ಶಾಂತಿನಾಥರ ಮಸ್ತಕಾಭಿಷೇಕ ಜಾತ್ರೆಯಾಗಬೇಕು: ಶ್ರವಣಬೆಳಗೂಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

KannadaprabhaNewsNetwork | Published : Jan 30, 2024 2:06 AM

ಸಾರಾಂಶ

ಹಳೇಬೀಡಿನ ಬಸ್ತಿಹಳ್ಳಿಯ ಶಾಂತಿನಾಥ ಸ್ವಾಮಿಯ ಮಸ್ತಕಾಭಿಷೇಕ ಮುಂದಿನ ವರ್ಷದಿಂದ ಮತ್ತಷ್ಟು ವೈಭವದಿಂದ ನಡೆಯಲಿದೆ. ಮಸ್ತಕಾಭಿಷೇಕದ ಅಂಗವಾಗಿ ಆರಾಧನೆ, ಗ್ರಾಮದಲ್ಲಿ ಉತ್ಸವವನ್ನು ನಡೆಸಬೇಕು. ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಊರಿನ ಜಾತ್ರೆಯಂತಾಗಬೇಕು ಎಂದು ಶ್ರವಣಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಧಾರ್ಮಿಕ ಸಭೆಯಲ್ಲಿ ಸ್ವಾಮೀಇ ಮಾತು

ಕನ್ನಡಪ್ರಭ ವಾರ್ತೆ ಹಳೇಬೀಡು

ಬಸ್ತಿಹಳ್ಳಿಯ ಶಾಂತಿನಾಥ ಸ್ವಾಮಿಯ ಮಸ್ತಕಾಭಿಷೇಕ ಮುಂದಿನ ವರ್ಷದಿಂದ ಮತ್ತಷ್ಟು ವೈಭವದಿಂದ ನಡೆಯಲಿದೆ. ಮಸ್ತಕಾಭಿಷೇಕದ ಅಂಗವಾಗಿ ಆರಾಧನೆ, ಗ್ರಾಮದಲ್ಲಿ ಉತ್ಸವವನ್ನು ನಡೆಸಬೇಕು. ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಊರಿನ ಜಾತ್ರೆಯಂತಾಗಬೇಕು ಎಂದು ಶ್ರವಣಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಹಳೇಬೀಡಿನ ಬಸ್ತಿಹಳ್ಳಿಯ ಜಿನಮಂದಿರದಲ್ಲಿ ಭಾನುವಾರ ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಶಾಂತಿನಾಥರರನ್ನು ಅರಾಧಿಸುವುದರಿಂದ ರೋಗಗಳು ಸುಳಿಯುವುದಿಲ್ಲ. ಶಾಂತಿನಾಥರ ಸ್ಮರಣೆಯಿಂದ ಮಾನಸಿಕ ನೆಮ್ಮದಿಯೊಂದಿಗೆ, ಆರೋಗ್ಯಕರವಾಗಿ ಬದುಕಬಹುದು. ಹೊಯ್ಸಳರು ಹಳೇಬೀಡಿನಲ್ಲಿ ನಿರ್ಮಿಸಿದ ೧೩ ಬಸದಿಗಳ ಪೈಕಿ ಈಗ ಮೂರು ಬಸದಿಗಳು ಉಳಿದಿವೆ. ಬಸದಿಗಳಲ್ಲಿ ಪೂಜಾ ಕಾರ್ಯ ನಿರಂತರವಾಗಿರಬೇಕು. ಬಸದಿಗಳು ಅಭೂತಪೂರ್ವವಾಗಿವೆ. ಶಾಂತಿ, ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.

ಹಾಸನ ಜೈನ ಸಮಾಜ ಅಧ್ಯಕ್ಷ ಶಾಂತೀಶ್, ರಾಜೀವ್ ಅಯುರ್ವೇದ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್, ಮಾಜಿ ಅಧ್ಯಕ್ಷ ಎಂ.ಅಜಿತ್ ಕುಮಾರ್, ಜೈನ ವಿದ್ವಾಂಸ ವೀರೇಂದ್ರ ಬೇಗೂರು. ದಿಗಂಬರ ಜೈನ ಯುವಕ ಸಂಘದ ಅಧ್ಯಕ್ಷ ನಾಗರಾಜು.ಎಚ್.ಪಿ, ಕಾರ್ಯದರ್ಶಿ ದೇವನಾಗು, ಸದಸ್ಯರಾದ ಅಮೃತ್.ಎ, ಧನುಶ್, ಸಮಂತ್, ಶ್ರೇಯಸ್, ಸನ್ಮತಿ, ಸ್ಥವನ್ ಭಾಗವಹಿಸಿದ್ದರು. ಶೃತಿ ಧನುಷ್ ನಿರೂಪಿಸಿದರು.

