಿಳಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇಲ್ಲಿಯ ಮುರುಘಾಮಠ ಬಳಿಯ ಶಿವಗಂಗಾ ನಗರದ ಶಕುಂತಲಾ ದೊಡಮನಿ ತನ್ನಂತೆ ನೊಂದಿರುವ 25ಮಹಿಳೆಯರಿಗೆ ಕೇಟರಿಂಗ್ ಉದ್ಯೋಗ ಒದಗಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಇಡೀ ಮನೆ ನಿರ್ವಹಣೆ ಕುಟುಂಬದಲ್ಲಿ ಪತಿಯದ್ದೇ ಇರುತ್ತದೆ. ಆದರೆ, ಇಲ್ಲಿ ಎಲ್ಲವೂ ತಿರುವು-ಮುರುವು. ಪತಿ ಸೇರಿದಂತೆ ಇಬ್ಬರು ಮಕ್ಕಳ ಶಿಕ್ಷಣ ಹಾಗೂ ಇಡೀ ಮನೆಯ ನಿರ್ವಹಣೆ 32 ವರ್ಷದ ಶಕುಂತಲಾ ಅವರದ್ದು.
ಕಷ್ಟಗಳೇ ಗೆಲುವಿಗೆ ಮೆಟ್ಟಿಲುಮದುವೆಯಾದ ಹೆಣ್ಣು ಮಗಳು ಗಂಡನ ಮನೆಯಲ್ಲಿ ಏನೆಲ್ಲಾ ಕನಸು ಕಂಡಿರುತ್ತಾಳೆ. ಆದರೆ, ಶಕುಂತಲಾ ಬಾಳಿನಲ್ಲಿ ಆ ಯಾವ ಕನಸುಗಳಿಗೆ ಜಾಗವಿರಲಿಲ್ಲ. ನಿತ್ಯ ಕುಡಿದು ಬಂದು ಗಲಾಟೆ ಮಾಡುವ ಗಂಡನನ್ನು ಕಟ್ಟಿಕೊಂಡ ಶಕುಂತಲಾ ಬೇಸತ್ತು ಒಂದು ಬಾರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೂ ಯತ್ನಿಳಿಸಿದ್ದಳು. ಅದೃಷ್ಟವಶಾತ್ ಬದುಕಿ ನಂತರದಲ್ಲಿ ಮಾನಸಿಕವಾಗಿ ಗಟ್ಟಿಯಾಗಿ ಇದೀಗ ಸಮಾಜಕ್ಕೆ ಮಾದರಿಯಾಗಿದ್ದಾರೆ.ಜೀವನದಲ್ಲಿ ಬರುವ ಕಷ್ಟಗಳನ್ನೇ ತನ್ನ ಸ್ವಾವಲಂಬಿ ಜೀವನಕ್ಕೆ ಮೆಟ್ಟಿಲು ಮಾಡಿಕೊಂಡ ಶಕುಂತಲಾ ತನ್ನದೇ ಆದ ಕೇಟರಿಂಗ್ (ಮದುವೆ-ಸಭೆ ಸಮಾರಂಭಗಳಲ್ಲಿ ಅಡುಗೆ ಮಾಡುವ ಹಾಗೂ ನೀಡುವ) ತಂಡ ಕಟ್ಟಿಕೊಂಡು ತನ್ನ ಕುಟುಂಬದ ಆರ್ಥಿಕ ಸಬಲತೆಯನ್ನು ಗಟ್ಟಿಗೊಳಿಸಿದ್ದಾರೆ.