ಕನ್ನಡಪ್ರಭ ವಾರ್ತೆ ಕಾಪು
ಶಿರ್ವ, ಕುತ್ಯಾರು, ಕಳತ್ತೂರು, ಪಿಲಾರು, ಸಾಂತೂರು ಗ್ರಾಮ ವ್ಯಾಪ್ತಿಯನ್ನೊಳಗೊಂಡ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ 49 ವರ್ಷಗಳನ್ನು ಪೂರೈಸಿ ಜನಸ್ನೇಹಿಯಾಗಿ 50ನೇ ವರ್ಷಕ್ಕೆ ಪಾದಾರ್ಪಣಗೊಳ್ಳುತ್ತಿರುವ ಶುಭಾವಸರದಲ್ಲಿ "ಸುವರ್ಣ ಸಂಭ್ರಮ " ವರ್ಷಾಚರಣೆಯ ಲೋಗೋ "ವನ್ನು ಹಿರಿಯರಾದ ರಾಜಗೋಪಾಲ್ ಅನಾವರಣಗೊಳಿಸಿದರು.ಭಾನುವಾರ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡುತ್ತಾ ಸಂಘವು 100 ಕೋಟಿ ರು.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, 42 ಲಕ್ಷ ರು. ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ ಶೇ 10 ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದರು.ಸಂಘದ ಐದು ಗ್ರಾಮಗಳ ವ್ಯಾಪ್ತಿಯ ರೈತರಿಗೆ ಉಳುಮೆಯಂತ್ರವನ್ನು ರಿಯಾಯಿತಿ ದರದಲ್ಲಿ ಒದಗಿಸಿ ಕೃಷಿಗೆ ಅನುಕೂಲ ಮಾಡಲಾಗಿದೆ. 50ನೇ ವರ್ಷದ ಆರಂಭದ ಕಾರ್ಯಕ್ರಮವಾಗಿ ಆ. 5ರಂದು ಐದು ಗ್ರಾಮಗಳ ಸಹಕಾರಿಗಳು ಒಟ್ಟಾಗಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ವರ್ಷವಿಡೀ ಕೃಷಿಕರಿಗೆ ಪೂರಕ ಕಾರ್ಯಯೋಜನೆಗಳು ನಡೆಯಲಿವೆ. ಎಂದರು. ಸದಸ್ಯರ ಧನಾತ್ಮಕ ಸಹಕಾರದಿಂದ ಸಹಕಾರಿ ವ್ಯವಸಾಯಿಕ ಸಂಘ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್, ಸಂಘದ ನಿರ್ದೇಶಕರುಗಳಾದ ವಾರಿಜಾ ಆರ್. ಕಲ್ಮಾಡಿ, ಉಮೇಶ ಆಚಾರ್ಯ, ವಿಜಯ ಪೂಜಾರಿ, ಕೃಷ್ಣ ಮುಖಾರಿ, ಹರಿಣಾಕ್ಷ ಶೆಟ್ಟಿ, ರಂಜಿತ್ ಪ್ರಭು, ಪುರುಶೋತ್ತಮ ಶೆಟ್ಟಿಗಾರ್, ವೇದಾವತಿ ಆಚಾರ್ಯ, ಸುಂದರ ಮೂಲ್ಯ ವೇದಿಕೆಯಲ್ಲಿದ್ದರು.ಉಪಾಧ್ಯಕ್ಷ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ ಸ್ವಾಗತಿಸಿದರು. ಮುಖ್ಯ ಲೆಕ್ಕಿಗ ಹರೀಶ್ ಪೂಜಾರಿ ವರದಿ ವಾಚಿಸಿದರು. ಶಾಖಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ನಿರೂಪಿಸಿದರು. ಶಾಖಾ ವ್ಯವಸ್ಥಾಪಕಿ ಸುಮಾ ಶೆಟ್ಟಿ ಧನ್ಯವಾದವಿತ್ತರು. 2000ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.