ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಿಲ್ಲಿ ಪ್ರಕರಣ ಎನ್ನುವ ಶರಣಪ್ರಕಾಶ್ ಪಾಟೀಲ್ ಒಬ್ಬ ಸಿಲ್ಲಿ ಮಂತ್ರಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.ಶಿವಮೊಗ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರನ್ನು ಕೂಡಲೇ ಮಂತ್ರಿ ಮಂಡಲದಿಂದ ಕೈಬಿಡಬೇಕು ಎಂದು ಹರಿಹಾಯ್ದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ ಖರ್ಗೆ ಈ ಘೋಷಣೆಯನ್ನೇ ಕೂಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಸತ್ಯ ಎಂಬ ವರದಿ ಬಂದಿದೆ. ಈ ವಿಡಿಯೋವನ್ನು ತಿರುಚಿಲ್ಲ ಎಂದು ಹೇಳಲಾಗಿದೆ. ರಾಷ್ಟ್ರದ್ರೋಹಿಗಳಿಗೆ ಬೆಂಬಲ ನೀಡಿದ್ದಕ್ಕಾಗಿ ಈ ಮೂವರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇವರ್ಯಾರು ರಾಜೀನಾಮೆ ನೀಡುವುದಿಲ್ಲ. ಕೊನೆಪಕ್ಷ ರಾಜ್ಯದ ಜನತೆ ಕ್ಷಮೆಯನ್ನು ಕೇಳಲಿ ಎಂದು ಚಾಟಿ ಬೀಸಿದರು.ರಾಜ್ಯದ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿ ಸದಾ ರಾಷ್ಟ್ರದ್ರೋಹಿ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸುತ್ತದೆ. ದೇಶದಲ್ಲಿ ಶಾಂತಿ- ನೆಮ್ಮದಿ ಇರಬೇಕು ದೇಶವನ್ನು ಉಳಿಸಬೇಕು ಎಂಬ ಸಿದ್ಧಾಂತವನ್ನು ಬಿಜೆಪಿ ಹೊಂದಿದೆ. ಕೇವಲ ಅಧಿಕಾರಕ್ಕಾಗಿ ಮಾತ್ರ ಬಿಜೆಪಿ ಇಲ್ಲ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ₹50 ಕೋಟಿ ಆಫರ್ ಮಾಡಿದ್ದಾರೆಂದರೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಬಿಜೆಪಿ ಶಾಸಕರಿಗೂ ₹50 ಕೋಟಿ ಆಫರ್ ಮಾಡಿದ್ದಾರೆ ಎಂದಿದ್ದೇನೆ. ಹಾಗಂತ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ₹50 ಕೋಟಿ ತೆಗೆದುಕೊಂಡಿದ್ದಾರೆಂದು ಎಂದು ಎಲ್ಲೂ ಹೇಳಿಲ್ಲ. ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬ ಗಾದೆಯಂತೆ ಹೇಳಿಕೆ ನೀಡಿದ್ದಾರೆ. ನನ್ನ ವಿರುದ್ಧದ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿದ್ದೇನೆ. ಇದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಕುಟಕಿದರು.- - -
ಕೋಟ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಈಗಾಗಲೇ ದೇಶದಲ್ಲಿ 195 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳ ಘೋಷಣೆ ಆಗಲಿದೆ. ರಾಜ್ಯದಲ್ಲಿ ಈ ಬಾರಿ ಹೊಸಬರಿಗೂ ಕೂಡ ಅವಕಾಶ ನೀಡಲಾಗುತ್ತದೆ- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
- - - -4ಎಸ್‌ಎಂಜಿಕೆಪಿ03: ಕೆ.ಎಸ್.ಈಶ್ವರಪ್ಪ