ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡ-ಕಂಠಿ, ಎಲ್ಲೆಂದರಲ್ಲಿ ಎಸೆದಿರುವ ತ್ಯಾಜ್ಯ, ವಿದ್ಯುತ್ ಸಂಪರ್ಕ ಕಾಣದ ಬೀದಿದೀಪ, ಹೊಂಡ ಬಿದ್ದ ರಸ್ತೆ, ಭೂಗತ ವಿದ್ಯುತ್ ಲೈನ್ ಇದ್ದರೂ ಬೆಳಗದ ಬೀದಿದೀಪ. ಇದು ಯಾವುದೋ ಒಂದು ಕುಗ್ರಾಮವಲ್ಲದ ಸ್ಥಿತಿಯಲ್ಲ, ಹುಬ್ಬಳ್ಳಿ ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಭೈರಿದೇವರಕೊಪ್ಪದಿಂದ ಗಾಮನಗಟ್ಟಿ ಸಂಪರ್ಕಿಸುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಿವಶಂಕರ ಪಾರ್ಕ್ (ಮಾಯಕಾರ ಲೇಔಟ್) ಕತೆ. ಹೆಸರಿಗೆ ಶಿವಶಂಕರ ಪಾರ್ಕ್ ಇದ್ದರೂ ಇದನ್ನು ಶಿವನೇ ಕಾಪಾಡಬೇಕು ಎಂಬುದು ಅಲ್ಲಿನ ನಿವಾಸಿಗಳ ಅಳಲು.
2016ರಲ್ಲೇ ಹಸ್ತಾಂತರ:ಮಾಯಕಾರ ಲೇಔಟ್‌ನಲ್ಲಿ ಬರುವ ಶಿವಶಂಕರ ಪಾರ್ಕ್ ಮಹಾನಗರ ಪಾಲಿಕೆಗೆ 2016ರಲ್ಲೇ ಹಸ್ತಾಂತರವಾಗಿದೆ. ಎಂಟು ವರ್ಷ ಕಳೆದರೂ ಸಹ ಈ ವರೆಗೂ ಪಾಲಿಕೆ ವತಿಯಿಂದ ಒಂದೇ ಒಂದೇ ಅಭಿವೃದ್ಧಿ ಕಾಮಗಾರಿ ಇಲ್ಲಿ ನಡೆದಿಲ್ಲ. ಆದರೆ, ಜನರಿಂದ ತೆರಿಗೆ ಕಟ್ಟಿಸಿಕೊಳ್ಳುವುದನ್ನು ಮಾತ್ರ ಪಾಲಿಕೆ ಬಿಟ್ಟಿಲ್ಲ. ಲೇಔಟ್ ಅಭಿವೃದ್ಧಿಪಡಿಸುವಾಗ ಡಾಂಬರ್ ಹಾಕಲಾಗಿದೆ. ಅದು ಸಂಪೂರ್ಣ ಕಿತ್ತು ಹೋಗಿದ್ದು ಕೆಲವೆಡೆ ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿದೆ. ಇನ್ನೂ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ಜಾಲಿ ಗಿಡಗಳು ಬೆಳೆದು ನಿಂತಿದ್ದು ಜನರು ಸಂಚರಿಸುವುದೇ ದುಸ್ತರವಾಗಿದೆ.
ಬೆಳಗದ ಬೀದಿದೀಪ:ಲೇಔಟ್ ಅಭಿವೃದ್ಧಿಸುವಾಗ ಭೂಗತ ವಿದ್ಯುತ್ ಲೈನ್ ಹಾಕಿ ಕಂಬ ಅಳವಡಿಸಿ ಬೀದಿದೀಪ ಹಾಕಲಾಗಿದೆ. ಆದರೆ, ಅವುಗಗಳಿಗೆ ಈ ವರೆಗೂ ಸಂಪರ್ಕ ನೀಡಿಲ್ಲ. ಮಹಾನಗರ ಪಾಲಿಕೆ ಸಹ ಅವುಗಳಿಗೆ ಸಂಪರ್ಕ ಕಲ್ಪಿಸಿ ನಿರ್ವಹಣೆ ಹೊತ್ತುಗೊಂಡಿಲ್ಲ. ಹೀಗಾಗಿ ಜನರು ಸಂಜೆಯಾಗುತ್ತಿದ್ದಂತೆ ಮನೆಯಿಂದಾಚೆ ಬರಲು ಭಯಪಡುವಂತಾಗಿದೆ.