ಆರಂಭದಲ್ಲಿ ಸಭೆ-ಸಮಾರಂಭಗಳಲ್ಲಿ ಊಟ ನೀಡವ ಕಾರ್ಯ ಮಾಡಿದ ಶಕುಂತಲಾ ಇದೀಗ ಅಕ್ಕನ ಬಳಗ ಎಂಬ ಕಲ್ಯಾಣ ಮಂಟಪದಲ್ಲಿ ಕಾಯಂ ಕೇಟರಿಂಗ್ ಕಾರ್ಯ ಮಾಡುತ್ತಿದ್ದಾರೆ. ಮದುವೆ ಇಲ್ಲದೇ ಇರುವಾಗ ತನ್ನದೇ ಆದ ಸ್ತ್ರೀ ಶಕ್ತಿ ಸಂಘವನ್ನು ಕಟ್ಟಿಕೊಂಡಿರುವ ಶಕುಂತಲಾ ಅವರು ಸಂಘದ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಸಾರ್ಥಕ ಭಾವನೆತನ್ನ ಸಂಕಷ್ಟದ ಕಾಲದಲ್ಲಿ ಬೇರೆ ಬೇರೆಡೆ ಕೆಲಸಕ್ಕೆ ಅವಕಾಶವಿದ್ದವು. ಆದರೆ, ಮನೆ ನಿರ್ವಹಣೆ ಮಾಡುತ್ತಲೇ ಕೆಲಸ ಮಾಡುವುದು ಕಷ್ಟ. ಆದ್ದರಿಂದ ಸ್ವತಂತ್ರವಾಗಿ ನಾವೇ ತಂಡ ಕಟ್ಟಿಕೊಂಡು ಮಾಡುವ ಕೇಟರಿಂಗ್ ಕಾರ್ಯ ಆಯ್ಕೆ ಮಾಡಿ ಅದರಲ್ಲಿಯೇ ಈಗ ಯಶಸ್ವಿಯಾಗಿದ್ದೇನೆ. ನಾನೂ ಬೆಳೆಯುವುದಲ್ಲದೇ ಓಣಿಯ 20ಕ್ಕೂ ಹೆಚ್ಚು ಬಡ ಮಕ್ಕಳಿಗೂ ಆಸರೆಯಾಗಿದ್ದೇನೆ ಎಂಬ ಸಾರ್ಥಕ ಭಾವನೆ ನನ್ನದು. ಪ್ರತಿ ತಿಂಗಳು 20 - 25 ಸಾವಿರ ದುಡಿಯುತ್ತಿದ್ದೇನೆ. ಮಕ್ಕಳಿಗೋಸ್ಕರ ನಾನು ದುಡಿಯುತ್ತಿದ್ದು ಅವರಿಗೆ ಉತ್ತಮ ಶಿಕ್ಷಣ ದೊರತರೆ ಒಳ್ಳೆಯ ಉದ್ಯೋಗ ಪಡೆದು ಉತ್ತಮ ಜೀವನ ನಡೆಸಬೇಕು ಎಂಬುದು ನನ್ನಾಸೆ. ಇಂತಹ ಸಂದರ್ಭದಲ್ಲಿ ಬರೀ ಪತಿಯನ್ನೇ ಬೈಯುತ್ತಾ ಕೂರುವ ಬದಲು ಸ್ವಾವಲಂಬಿ ಜೀವನ ಸಾಗಿಸಿದರೆ ಮಹಿಳೆಗೆ ಯಾವ ಸಂಕಷ್ಟಗಳೂ ಇಲ್ಲ.
ಉತ್ತಮ ಶಿಕ್ಷಣ ನೀಡಿಎಲ್ಲ ಪಾಲಕರು ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ಮದುವೆ ಮಾಡಿ ಗಂಡನ ಮನೆಗೆ ತಳ್ಳುವ ಕೆಲಸ ಮಾಡದೇ ಅವಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು. ಗಂಡು ಮಕ್ಕಳಂತೆ ಅವರನ್ನು ಹೊರ ಪ್ರಪಂಚಕ್ಕೆ ಒಯ್ಯಬೇಕು. ಆಗ, ಮುಂದಿನ ದಿನಗಳಲ್ಲಿ ಎದುರಾಗುವ ಸಂಕಷ್ಟಗಳನ್ನು ಆಕೆ ಸಮರ್ಥವಾಗಿ ಎದುರಿಸಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು.-ಶಕುಂತಲಾ ದೊಡಮನಿ