ಶಾಂತಿನಾಥ ಸ್ವಾಮಿಯ ವೈಭವದ ಮಸ್ತಕಾಭಿಷೇಕ:

ಪ್ರತಿಷ್ಟಾಚಾರ್ಯರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಾನದೊಂದಿಗೆ ನಡೆದ ಮಸ್ತಕಾಭಿಷೇಕದಲ್ಲಿ ಮುಗಿಲು ಮುಟ್ಟುವಂತೆ ಪುರೋಹಿತರ ಮಂತ್ರಘೋಷ ಕೇಳಿಬಂತು. ತೀರ್ಥಂಕಕರ ಮೂರ್ತಿಗೆ ದ್ರವ್ಯಗಳಿಂದ ಅಭಿಷೇಕ ನೆರವೇರಿದಾಗ ಭಕ್ತರಿಂದ ಗಟ್ಟಿ ಧ್ವನಿಯಲ್ಲಿ ಹರ್ಷೋದ್ಗಾರ ಕೇಳಿ ಬಂತು. ಶಾಂತಿನಾಥ ಭಗವಾನ್ ಕೀ ಜೈ. ವಿಶ್ವಧರ್ಮಕೀ ಜೈ, ಅಹಿಂಸೋ ಪರಮೋ ಧರ್ಮಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟುವಂತೆ ಮೊಳಗಿತ್ತು.

ಮಹಿಳೆಯರು ಸುಮದುರ ಕಂಠದಿಂದ ಸುಶ್ರಾವ್ಯವಾಗಿ ಜಿನ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಶ್ರವಣಬೆಳಗೂಳ ಜೈನಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ವಿವಿಧ ದ್ರವ್ಯಗಳಿಂದ ಅಭಿಷೇಕ ಆರಂಭವಾದ ತಕ್ಷಣ ನೆರದಿದ್ದ ಭಕ್ತರು ಕೈಜೋಡಿಸಿ ನಮಿಸಿದರು. ೧೦೮ ಕಳಶಗಳಿಂದ ಜಲಾಭಿಷೇಕ ಮಾಡಿದಾಕ್ಷಣ ಮಂದಸ್ಮಿತ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ನಂತರ ಎಳನೀರು, ಕ್ಷೀರ (ಹಾಲು), ಕಬ್ಬಿನಹಾಲು, ಚತುಷ್ಕೋನ (ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ) ಕಳಸ, ಶ್ರೀಗಂಧ, ಅರಿಸಿನ, ಕಲ್ಕಚೂರ್ಣ (ಅಕ್ಕಿಹಿಟ್ಟು), ಚಂದನ, ಕಷಾಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಜಗತ್ತಿನ ಸಕಲ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ದೊರಕಲಿ ಎಂದು ಮಹಾಶಾಂತಿ ಮಂತ್ರದೊಂದಿಗೆ ಶಾಂತಿನಾಥ ಮೂರ್ತಿಗೆ ಶಾಂತಿಧಾರೆ ನೆರವೇರಿತು.

ಕೊನೆಯಲ್ಲಿ ಪುಷ್ಪವೃಷ್ಟಿಯೊಂದಿಗೆ ಕನಕಾಭೀಷೇಕ (ನಾಣ್ಯ) ನಡೆಯಿತು. ವಿವಿಧ ದ್ರವ್ಯಗಳು ಶಾಂತಿನಾಥ ಮೂರ್ತಿಯ ಮಸ್ತಕದಿಂದ ಮುಖಕ್ಕೆ ಇಳಿದಾಗ ಮುಖದ ಭಾವನೆಗಳು ವಿಭಿನ್ನವಾಗಿ ಕಂಗೊಳಿಸಿತು. ಸ್ನಿಗ್ಧ ಮೂರ್ತಿಯ ನಗಮುಖದಲ್ಲಿ ಕಂಗೊಳಿಸುತ್ತಿದೆ ಎಂಬ ಮಾತು ನೆರದಿದ್ದ ಭಕ್ತರಿಂದ ಕೇಳಿ ಬಂತು. ಬಸ್ತಿಹಳ್ಳಿಯ ಜಿನಮಂದಿರದಲ್ಲಿ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಅಭಿಷೇಕ ಮಾಡಲಾಯಿತು.ಹಳೇಬೀಡಿನ ಬಸ್ತಿಹಳ್ಳಿಯ ಜಿನಮಂದಿರದಲ್ಲಿ ಶ್ರವಣಬೆಳಗೂಳ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಪ್ರವಚನ ನೀಡಿದರು.

Share this article