ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಸಮೀಪದ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಸುಮಾರು 9 ಕೋಟಿ ರು. ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಏಪ್ರಿಲ್ 22 ರಿಂದ 30ರ ವರೆಗೆ ಕ್ಷೇತ್ರದಲ್ಲಿ ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮಗಳು ನಡೆಯಲಿದೆ. ಏ.26ರಂದು ಬೆಳಗ್ಗೆ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಶ್ರೀ ಉಳ್ಳಾಯ, ಕೊಡಮಣಿತ್ತಾಯ ದೈವಗಳಿಗೆ ಗೆ ಬ್ರಹ್ಮಕುಂಭಾಭಿಷೇಕ, ರಾತ್ರಿ ಕ್ಷೇತ್ರದ ನಾಗದೇವರ ನಾಗ ಮಂಡಲ ಸೇವೆ ಜರುಗಲಿದೆ ಎಂದು ಕ್ಷೇತ್ರದ ಉಮೇಶ್ ಎನ್. ಶೆಟ್ಟಿ ತಿಬರ ಗುತ್ತಿನಾರ್ ಶಿಬರೂರುಗುತ್ತು ಹೇಳಿದರು.ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕದ ಬಗ್ಗೆ ಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿಬರೂರು ಕ್ಷೇತ್ರವು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಕಟೀಲು ಕ್ಷೇತ್ರಕ್ಕೂ ಶಿಬರೂರುಗೂ ಅವಿನಾಭಾವ ಸಂಬಂಧವಿದೆ. ಕ್ಷೇತ್ರದ ಬಾವಿಯ ತೀರ್ಥವು ವಿಷವನ್ನು ಅಮೃತ ಮಾಡುವ ಶಕ್ತಿಯನ್ನು ಹೊಂದಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ತೀರ್ಥವನ್ನು ಸ್ವೀಕರಿಸುತ್ತಾರೆ. 2010ರಲ್ಲಿ ಬ್ರಹ್ಮ ಕುಂಭಾಭಿಷೇಕವು ನಡೆದಿದ್ದು 14 ವರ್ಷಗಳ ಬಳಿಕ ಇದೀಗ ನಡೆಯುತ್ತಿದ್ದು ಎಲ್ಲರ ಸಹಕಾರ ಅಗತ್ಯವೆಂದು ಅವರು ಹೇಳಿದರು.
ಕ್ಷೇತ್ರದ ಮೊಕ್ತೇಸರ ಮಧುಕರ ಅಮೀನ್ ಮಾತನಾಡಿ ಶಿಬರೂರು ಕ್ಷೇತ್ರದಲ್ಲಿ 4 ಬದಿಯ ಗೋಪುರಗಳು ಪುನರ್ ನಿರ್ಮಾಣಗೊಳ್ಳಲಿದ್ದು ಸುಮಾರು 58 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸ್ವರ್ಣ ಪಲ್ಲಕ್ಕಿಯ ಸಮರ್ಪಣೆ ನಡೆಯಲಿದ್ದು ಬ್ರಹ್ಮಕುಂಭಾಬಿಷೇಕ ಸಂದರ್ಭ ಪ್ರತಿದಿನ ಅನ್ನ ಪ್ರಸಾದ ಹಾಗೂ ಉಪಾಹಾರದ ವ್ಯವಸ್ಥೆ ಇದೆ ಎಂದು ಹೇಳಿದರು.ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ ಶ್ರೀ ಕೊಡಮಣಿತ್ತಾಯ ಕ್ಷೇತ್ರವು ಮಂಗಳೂರಿನಿಂದ ೨೫ ಕಿ.ಮೀ. ದೂರದಲ್ಲಿ ಕಟೀಲು ಕ್ಷೇತ್ರದಿಂದ ೨ ಕಿ.ಮೀ (ಕಿನ್ನಿಗೋಳಿ ಯಿಂದ ೩ ಕಿ.ಮೀ) ದೂರದಲ್ಲಿ ಪ್ರಕೃತಿ ರಮಣೀಯ ಕಾರ್ಣಿಕ ಕ್ಷೇತ್ರವಾಗಿದೆ. ನಂದಿನಿ ತಟದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು ಸುಮಾರು ೭೦೦ ವರ್ಷಗಳ ಹಿಂದೆ ದೈವ ಭಕ್ತರಾದ ಶಿಬರೂರು ಗುತ್ತು ತಿಮ್ಮತ್ತಿ ಕರಿವಾಳ್‌ರವರ ಭಕ್ತಿಗೆ ಒಲಿದು ನೆಲೆ ನಿಂತಿವೆ. ಶ್ರೀ ಕ್ಷೇತ್ರ ಶಿಬರೂರಿಗೂ ಶ್ರೀ ಕ್ಷೇತ್ರ ಕಟೀಲಿಗೂ ಅವಿನಾಭಾವ ಸಂಬಂಧವಿದ್ದು ಕಟೀಲು ಜಾತ್ರಾ ಸಂದರ್ಭದಲ್ಲಿ ಶ್ರೀ ದೈವವು ಭೇಟಿ ನೀಡುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಶ್ರೀ ಕ್ಷೇತ್ರವು ಮುಜರಾಯಿ ಇಲಾಖೆಗೆ ಸೇರಿದ ಎ ದರ್ಜೆಯ ದೈವಸ್ಥಾನವಾಗಿದೆ. ೧೯೭೬ರಲ್ಲಿ ಶಿಬರೂರು ಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು, ೨೦೧೦ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು ೫ ಕೋಟಿ ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳೊಂದಿಗೆ ಸುಮಾರು ೯ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ನಡೆಯುತ್ತಿದೆ.
ಶ್ರೀ ಕ್ಷೇತ್ರವು ದೈವ ಕ್ಷೇತ್ರ ಮಾತ್ರವಲ್ಲದೆ ನಾಗ ಕ್ಷೇತ್ರವು ಆಗಿರುತ್ತದೆ. ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಸರ್ವಸಿದ್ಧತೆಯನ್ನು ವಿವಿಧ ಸಮಿತಿಗಳ ಮೂಲಕ ನಡೆಸಲಾಗುತ್ತಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷದಲ್ಲಿ ಧಾರ್ಮಿಕ ಮುಖಂಡರ ಹಾಗೂ ಅನೇಕ ಸಾಂಸ್ಕೃತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲಾಗುವುದೆಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿತೇಂದ್ರ ಶೆಟ್ಟಿ, ಕೊರ‍್ಯಾರುಗುತ್ತು, ತುಕರಾಮ ಶೆಟ್ಟಿ, ಪರ್ಲಬೈಲುಗುತ್ತು, ಪ್ರದ್ಯುಮ್ನ ರಾವ್, ಕಾಂತಪ್ಪ ಸಾಲಿಯಾನ್, ಸುಧಾಕರ ಶಿಬರೂರು, ಸುದೀಪ್ ಶೆಟ್ಟಿ, ಗೀತಾ ಶೆಟ್ಟಿ, ಜಗನ್ನಾಥ ಬಾಳ ಇದ್ದರು.