ಕನ್ನಡಪ್ರಭ ವಾರ್ತೆ ಚವಡಾಪುರ
ನಮ್ಮ ಚರಿತ್ರೆಯಲ್ಲಿ ಅನೇಕ ರಾಜ ಮಹಾರಾಜರು ಬಂದು ಹೋಗಿದ್ದಾರೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಅಚ್ಚಳಿಯದೇ ಉಳಿಯಲು ಅವರು ಮಾಡಿದ ಆಡಳಿತ, ಜನಸೇವೆಗೆ ಕಾರಣವಾಗಿದೆ, ಹೀಗಾಗಿ ಅವರ ಚರಿತ್ರೆಯನ್ನು ಎಲ್ಲರೂ ಅರಿಯುವುದು ಬಹಳ ಅವಶ್ಯಕವಾಗಿದೆ ಎಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳು ಹೇಳಿದರು.ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಯುವಕ ಮಂಡಳಿ ವತಿಯಿಂದ ಆಯೋಜಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರಲ್ಲಿನ ಉತ್ಸಾಹ ನೋಡಿದಾಗ ಬಹಳ ಆನಂದವಾಗುತ್ತದೆ. ಈ ಉತ್ಸಾಹ ಒಂದು ದಿನಕ್ಕೆ ಸೀಮಿತವಾಗದೆ ಶಿವಾಜಿ ಮಹಾರಾಜರ ಚರಿತ್ರೆಯನ್ನು ಅರಿಯುವ ಮತ್ತು ಅವರ ಆದರ್ಶದಂತೆ ಬದುಕು ನಡೆಸುವಂತಾಗಬೇಕು ಎಂದರು.
ಪತ್ರಕರ್ತ ರಾಹುಲ್ ದೊಡ್ಮನಿ ಮಾತನಾಡಿ, ಹಿಂದವಿ ಸ್ವರಾಜ್ಯದ ಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸಬೇಕು. ಶಿವಾಜಿ ಮಹಾರಾಜರ ಕಾಲಘಟ್ಟದಲ್ಲಿ ಭಾರತ ಎನ್ನುವ ಪರಿಕಲ್ಪನೆ ಇರಲಿಲ್ಲವಾದರೂ ಇಂದಿನ ಭಾರತದ ಪರಿಕಲ್ಪನೆಗೆ ಅಂದು ಶಿವಾಜಿ ಮಹಾರಾಜರು ಅಡಿಪಾಯ ಹಾಕಿದ್ದರು. ಮೊಘಲರ ಅಟ್ಟಹಾಸ ಅಡಗಿಸಿದ್ದು ಮಾತ್ರವಲ್ಲ ತನ್ನ ಸಾಮ್ರಾಜ್ಯದಲ್ಲಿ ಎಲ್ಲಾ ಧರ್ಮಿಯರೂ ಅನೋನ್ಯವಾಗಿ ಬದುಕುವಂತ ವಾತಾವರಣ ನಿರ್ಮಿಸಿದ್ದರು. ಹೀಗಾಗಿ ಅವರನ್ನು ಜನತಾ ರಾಜಾ ಎಂದು ಗೌರವದಿಂದ ಕರೆಯಲಾಗಿದೆ. ಯುವಕ ಮಿತ್ರರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅರ್ಧಸತ್ಯಗಳನ್ನು ಓದಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಬದಲಾಗಿ ಸರಿಯಾಗಿ ಇತಿಹಾಸವನ್ನು ಕ್ರಮಬದ್ಧವಾಗಿ ಓದುವುದರ ಜೊತೆಗೆ ಮೋಜು ಮಸ್ತಿಗಾಗಿ ಎಲ್ಲೆಲ್ಲೋ ಸುತ್ತುವ ಬದಲಾಗಿ ಶಿವಾಜಿ ಮಹಾರಾಜರ ಕೋಟೆ ಕೊತ್ತಲುಗಳು, ಐತಿಹಾಸಿಕ ಸ್ಮಾರಕಗಳಿಗೂ ಭೇಟಿ ನೀಡಿ ಅವರ ಆಡಳಿತ ಹಾಗೂ ಅವರು ಬದುಕಿದ ಕಾಲಘಟ್ಟದ ಇತಿಹಾಸವನ್ನು ಅವಲೋಕನ ಮಾಡಿದರೆ ಇನ್ನಷ್ಟು ಪ್ರಬುದ್ಧತೆ ಬೆಳೆಯಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭದಲ್ಲಿ ಘೋಷಯ್ಯ ಸ್ವಾಮಿ ಸೇರಿದಂತೆ ಶಿವಾಜಿ ಯುವಕ ಮಂಡಳಿಯ ಸದಸ್ಯರು, ಗ್ರಾಮಸ್ಥರು ಇದ್ದರು.