ಶಿರಸಿ:
ನಗರ ಮಾರಿಕಾಂಬಾ ಪ್ರೌಢಶಾಲೆಯ ಪಕ್ಕದ ಲಮಾಣಿ ಓಣಿಯ ಚರಂಡಿ ಗಬ್ಬೆದ್ದು ನಾರುತ್ತಿದ್ದು ಇಲ್ಲಿನ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಚರಂಡಿ ಸ್ವಚ್ಛಗೊಳಿಸುವಂತೆ ನಗರಸಭೆ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರ ಬಳಿ ವಿನಂತಿಸಿದರೂ, ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ನಗರಸಭೆಯ ವಾರ್ಡ್ ನಂಬರ್-೩ರ ಲಮಾಣಿ ಓಣಿಯಲ್ಲಿ ೧೧ ಮನೆಗಳಿದ್ದು, ಇವರೆಲ್ಲರೂ ಈ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ. ಚರಂಡಿಯಲ್ಲಿ ಕೊಳಚೆ ನೀರು ನಿಂತು ಗಬ್ಬು ವಾಸನೆ ಬರುತ್ತಿರುವುದರಿಂದ ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಯ ಶೌಚ ನೀರು ಈ ಚರಂಡಿಗೆ ಬಿಡಲಾಗಿದೆ. ಮಲ-ಮೂತ್ರದ ವಾಸನೆಯಿಂದ ಸೊಳ್ಳೆಗಳು ಉತ್ಪತ್ತಿ ಆಗುತ್ತಿರುವುದರಿಂದ ರೋಗದ ಭಯ ಇಲ್ಲಿನ ನಿವಾಸಿಗಳಲ್ಲಿ ಉಂಟಾಗಿದೆ.ಲಮಾಣಿ ಓಣಿ ಎಂದು ನಾಮಕರಣ ಮಾಡಿದರೆ ಸರ್ಕಾರದಿಂದ ಅನುದಾನದಿಂದ ಮೂಲಭೂತ ಸೌಕರ್ಯ ದೊರೆಯುತ್ತದೆ ಎಂದು ನಮ್ಮನ್ನು ನಂಬಿಸಿದ್ದಾರೆ. ಪಕ್ಕದ ರೋಟರಿ ಆಸ್ಪತ್ರೆಯವರು ಕೊಳಚೆ ನೀರನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದಾರೆ. ಇದರ ಕುರಿತು ಸಾಕಷ್ಟು ಬಾರಿ ನಗರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳುವ ಎಂದರೆ ವಾರ್ಡ್ ಸದಸ್ಯೆ ದೀಪಾ ಮಹಾಲಿಂಗಣ್ಣನವರ್ ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಭೇಟಿಯಾದ ವೇಳೆ ಒಮ್ಮೆ ಸ್ಥಳ ಪರಿಶೀಲಿಸಿ ಎಂದು ವಿನಂತಿಸಿದರೂ ನನಗೆ ಸಂಬಂಧಿಸಿಲ್ಲ ಎನ್ನುತ್ತಾರೆ. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಬೀದಿ ದೀಪದ ವ್ಯವಸ್ಥೆ ಸರಿಯಾಗಿಲ್ಲ. ನಗರಸಭೆಯಿಂದ ಲಮಾಣಿ ಓಣಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆ ಅಗಲೀಕರಣ ಮಾಡಿದ ಪರಿಣಾಮ ಚರಂಡಿ ಅಗೆದಿದ್ದು ೨ ತಿಂಗಳಿನಿಂದ ಕಸ ಸಂಗ್ರಹಣೆ ವಾಹನವೂ ಒಳಗಡೆ ಬರುತ್ತಿಲ್ಲ. ಕಸ ಸಂಗ್ರಹವಾಗಿ ಸುತ್ತಮುತ್ತಲಿನ ಪರಿಸರ ಗಬ್ಬು ವಾಸನೆಯಿಂದ ಕೂಡಿದೆ. ಚರಂಡಿ ಸ್ವಚ್ಛಗೊಳಿಸಿ, ಕಸ ಸಂಗ್ರಹ ವಾಹನ ಬರದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ಥಳೀಯ ನಿವಾಸಿಗಳಾದ ನಯನಾ ನಾಯ್ಕ, ಸುಶೀಲಾ ಲಮಾಣಿ, ಕಮಲಾಬಾವಿ ಲಮಾಣಿ, ಶ್ರೀದೇವಿ ಪಟಗಾರ, ಶಾಂತಾಬಾಯಿ, ವಾಮನ ನಾಯ್ಕ ಎಚ್ಚರಿಕೆ ನೀಡಿದ್ದಾರೆ.