ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಡಾ.ಕೆ.ಶಿವರಾಮ ಕನ್ನಡ ಸಾಹಿತ್ಯ ಸಂಸ್ಕೃತಿಯ ಅಸ್ಮಿತೆಯ ವಕ್ತಾರ. ಅವರೊಬ್ಬ ದಾರ್ಶನಿಕ ಎಂದು ಉಜಿರೆ ಧರ್ಮಸ್ಥಳ ಎಸ್.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಹೇಳಿದರು.ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಚರಂತಿಮಠ ಬಾಗಲಕೋಟೆ ಸಹಯೋಗದಲ್ಲಿ ಸೋಮವಾರ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆ-3ರಲ್ಲಿ ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕುರಿತು ಉಪನ್ಯಾಸ ನೀಡಿದ ಅವರು, ಕಾರಂತರು 20ನೇ ಶತಮಾನ ಕಂಡ ಬಹುಮುಖ ವ್ಯಕ್ತಿತ್ವದ ಕಾದಂಬರಿಕಾರ, ಯಕ್ಷಗಾನ ಪ್ರಯೋಗಶೀಲ, ಪರಿಸರ ತಜ್ಞ, ನಾಟಕಕಾರ, ವೈಜ್ಞಾನಿಕ ಬರಹಗಾರ, ಕವಿ, ಅನುವಾದಕರೂ ಹೌದು. ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕಾರಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ-ಮೂಕಜ್ಜಿಯ ಕನಸುಗಳಲ್ಲಿ ಪ್ರಕೃತಿ ಹಾಗೂ ದೈವತ್ವವನ್ನು ವೈಜ್ಞಾನಿಕ ನೆಲೆಯಲ್ಲಿ ನೋಡಿದ್ದಾರೆ. ದೇವರ ಹಾಗೂ ಮನುಷ್ಯನ ಅಸ್ತಿತ್ವದ ಹುಡುಕಾಟ, ಕಲ್ಪನೆ ಹಾಗೂ ವಾಸ್ತವ ಒಟ್ಟಿಗೆ ಸಾಗುವ ಜಗತ್ತಿನ ಪ್ರತಿಕ್ಷಣದ ಅನುಭವವನ್ನು ಅನುಭೂತಿಗೊಳಿಸಿದ್ದಾರೆ. ಜೀವನ ತತ್ವ, ಕಲೆ ತತ್ವವನ್ನು ಸಾರುವ ಸಂಕೀರ್ಣವಾದ ಕಾದಂಬರಿ ಮನುಷ್ಯ ತನ್ನೊಳಗಿನ ನೈತಿಕತೆ ಹೆಚ್ಚಿಸುವ ತಾತ್ವಿಕ ಚಿಂತನೆಯಿಂದ ಕೂಡಿದೆ. ವೈಚಾರಿಕತೆ ಮತ್ತು ಮಾನವೀಯತೆಯ ಸಮನ್ವಯವನ್ನು ಕಥಾನಾಯಕಿ ಮೂಕಜ್ಜಿ ಸಾರುತ್ತಾಳೆ. ಭಾರತೀಯ ಧರ್ಮಶಾಸ್ತ್ರದಲ್ಲಿ ಪ್ರಾಚೀನ ಕಾಲದ ಋಷಿಮುನಿಗಳು ಅಂತರ್ ದೃಷ್ಟಿಯುವರಾಗಿದ್ದರು. ಅದನ್ನೇ ಇಂದಿನ ವಿಜ್ಞಾನ ಅತೀಂದ್ರಿಯ ಜ್ಞಾನ ಎಂಬ ಹೆಸರಿನಿಂದ ಕರೆದಿದೆ. ಹಿಂದೂ ಧರ್ಮದ ಬೆಳವಣಿಗೆಯ ಇತಿಹಾಸ ಬಿಚ್ಚಿತೋರಿಸಿ, ಹಿಂದೂ ಧರ್ಮದಲ್ಲಿ ನಡೆದ ಹಲವಾರು ಪರಿವರ್ತನೆಗಳ ದೆಸೆಯಿಂದ ಹುಟ್ಟಿಕೊಂಡ ವಿವಿಧ ಮತ, ಧರ್ಮ, ಪಂಥ, ದೇವರುಗಳ ಪುರಾಣಗಳನ್ನೆಲ್ಲ ಕಾದಂಬರಿಕಾರರು ಮೂಕಜ್ಜಿಯ ಅತೀಂದ್ರಿಯ ಜ್ಞಾನದ ಮೂಲಕ ಬಿತ್ತರಿಸುತ್ತಾರೆ. ಮನುಷ್ಯ ತನ್ನ ಕಲ್ಪನೆಗಳಿಂದ ಸೃಷ್ಟಿಸಿದ ದೇವರು, ಕಾಲಕಾಲಕ್ಕೆ ಬದಲಾದ ಇತಿಹಾಸ ಈ ಕಾದಂಬರಿಯಲ್ಲಿ ಬಿಚ್ಚಿಕೊಳ್ಳುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ವಿ.ವಿ. ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಕಾರಂತರು ಭಾರತೀಯ ಸಂಸ್ಕೃತಿಯನ್ನು ಮೂಕಜ್ಜಿಯ ಕನಸುಗಳ ಮೂಲಕ ಹೇಳಿಸಿದ್ದಾರೆ, ಮಾನವರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಅರಿವು ಅಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಆರ್. ಮನಹಳ್ಳಿ. ಎ.ಎಸ್. ಪಾವಟೆ, ಡಾ.ನಂಜುಂಡಸ್ವಾಮಿ, ಬಸವರಾಜ ಕೋತ, ಐ.ಕೆ. ಮಠದ, ವಿಜಯಲಕ್ಷ್ಮೀ ಬದ್ರಶೆಟ್ಟಿ, ಅಕ್ಕನ ಬಳಗದ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.ಕುಲ, ಗೋತ್ರ, ರೀತಿ, ರಿವಾಜು, ಅನಾದಿ ಕಾಲದ ಜನರ ಮುಗ್ದ ಲೈಂಗಿಕ ಕ್ರಿಯೆ, ತನ್ಮೂಲಕ ಲಿಂಗ-ಯೋಜನಿಗಳ ಸಂಕೇತದ ಶಿವ-ಮಾತೃದೇವತೆಯ ಆರಾಧನೆ ಹುಟ್ಟಿಕೊಂಡ ಹಿನ್ನೆಲೆಗಳನ್ನೆಲ್ಲ ಮೂಕಜ್ಜಿಯು ತನ್ನ ಪ್ರಖರವಾದ ವೈಚಾರಿಕ ತರ್ಕ ಸರಣಿಗಳ ಮೂಲಕ ವಿವರಿಸುತ್ತಾಳೆ. ಈ ಕಾದಂಬರಿಯ ಕುತೂಹಲವೂ, ವೈಜ್ಞಾನಿಕವಾಗಿ ಸವಾಲೂ ಆಗುತ್ತದೆ. ವೈಚಾರಿಕತೆ ಹಾಗೂ ಮಾನವೀಯತೆಯ ಸಮನ್ವಯದ ಕಥೆಯಾಗಿದೆ.-ಡಾ.ರಾಜಶೇಖರ ಹಳೆಮನೆ ಸಹ ಪ್ರಾಧ್ಯಾಪಕ ಎಸ್.ಡಿ.ಎಂ ಕಾಲೇಜು ಉಜಿರೆ ಧರ್ಮಸ್ಥಳ