ಕನ್ನಡಪ್ರಭ ವಾರ್ತೆ ಮೈಸೂರು
ಜಾಗತಿಕ ರಾಷ್ಟ್ರಗಳು ಆರ್ಥಿಕವಾಗಿ ಶಕ್ತಿಗುಂದಿದ್ದರೂ ಭಾರತ ಮಾತ್ರ ನಿಜವಾಗಿಯೂ ಪ್ರಕಾಶಿಸುತ್ತಿದೆ. ಜಿಡಿಪಿಯಲ್ಲಿ ಜಾಗತಿಕವಾಗಿ ನಾವು 3ನೇ ಸ್ಥಾನದಲಿದ್ದು, ದೇಶದಲ್ಲಿ ಬಹಳಷ್ಟು ಉದ್ಯೋಗಾವಕಾಶಗಳು ಯುವಜನರಿಗೆ ದೊರೆಯುತ್ತಿವೆ ಎಂದು ಮೈಸೂರಿನ ಎಲ್ ಅಂಡ್ ಟಿ ಟೆಕ್ನಾಲಾಜಿ ಸರ್ವೀಸಸ್ ನ ಜಾಗತಿಕ ಮುಖ್ಯಸ್ಥ ಶಶಿಧರ್ ಡೋಂಗ್ರೆ ಹೇಳಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ವಿದ್ವತ್-2ಕೆ24 ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ವತ್ ಎಂಬುದು ವಿದ್ಯಾರ್ಥಿಗಳ ಕಾರ್ಯಕ್ರಮವಾಗಿದ್ದು, ಅವರಲ್ಲಿರುವ ಕ್ರಿಯಾಶೀಲತೆ, ಕೌಶಲ್ಯವನ್ನು ಪ್ರದರ್ಶಿಸುವುದಕ್ಕೆ ಈ ವೇದಿಕೆಯು ಅತ್ಯಂತ ಸೂಕ್ತವಾಗಿದ್ದು, ಅವರ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದರು. ವೈಯಕ್ತಿಕವಾಗಿ ಹಲವು ಉದಾಹರಣೆಗಳನ್ನು ನೀಡುವುದರ ಮೂಲಕ ಇಂದಿನ ಯುವಪೀಳಿಗೆ ಹಿರಿಯರಿಂದ ಸಮಯ ಪಾಲನೆ, ಜೀವನೋತ್ಸಾಹ ಮುಂತಾದ ಉತ್ತಮ ಅಂಶಗಳನ್ನು ನೋಡಿ, ಕೇಳಿ ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಮುಖ್ಯಅತಿಥಿಯಾಗಿದ್ದ ಬೆಂಗಳೂರಿನ ಕ್ವಾಲಿಟಿ ರೋಸಲ್ ಟೆಕ್ ಸಿಸ್ಟಮ್ಸ್ ಡಿವಿಸನ್ ಆಫ್ ರೋಸಲ್ ಇಂಡಿಯಾ ಲಿಮಿಟೆಡ್ ನ ಉಪಾಧ್ಯಕ್ಷ ಬಿ.ಪಿ. ಪ್ರಸಾದ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನಿಗಿಂತಲೂ ಕೃತಕ ಬುದ್ಧಿಮತ್ತೆ ಹೆಚ್ಚೆಚ್ಚು ಬಳಕೆಯಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿನ ಕ್ರಿಯಾಶೀಲತೆ, ಯೋಚನಾ ಸಾಮರ್ಥ್ಯವನ್ನು ಇದು ಗಣನೀಯವಾಗಿ ಕ್ಷೀಣಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಕಲಿಕೆ ಎನ್ನುವುದು ನಿರಂತರವಾಗಿದ್ದು, ಕಾಲ ಕಾಲಕ್ಕೆ ದೈನಂದಿನ ಆಗು ಹೋಗುಗಳಿಗೆ ತಮ್ಮನ್ನ ತಾವು ಒಡ್ಡಿ ಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡದೆ ವೈಯಕ್ತಿಕವಾಗಿ6 ತಿಂಗಳ ಕೌಶಲ್ಯಾಧಾರಿತ ತರಬೇತಿ ನೀಡಿಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿತೊಡಗಿಸುವುದರ ಮೂಲಕ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಜಾಗತಿಕ ಸ್ಪರ್ಧೆ ಎದುರಿಸಲು ಸಜ್ಜು ಮಾಡಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿದರು.ಸುಪ್ರೀತ ಕಶ್ಯಪ್ ಅವರ ಪ್ರಾರ್ಥಿಸಿದರು. ತೇಜಸ್ವಿನಿ ಸ್ವಾಗತಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್, ಗೌರವ ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣವರ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ. ನಾಗರಾಜು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಅಧ್ಯಕ್ಷ ಗುಂಡಪ್ಪಗೌಡ ವಹಿಸಿದ್ದರು. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರರು ಇದ್ದರು. ಕೀರ್ತನ ನಿರೂಪಿಸಿದರು. ಸುಹೇಬಿಯಾ ವಂದಿಸಿದರು.