ಕನ್ನಡಪ್ರಭ ವಾರ್ತೆ ಕಲಬುರಗಿ
ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠಾ ಸಮುದಾಯಕ್ಕೆ ಸೀಮಿತ ನಾಯಕನಲ್ಲ. ಅವರೊಬ್ಬ ನೀತಿವಂತ, ನಿಷ್ಟಾವಂತ, ದಕ್ಷ ಅಡಳಿತಗಾರ. ಅವರ ಆಡಳಿತ ಅವಧಿಯಲ್ಲಿ ಜಾತಿ ರಹಿತವಾಗಿ ಸರ್ವ ಜನಾಂಗದ ಅಭಿವೃದ್ದಿಗೆ ಶ್ರಮಿಸುವ ಮೂಲಕ ಹಿಂದವಿ ಸ್ವರಾಜ್ಯ ಸ್ಥಾಪಿಸಿದ ಅಪ್ರತಿಮ ಹೋರಾಟಗಾರ ಎಂದು ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ರಾಜ್ಯ ಸಂಚಾಲಕ ಸೂರ್ಯಕಾಂತ ಕದಮ್ ಹೇಳಿದರು.ಸೋಮವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮರಾಠಾ ಸಮುದಾಯಯ ಬಹುದಿನದ ಬೇಡಿಕೆ 3ಬಿ ದಿಂದ 2ಎ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆ ನೆನೆಗುದ್ದಿಗೆ ಬಿದ್ದಿದ್ದು, ಮುಖ್ಯಮಂತ್ರಿಗಳು ವರದಿ ಬಹಿರಂಗ ಪಡಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ದಾವಣಗೆರೆಯ ಹೊದಗೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಶಹಾಜಿ ಮಹಾರಾಜರ ಸಮಾಧಿಯನ್ನು ಪ್ರೇಕ್ಷಣಿಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಅವರು ಒತ್ತಾಯಿಸಿದರು.ಬೀದರ ಜಿಲ್ಲೆಯ ಭಾಲ್ಕಿಯ ನ್ಯಾಯವಾದಿ ಸಂದೀಪ ಮಹಾರಾಜ ತೇಲಗಾಂವಕರ ವಿಶೇಷ ಉಪನ್ಯಾಸ ನೀಡುತ್ತಾ, ಛತ್ರಪತಿ ಶಿವಾಜಿ ಇತರೆ ರಾಜರಂತೆ ವೈಭವದ ಜೀವನ ನಡೆಸಿಲ್ಲ. ಬದಲಾಗಿ ತ್ಯಾಗ ಬಲಿದಾನದ ಪ್ರತೀಕವಾಗಿದ್ದರು. ತಾಯಿ ಜೀಜಾಬಾಯಿ ತಂದೆ ಶಹಾಜಿ ಅವರಿಂದ ಉತ್ತಮ ಸಂಸ್ಕಾರ ಪಡೆದ ಶಿವಾಜಿ ಮಹಾರಾಜರು ಮಹಿಳೆಯರನ್ನು ಸಂರಕ್ಷಕರಾಗಿ ಹೊರಹೊಮ್ಮಿದ್ದರು. ಪ್ರತಿಯೊಬ್ಬ ಹಿಂದೂವಿನ ಹೃದಯದಲ್ಲಿ ಹಿಂದೂ ಸಾಮ್ರಾಟ್ ಸ್ಥಾನ ಪಡೆದವರಾಗಿದ್ದಾರೆ ಎಂದರು.
ಇದಕ್ಕು ಮುನ್ನ ವೇದಿಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.ಭವ್ಯ ಮೆರವಣಿಗೆ:
ಕಲಬುರಗಿ ನಗರದ ಗಂಜ್ ಪ್ರದೇಶದ ಅಯ್ಯರವಾಡಿ ದಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರ ವರೆಗೆ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಕಳೆ ತಂದಿತು.ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತಿನ ಕಲಬುರಗಿ ಜಿಲ್ಲಾಧ್ಯಕ್ಷ ಆರ್.ಬಿ.ಜಗದಾಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐ.ಪಿ.ಎಸ್. ಅಧಿಕಾರಿ ಸ್ನೇಹಬಿಂದುಮಣಿ, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ ನಿಸಾರ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಪಂ ಲೆಕ್ಕಾಧಿಕಾರಿ ಸಂತೋಷ, ಖಜಾಂಚಿ ರಮೇಶ ಚಿಂಚಕೋಟಿ, ಛತ್ರಪತಿ ಶಿವಾಜಿ ಮಹಾರಾಜರ ವೇಷಧರಿಸಿದ ಮಹೇಶ ಸೂರ್ಯವಂಶಿ ಸೇರಿದಂತೆ ಸಮಾಜದ ಮುಖಂಡರು, ಸಮುದಾಯ ಬಾಂಧವರು, ಮಹಿಳೆಯರು ಭಾಗವಹಿಸಿದ್ದರು.