ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶರಣು ಶರಣೆಂದವರಿಗೆ ಮರಣವಿಲ್ಲ ಎಂದು ಗುರುಮಠಕಲ್ ಖಾಸಾ ಮುರುಘಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.ಮುರುಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ- 2025 ಅಂಗವಾಗಿ ಶುಕ್ರವಾರ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡಿ, ಭಾರತದ ಪರಂಪರೆಯಲ್ಲಿ ಅನೇಕ ಮುನಿಗಳು ಇದ್ದರೂ ಶರಣರು ಸರಳ ಸುಂದರವಾದ ಸಹಜ ಶಿವಯೋಗದ ಮೂಲಕ ಸರಳವಾದ ಜೀವನವನ್ನು ನಡೆಸುತ್ತಿದ್ದರು. ನಾವು ಹೇಗಿದ್ದೇವೆಯೋ ಹಾಗೇ ಬದುಕುವುದೇ ಸರಳ ಜೀವನವಾಗಿದ್ದು ಇದರಲ್ಲಿ ಆಡಂಬರ, ಢಾಂಬಿಕತೆ ಇಲ್ಲ. ಸಹಜ ಶಿವಯೋಗವನ್ನು ಮೊಟ್ಟಮೊದಲ ಬಾರಿಗೆ ಹೊರ ಜಗತ್ತಿಗೆ ಸಾರ್ವತ್ರಿಕವಾಗಿ ಪರಿಚಯಿಸಿದ ಮಠವೇ ಚಿತ್ರದುರ್ಗದ ಮುರುಘಾಮಠವಾಗಿದೆ ಎಂದರು.
ಸಹಜ ಶಿವಯೋಗವನ್ನು ಅಕ್ಕಮಹಾದೇವಿಯು ಹೇಳುವಂತೆ ಉದಯಕಾಲ ಸಮಯದಿಂದ ಮರಣದವರೆಗೆ ಮಾಡಬೇಕು. ಏಕಾಗ್ರತೆ ಇಲ್ಲದೆ ಸಾಧನೆ ಮಾಡಲು ಸಾಧ್ಯವಿಲ್ಲ. ಆಯುಷ್ಯವೆಂಬ ರಾಶಿಯನ್ನು ಅಳತೆ ಮಾಡಲಾಗುತ್ತಿದೆ. ಪ್ರತಿನಿತ್ಯ ಸಮಯ ಕಳೆದುಕೊಂಡು ಸಾವಿನ ಸಮೀಪ ಹೋಗುತ್ತಿದ್ದೇವೆ. ಏನನ್ನು ಮರೆತರೂ ಪರವಾಗಿಲ್ಲ ಸಾವು ಬರುತ್ತದೆ ಎಂಬುದನ್ನು ನೆನಪಿಸಿಕೊಂಡು ಶಿವಾನುಭಾವವನ್ನು ಮೂಡಿಸಿಕೊಳ್ಳಬೇಕು. ಆಯುಷ್ಯವೆಂಬ ಹೊತ್ತನ್ನು ಪಡೆದರೆ ಲಿಂಗ ಪೂಜೆ ಮಾಡಲು ಅವಕಾಶವಿರುತ್ತದೆ. ಯಾರು ಚಿರಂಜೀವಿಗಳಲ್ಲ. ಶಿವಯೋಗವನ್ನು ಮಾಡುವ ಮೂಲಕ ಜೀವನದಲ್ಲಿ ಆಯುಷ್ಯನ್ನು ಪಡೆಯೋಣ ಎಂದರುಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.
ಬೇಲೂರು ಶ್ರೀ ಗುರು ಬಸವೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಉಳವಿ ಚನ್ನಬಸವೇಶ್ವರ ಮಹಾಮಠದ ಬಸವಲಿಂಗ ಸ್ವಾಮೀಜಿ, ಶಿಕಾರಿಪುರದವಿರಕ್ತ ಮಠದ ಚನ್ನಬಸವ ಸ್ವಾಮೀಜಿ, ಕಲ್ಯಾಣಪುರದ ಕಲ್ಯಾಣ ಬಸವೇಶ್ವರಮಠದ ಮಾತೆ ಚಿನ್ಮಯಿತಾಯಿ ಸಾನ್ನಿಧ್ಯ ವಹಿಸಿದ್ದರು.ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಧರ್ಮಣ್ಣ ಹಾಜರಿದ್ದರು. ಉಮೇಶ್ ಪತ್ತಾರ್ ಸಂಗಡಿಗರು ವಚನ ಪ್ರಾರ್ಥಿಸಿ, ಸಿ ಎಂ ಚಂದ್ರಪ್ಪ ಸ್ವಾಗತಿಸಿ, ಪಿ ಟಿ ಜ್ಞಾನಮೂರ್ತಿ ನಿರೂಪಿಸಿದರು. ಎಸ್.ಜೆ.ಎಂ.ಐಟಿಐ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಿದರು.