ಕನ್ನಡಪ್ರಭ ವಾರ್ತೆ ಅಥಣಿ
ಮಹಾತಪಸ್ವಿ ಮುರುಘೇಂದ್ರ ಸ್ವಾಮೀಜಿ ಅವರು ಶಿವಯೋಗದ ಸಾಧನೆಯ ಮೂಲಕ ಅಥಣಿಯ ಶಿವಯೋಗಿಗಳು ಎಂದು ಪ್ರಸಿದ್ದಿ ಹೊಂದಿದರೆ ಅವರ ಶಿಷ್ಯರಾದ ಮರುಳ ಶಂಕರ ದೇವರು ಮೌನವಾಗಿಯೇ ಇದ್ದು ನಿಷ್ಕಲ್ಮಶ ಮನಸ್ಸಿನಿಂದ ಶಿವಯೋಗಿಗಳ ಸೇವೆ ಮಾಡಿ ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ ಎಂದು ಸುಕ್ಷೇತ್ರ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು.ಅಥಣಿ ಪಟ್ಟಣದ ಬಣಜವಾಡ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಶ್ರೀ ಮರಳು ಶಂಕರ ದೇವರು ಪ್ರತಿಷ್ಠಾನ ಹಮ್ಮಿಕೊಂಡಿದ್ದ ಮೌನಯೋಗಿ ಶ್ರೀ ಮರಳು ಶಂಕರ ದೇವರ 112ನೇ ಜಯಂತ್ಯುತ್ಸವ ಹಾಗೂ ಸಾಧಕರ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಅಥಣಿಯ ಗಚ್ಚಿನಮಠದ ಮರುಳ ಶಂಕರ ದೇವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲರಲಿ ಭಕ್ತಿಯ ಸುವಾಸನೆ ಸೂಸುತಿದ್ದರು. ಅವರು ಶತಮಾನೋತ್ಸವದ ಹೊಸ್ತಿಲಲ್ಲಿ ಲಿಂಗೈಕ್ಯರಾಗಿದ್ದರೂ ಕೂಡ ಭಕ್ತರ ಹೃದಯದಲ್ಲಿ ಶಿವಯೋಗಿಗಳ ಜೊತೆಗೆ ಒಂದು ನಾಣ್ಯದ ಎರಡು ಮುಖಗಳಂತೆ ಮರಳು ಶಂಕರ ದೇವರು ಕೂಡ ಅಜರಾಮರ ಆಗಿದ್ದಾರೆ. ಅವರ ಹೆಸರಿನಲ್ಲಿ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಮರುಳ ಶಂಕರ ದೇವರ ಪ್ರತಿಷ್ಠಾನ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.ಯುವ ನಾಯಕ ಚಿದಾನಂದ ಸವದಿ ಮಾತನಾಡಿ, ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗದೆ ಭಕ್ತರು ಕರೆದಲ್ಲಿ ಬಂದು ಆಶೀರ್ವಾದ ನೀಡುತ್ತಿದ್ದ ಶ್ರೀ ಮರುಳ ಶಂಕರ ದೇವರು ಶ್ರೇಷ್ಠ ಜಲ ಸಂಶೋಧಕರಾಗಿದ್ದಾರೆ. ಅವರು ಸಂಶೋಧಿಸಿದ ಬಾವಿ ಮತ್ತು ಕೊಳವೆಬಾವಿಗಳು ಇಂದಿಗೂ ಅವರ ಆಶೀರ್ವಾದದಿಂದ ನೀರು ಒದಗಿಸುತ್ತಿವೆ ಎಂದು ಸ್ಮರಿಸಿದರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ.ಪ್ರಿಯಂವದಾ ಹುಲಗಬಾಳಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಬಣಜವಾಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ಬಣಜವಾಡ ಮಾತನಾಡಿದರು. ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹಾಗೂ ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಪ್ರಫುಲ್ ಹಂಜಿ ಹಾಗೂ ಶಿಕ್ಷಣ ತಜ್ಞ ಸುರೇಶ್ ಚಿಕ್ಕಟ್ಟಿ ಅವರನ್ನು ಸನ್ಮಾನಿಸಲಾಯಿತು. 15 ದಿನಗಳ ಕಾಲ ಅಥಣಿ ಪಟ್ಟಣಕ್ಕೆ ಮತ್ತು ಗ್ರಾಮೀಣ ಪ್ರದೇಶಕ್ಕೆ ನೀರು ಪೂರೈಸಿದ ಪುರಸಭೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.ಮುರಿಗೆಪ್ಪ ತೊದಲಬಾಗಿ, ಸಂಸ್ಥೆಯ ಕಾರ್ಯಾಧ್ಯಕ್ಷೆ ಅನಿತಾ ಬಣಜವಾಡ, ಪ್ರಾಚಾರ್ಯ ರವಿ ಕಾಳಜ ಸೇರಿ ಇತರರು ಉಪಸ್ಥಿತರಿದರು. ಮೌನಯೋಗಿ ಮರಳು ಶಂಕರ ದೇವರು ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸಯ್ಯ ಇಟ್ನಾಳಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣ್ಣಾಸಾಬ ತೆಲಸoಗ ಸ್ವಾಗತಿಸಿದರು. ಡಾ.ಕುಮಾರ ತಳವಾರ ನಿರೂಪಿಸಿ, ವಂದಿಸಿದರು.