ಕನ್ನಡಪ್ರಭ ವಾರ್ತೆ, ಭದ್ರಾವತಿ
ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಸಿದ್ಧಾಂತಗಳನ್ನು ರೂಢಿಸಿಕೊಂಡು ಪ್ರಜಾಪ್ರಭುತ್ವದ ಆಶಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಸಮರ್ಥ ನಾಯಕರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮಾತುಗಳನ್ನು ಆಲಿಸಲು ಬಹಳಷ್ಟು ಜನರು ಸೇರುತ್ತಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.ನಗರದ ಲಯನ್ಸ್ ಕ್ಲಬ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜೆಗಳಂತೆಯೇ ರಾಜಕಾರಣಿಗಳಿಗೂ ಜವಾಬ್ದಾರಿಗಳಿವೆ ಎಂಬುದನ್ನು ತಿಳಿಸಿದ ರಾಜಕಾರಣಿ ಗೋಪಾಲಗೌಡರು. ಇಂದಿನ ತಲೆಮಾರಿಗೆ ಅವರ ಜೀವನ ಒಂದು ಕಥೆ ಅನಿಸಬಹುದು. ಆದರೆ, ಅವರ ಜೀವನ, ಆದರ್ಶಗಳು ಮುಂದಿನ ಪೀಳಿಗೆಗೆ ಮಾದರಿಯಾಗಿವೆ. ಬದುಕಿದ್ದು 49 ವರ್ಷವಾದರೂ ಅವರ ಸಾಧನೆ ಬಹಳಷ್ಟು ಎಂದರು.ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಗಣಪತಿ ಬಿ. ಉಪನ್ಯಾಸ ನೀಡಿದರು. ಪರಿಷತ್ತು ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್. ರಾಜೇಶ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷೆ ಎಂ.ಎಸ್. ಸುಧಾಮಣಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಎಂ.ಆರ್. ರೇವಣಪ್ಪ ಇನ್ನಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸುಮತಿ ಕಾರಂತ್, ಕೋಕಿಲ ತಂಡದವರು ನಾಡಗೀಡೆ ಹಾಡಿದರು. ಎಚ್.ತಿಮ್ಮಪ್ಪ ನಿರೂಪಿದರು.
- - -ಕೋಟ್ ಗೋಪಾಲಗೌಡರು ಸಮಾಜವಾದದ ಪ್ರಜ್ವಲಿಸುವ ಕಿಡಿಯಾಗಿದ್ದರು. ಅವರು ಅನೇಕ ಮೌಲ್ಯಗಳನ್ನು ಬಿಟ್ಟುಹೋದ ಸಾಧಕ. ಶಾಂತವೇರಿಯವರ ಭಾಷಣ ಕೇಳಿದ ಬ್ರಿಟಿಷರು ಅವರನ್ನು ಕೊಲ್ಲಲು ನಿರ್ಧರಿಸಿದ್ದರು. ಆದರೆ, ಜಾಣ್ಮೆಯಿಂದ ತಪ್ಪಿಸಿಕೊಂಡು ಜನರನ್ನು ಸಂಘಟಿಸಿದ ಯಶಸ್ವಿ ನಾಯಕ
- ಡಿ.ಮಂಜುನಾಥ್, ಜಿಲ್ಲಾಧ್ಯಕ್ಷ, ಕಸಾಪ- - - -ಡಿ16-ಬಿಡಿವಿಟಿ1:ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು.