ಶೇಷಮೂರ್ತಿ ಅವಧಾನಿ
ಕಲಬುರಗಿಗೆ ಕಮೀಶ್ನರೇಟ್ ಬಂತು, ಮೊದ್ಲು ಒಬ್ರೇ ಐಪಿಎಸ್ (ಎಸ್ಪಿ) ಅಧಿಕಾರಿ ಇದ್ದ ಕಡೆ ನಾಲ್ಕಾರು ಮಂದಿ ಐಪಿಎಸ್ ಅಧಿಕಾರಿಗಳು ಬಂದ್ರೂ ಕ್ರೈಂಗಳು ಕಮ್ಮಿ ಆಗಲಿಲ್ಲ, ಕಳವು, ಸುಲಿಗೆಗಳಿಗೂ ನಿರೀಕ್ಷಿತ ಮೂಗುದಾರ ಬೀಳಲಿಲ್ಲ, ದಶಕ ಗತಿಸಿದರೂ ಜನಸ್ನೇಹಿ ಪೊಲೀಸಿಂಗ್ ಇಲ್ಲಿನ್ನೂ ಕನಸಿನ ಮಾತು, ಇಲ್ಲಿನ ಪೊಲೀಸ್ರು ವಿಐಪಿಗಳು, ಮಂತ್ರಿಗಳು ಬಂದಾಗ ಸುತ್ತಮುತ್ತ ಕಾಣ್ತಾರ, ರಾತ್ರಿ ಗಸ್ತು ಅಷ್ಟಕ್ಕಷ್ಟೆ, ಸಿಟಿ ಟ್ರಾಫಿಕ್ ಬಗ್ಗೆ ಮಾತಾಡೋದೇ ಬೇಡ....
ಕಲಬುರಗಿ ಮಹಾ ನಗರಕ್ಕೆ ಕಮೀಶ್ನರೇಟ್ ಕಾಲಿಟ್ಟು ದಶಕ ಸಮೀಪಿಸಿದರೂ ಇಲ್ಲಿನ್ನು ನಿರೀಕ್ಷಿತ ಮಟ್ಟದಲ್ಲಿ ಜನಸ್ನೇಹಿ ಪೊಲೀಸಿಂಗ್ ನಡೆಯುತ್ತಿಲ್ಲ ಎನ್ನುವುದೇ ನಗರ ವಾಸಿಗಳ ಬೇಸರವಾಗಿದೆ. ಅದಕ್ಕೇ ಅವರೆಲ್ಲರೂ ಕಮೀಶ್ನರೇಟ್ ಬಂದ್ರೂ ಪೊಲೀಸಿಂಗ್ ಅದೆಲ್ಲಿ ಸುಧಾರಿಸಿದೆ ಹೇಳಿ? ಎಂದು ಪಾಟೀಸವಾಲು ಹಾಕುತ್ತ ತಮ್ಮದೇ ಆದ ಸೈಲಿಯಲ್ಲಿ ಮೇಲಿನಂತೆ ಮೌಲ್ಯಮಾಪನ ಮಾಡುತ್ತಿದ್ದಾರೆ.ಕಲಬುರಗಿ ಕಥೆ ಇಷ್ಟೇ ಬಿಡಿ, ಯಾರ ಬಂದ್ರೂ ಅಷ್ಟೇ, ಇಲ್ಲಿನ ಪೊಲೀಸಿಂಗ್, ಟೆರಿಫಿಕ್ ಟ್ರಾಫಿಕ್‌ನಲ್ಲಿ ಸುಧಾರಣೆ ಕನಸಿನ ಮಾತು ಎಂದು ಜನ ಬೇಸರಿಸುತ್ತಿರುವಾಗಲೇ ಕಲಬುರಗಿ ನಗರ ನೂತನ ಪೊಲೀಸ್ ಕಮಿಷನರ್ ಆಗಿ 2009ನೇ ವೃಂದದ ಐಪಿಎಸ್ ಅಧಿಕಾರಿ ಡಾ. ಶರಣಪ್ಪ ಢಗೆ ಆಗಮಿಸಿದ್ದಾರೆ.
ತಮ್ಮ ಒಂದೂವರೆ ದಶಕದ ಪೊಲೀಸ್ ಅಧಿಕಾರಿ ಸೇವಾ ಅವಧಿಯಲ್ಲಿ ಇದೇ ಮೊದಲ ಬಾರಿಗೆ ತವರು ಜಿಲ್ಲೆ, ತಾವು ಪದವಿ ಓದಿದ ಕಲಬುರಗಿ ನಗರಕ್ಕೇ ಪೊಲೀಸ್ ಕಮೀಶ್ನರ್ ಆಗಿ ಅಧಿಕಾರ ವಹಿಸಿಕೊಂಡಿರೋದರಿಂದ ಇವರ ಮೇಲೆ ನಗರವಾಸಿಗಳ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿವೆ.
ಮುಂಚೆ ಪರವಾಗಿಲ್ಲ ಎಂಬಂತಿದ್ದ ರಾತ್ರಿ ಗಸ್ತು, ಹಗಲಿನ ಪೊಲೀಸ್ ಬೀಟ್‌ಗಳು ಈಗ ನೆನಪಷ್ಟೆ, ಅದನ್ನೆಲ್ಲ ಕಂಡವರು ನಗರ ವಾಸಿಗಳು ಈಗ ಪೊಲೀಸರಂದ್ರೆ ವಿಐಪಿಗಳ ಸಂಚಾರದಲ್ಲಿ ಕಾಣುತ್ತೇವಷ್ಟೆ ಎಂದು ಹಳಹಳಿಸುತ್ತಿದ್ದಾರೆ.