ಕುಡುಕರಿಗೆ ವರದಾನ:ಬೀದಿದೀಪಗಳು ಇಲ್ಲದೆ ಇರುವುದು ಕುಡುಕರಿಗೆ ವರದಾನವಾಗಿ ಮಾರ್ಪಟ್ಟಿದೆ. ಕತ್ತಲು ಆವರಿಸುತ್ತಿದ್ದಂತೆ ರಸ್ತೆಯಲ್ಲಿ ಹಾಕಿರುವ ಕಟ್ಟೆ ಮೇಲೆ ಕುಳಿತು ನಶೆ ಏರಿಸಿಕೊಳ್ಳುತ್ತಿದ್ದಾರೆ. ಕುಡಿದ ಬಾಟಲಿ ಪಾರ್ಕಿನಲ್ಲಿ ಎಸೆದು, ರಸ್ತೆಯಲ್ಲಿ ಒಡೆದು ಹಾಕುತ್ತಿದ್ದಾರೆ. ಈಚೆಗೆ ಪಕ್ಕದಲ್ಲಿರುವ ಈಶ್ವರ ನಗರದಲ್ಲಿ ಸಂಜೆಯ ವೇಳೆ ಮುಖ್ಯಅರ್ಚಕನ ಕೊಲೆ ನಡೆದಿರುವುದರಿಂದ ಇಲ್ಲಿನ ನಿವಾಸಿಗಳು ಮತ್ತಷ್ಟು ಭಯಭೀತರಾಗಿದ್ದಾರೆ.
ಕಸದ ಗಾಡಿಗೆ ಕಾಯಬೇಕು:ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಎರಡು ದಿನಗೊಮ್ಮೆ ಮನೆ-ಮನೆಯಿಂದ ಕಸ ಸಂಗ್ರಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭ ಹೇಳಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ವಾರದಲ್ಲಿ ಎರಡು ದಿನ ಬರುವ ಕಸ ಸಂಗ್ರಹಿಸುವ ವಾಹನಕ್ಕೆ ನಿಗದಿತ ಸಮಯವಿಲ್ಲ. ಒಮ್ಮೆ ಬೆಳಗ್ಗೆ ಬಂದರೆ, ಮತ್ತೊಮ್ಮೆ ಮಧ್ಯಾಹ್ನ ಬರುತ್ತಿದೆ. ಇದು ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ಹಲವರು ರಸ್ತೆಯ ಇಕ್ಕೆಲ್ಲಗಳಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ.ಪಾರ್ಕ್‌ನಲ್ಲಿ ಆಳೆತ್ತರದ ಜಾಲಿಕಂಟಿ
ಹೆಸರಿಗೆ ಪಾರ್ಕ್. ಆಳೆತ್ತರದ ಜಾಲಿಗಿಡ ಸೇರಿದಂತೆ ವಿವಿಧ ಮುಳ್ಳು ಕಂಠಿಯಿಂದ ಆವೃತ್ತವಾಗಿದ್ದು ವಿಷಜಂತುಗಳ ತಾಣವಾಗಿದೆ. ಹೀಗಾಗಿ ಅಲ್ಲಿ ಯಾರೊಬ್ಬರೂ ಹೋಗುತ್ತಿಲ್ಲ. ಈ ಲೇಔಟ್‌ಗೆ ಸಂಬಂಧಿಸದೆ ಇರುವವರು ತಮ್ಮ ಎಮ್ಮೆ, ಆಕಳನ್ನು ತಂದು ಇಲ್ಲಿ ಬಿಟ್ಟು ಗೇಟ್‌ಗೆ ಬೀಗ ಜಡಿದು ಹೋಗುತ್ತಾರೆ. ಈ ಕುರಿತು ಸ್ಥಳೀಯರು ಪ್ರಶ್ನಿಸಿದರೆ ಜಗಳ ತೆಗೆದ ಉದಾಹರಣೆಗಳು ಸಾಕಷ್ಟಿವೆ.ಶಿವಶಂಕರ ಪಾರ್ಕ್ ಸೇರಿದಂತೆ 5 ಪಾರ್ಕ್‌ಗಳ ಸಂಪೂರ್ಣ ಅಭಿವೃದ್ಧಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಒಂದು ವಾರದಲ್ಲಿ ವರದಿ ನೀಡುವೆ. ವಾರ್ಡ್‌ನಲ್ಲಿ ಉದ್ಭವಿಸಿರುವ ಮೂಲಭೂತ ಸಮಸ್ಯೆ, ಆದಷ್ಟು ಶೀಘ್ರವೇ ಬೀದಿದೀಪಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು ಹೇಳಿದರು.