ಶಿವಮೊಗ್ಗ: ಶರಾವತಿ ನದಿ ಕಣಿವೆ ಕೊಳ್ಳದಲ್ಲಿ ಜಾರಿ ಮಾಡಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮತ್ತು ಶರಾವತಿ ನದಿ ತಿರುವು ಯೋಜನೆಗಳು ಒಂದು ಬೋಗಸ್ ಯೋಜನೆಗಳು. ಈ ಯೋಜನೆಗಳನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಆಗ್ರಹಿಸಿ ಬುಧವಾರ ಶರಾವತಿ ನದಿ-ಕಣಿವೆ ಉಳಿಸಿ ಹೋರಾಟ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
2017ರಲ್ಲಿ ಮುನ್ನೆಲೆಗೆ ಬಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ನಾಗರಿಕ ಸಮಾಜಕ್ಕೆ ಹೊರೆಯಾಗುವ, ಅಪಾರ ಪ್ರಮಾಣದಲ್ಲಿ ಪರಿಸರ ನಾಶ ಮಾಡುವ ನಿರರ್ಥಕ ಯೋಜನೆಯಾಗಿದೆ. ಇದರಿಂದ ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದ 354 ಎಕರೆ ಪರಿಶುದ್ಧ ಕಾಡು ನಾಶವಾಗಲಿದೆ. ಪ್ರಪಂಚದಲ್ಲಿ ಅತ್ಯಪರೂಪದ ಸಿಂಗಳೀಕಗಳ ಆವಾಸಸ್ಥಾನ ಛಿದ್ರವಾಗಲಿದೆ. ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೀರನ್ನು ಮೇಲೆ ಎತ್ತಿ ತರಲು ಶೇ.25ರಷ್ಟು ಹೆಚ್ಚುವರಿ ವಿದ್ಯುತ್ ಬೇಕಾಗುತ್ತದೆ ಎಂದು ದೂರಿದರು.ಕೆಪಿಸಿಎಲ್ ಅಧಿಕಾರಿಗಳು ಯೋಜನೆ ಕುರಿತಾಗಿ ಅನೇಕ ಸುಳ್ಳುಗಳನ್ನು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಗಳಿಗೆ ಹೇಳಿದ್ದಾರೆ. ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿರುವುದು ಕಂಡು ಬರುತ್ತದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯಿಂದ ಶಿಪಾರಸ್ಸು ಪಡೆಯಲು ಯಶಸ್ವಿಯೂ ಆಗಿರುವುದು ದುರದಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಧಿಕ ಬೇಡಿಕೆ ಇರುವ ಹೊತ್ತಿನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಅನೇಕ ಪರ್ಯಾಯ ಮಾರ್ಗಗಳಿವೆ. ಪ್ರಪಂಚದ ಅನೇಕ ದೇಶಗಳಲ್ಲಿ ಹಾಗೂ ಪಕ್ಕದ ತಮಿಳುನಾಡಿನಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಮೂಲಕ ಇದು ಸಾಧ್ಯವೆಂದು ತೋರಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ನೀರಿನ ಅಭಾವ ಆಗಬಹುದು ಎಂಬ ಹಿನ್ನೆಲೆಯಲ್ಲಿ, 430 ಕಿ.ಮೀ ಹಾಗೂ ಬೆಂಗಳೂರಿಗಿಂತ 2000 ಅಡಿ ತಗ್ಗಿನಲ್ಲಿರುವ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ 40 ಟಿಎಂಸಿ ನೀರನ್ನು ಒಯ್ಯುವ ಯೋಜನೆ ಇದೆ. 2019ರಲ್ಲಿ ಯೋಜನೆ ಮುನ್ನೆಲೆಗೆ ಬಂದಾಗ, ಇಡೀ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ಬಂದ್ ಮಾಡಿ ವಿರೋಧಿಸಿದ್ದರು. ನಂತರ ಬಂದ ಸರ್ಕಾರದ ಮುಖ್ಯಸ್ಥರು ಯೋಜನೆ ನಮ್ಮ ಸರ್ಕಾರದ ಮುಂದೆ ಇಲ್ಲವೆಂದು ಮೌಖಿಕವಾಗಿ ಹೇಳಿದ್ದರು. ಈಗ ಮತ್ತೆ ಮುನ್ನೆಲೆಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಗತ್ತಿನ ಯಾವುದೇ ದೇಶದಲ್ಲೂ ಇಷ್ಟು ದೂರ ಹಾಗೂ ಇಷ್ಟು ತಗ್ಗಿನ ಪ್ರದೇಶದಿಂದ ನೀರು ಹರಿಸಿದ ಉದಾಹರಣೆಗಳಿಲ್ಲ. 40 ಟಿಎಂಸಿ ನೀರನ್ನು 430 ಕಿಲೋಮೀಟರ್ ದೂರದ ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯಿಂದಾಗಿ ಲಿಂಗನಮಕ್ಕಿ ನೀರಿನ ಪ್ರಮಾಣ ಶೇ.33ರಷ್ಟು ಕಡಿಮೆಯಾಗಲಿದೆ. ವಿದ್ಯುತ್ ಉತ್ಪಾದನೆಯೂ ಕಡಿಮೆಯಾಗಲಿದೆ. ವಿದ್ಯುತ್ತನ್ನು ಖರೀದಿ ಮಾಡುವುದು ರಾಜ್ಯದ ಬೊಕ್ಕಸಕ್ಕೆ ಅನಾವಶ್ಯಕ ಹೊರೆಯೂ ಆಗಲಿದೆ ಎಂದರು.ಈ ಎರಡು ಯೋಜನೆಗಳನ್ನು ಶಾಶ್ವತವಾಗಿ ರದ್ದು ಮಾಡಬೇಕು. ಇದನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ಈ ವಿವಾದಕ್ಕೆ ಶಾಶ್ವತ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹೊಸನಗರ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ತೊಗರ್ಸಿ ಹಿರೇಮಠದ ಸ್ವಾಮೀಜಿ, ಜಮಾತೆ ಇಸ್ಮಾಮಿ ಹಿಂದ್ ಅಬ್ದುಲ್ ವಹಾಬ್, ಅಖಿಲೇಶ್ ಚಿಪ್ಳಿ, ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಡಾ.ಸತೀಶ್ ಕುಮಾರ್ ಶೆಟ್ಟಿ, ಜಿ.ವಿಜಯಕುಮಾರ್, ಕಿರಣ್, ತಾಯಿಮನೆ ಸುದರ್ಶನ್, ಡಾ.ಶ್ರೀಪತಿ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಎಂ.ಶಂಕರ್ ಇನ್ನಿತರರು ಇದ್ದರು.