ಉಡ್ತಾ ಕಲಬುರಗಿಗೆ ಮೂಗುದಾರ ಹಾಕೋರ್ಯಾರು!
ಸುಗಮ ಸಂಚಾರ ಕನಸಿನ ಮಾತು!
ಪಾರ್ಕಿಂಗ್ ಸಮಸ್ಯೆಗಿಲ್ಲ ಪರಿಹಾರ
ಭಾರಿ ವಾಹನಗಳಿಂದ ಅಪಘಾತ
ನಗರದಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಎಂದು ನಗರವಾಸಿಗಳು ಆಗ್ರಹಿಸಿದರೂ ಯಾರೂ ಕೇಳುತ್ತಿಲ್ಲ. ರಾಮ ಮಂದಿರ ವೃತ್ತ, ಹೀರಾಪೂರ ವೃತ್ತ, ಅಫಜಲ್ಪುರ ರೇಲ್ವೆ ಮೇಲ್ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಸಾಕಷ್ಟು ಅಪಘಾತಗಳಾಗುತ್ತಿವೆ. ಈ ರಸ್ತೆಗಳಿಂದ ವಾಹನಗಳು ನಗರ ಪ್ರವೇಶವಾಗೋದನ್ನ ತಡೆಯಬೇಕು ಎಂಬುದು ಜನಾಗ್ರಹವಾದರೂ ಅದ್ಯಾಕೋ ಪೊಲೀಸರು ಇದಕ್ಕಿನ್ನು ಸಹಮತ ನೀಡುತ್ತಿಲ್ಲ. ಈ ಕಮೀಶ್ನರ್ ಅವರಾದ್ರೂ ಇದನ್ನು ಗಮನಿಸಿ ಭಾರಿ ವಾಹನ ಸಂಚಾರಕ್ಕೆ ಬ್ರೆಕ್ ಹಾಕಿ ಜನರ ಜೀವ ಕಾಪಾಡುವರೆ ಕಾದು ನೋಡಬೇಕಿದೆ.ಕಮೀಶ್ನರ್ ಸಾಹೇಬರು ನಗರ ಪ್ರದಕ್ಷಿಣೆ ಮಾಡ್ಲಿ
ಕಲಬುರಗಿ ಕಾಡುತ್ತಿರೋ ಸಮಸ್ಯೆಗಳು ಹಲವು, ಕಮೀಶ್ನರ್ ಸಾಹೇಬರು ನಗರ ಪದಕ್ಷಿಣೆ ಹಾಕಲಿ, ಸಂಚಾರ ಸಂಚಕಾರ, ದಟ್ಟಣೆ, ವಾಹನ ಸವಾರರ ಪರದಾಟ, ಪಾದಚಾರಿಗಳ ಗೋಳು ಇತ್ಯಾದಿ ಗೊತ್ತಾಗುತ್ತದೆ. ಚೆಂಬರ್‌ನಲ್ಲೇ ಕುಳಿತರಾಗದು ಎಂದು ಜನರು ತಮ್ಮನ್ನೆಲ್ಲ ಮುತ್ತಿಕೊಂಡಿರೋ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಾದರೆ ಖಉದ್ದು ಕಮೀಶ್ನರ್ ಅವರೇ ನಗರ ಪ್ರದಕ್ಷಿಣೆ ಮಾಡಿ ವಾಸ್ತವ ಸಂಗತಿಗಳನ್ನು ಖುದ್ದು ಗ್ರಹಿಸಿ ಪರಿಹಾರ ಸೂಚಿಸಲಿ ಎಂದು ಆಗ್ರಹಿಸುತ್ತಿದ್ದಾರೆ.ಕಮೀಶ್ನರ್ ಮೇಲೆ ನಗರವಾಸಿಗಳ ಹೆಚ್ಚಿದ ನಿರೀಕ್ಷೆ
ಡಾ. ಶರಣಪ್ಪ ಕಲಬುರಗಿಯಲ್ಲಿದ್ದು ಓದಿ ಐಪಿಎಸ್ ಆದವರು. ಮೇಲಾಗಿ ಆಳಂದದ ಖಜೂರಿ ಊರವರು. ನಮ್ಮವರು ಅಧಿಕಾರಿಯಾಗಿ ತಮ್ಮೂರಿಗೆ ಕರ್ತವ್ಯದ ಮೇಲೆ ಬಂದಿದ್ದಾರೆ. ನಮ್ಮ ನಿರೀಕ್ಷೆಗಳು ತುಂಬಾ ಇವೆ ಎಂದು ಜನರೇ ಹೇಳುತ್ತಿದ್ದಾರೆ. ಶರಣಪ್ಪ ಅವರು ಮನಸ್ಸು ಮಾಡಿದರೆ ಸಾಕಷ್ಟು ಜನಪರ ಸುಧಾರಣೆಗಳನ್ನಿಲ್ಲಿ ಮಾಡಬಹುದು. ಅಧಿಕಾರವಂತೂ ಸ್ವೀಕರಿಸಿದ್ದಾರೆ, ಮುಂದೆ ಅದ್ಹೇಗೆ ಕಾರ್ಯನಿರ್ವಹಿಸುವರೋ ಎಂಬುದನ್ನು ಕಾದು ನೋಡೋಣವೆಂದು ಕಮೀಶ್ನರ್ ಅವರ ಕಾರ್ವೈಖರಿಗೆ ಭೂತಗನ್ನಡಿ ಹಿಡಿಯೋ ತವಕದಲ್ಲಿದ್ದಾರೆ.