ಹಸಿರಿನಿಂದ ಕಂಗೊಳಿಸುತ್ತಿದೆ ಶಿವಗಿರಿ ಆಯುರ್ವೇದ ವನ

KannadaprabhaNewsNetwork | Published : Jun 4, 2024 12:30 AM

ಸಾರಾಂಶ

2-3 ಎಕರೆಯಲ್ಲಿ ಹರಡಿದ ಶಿವಗಿರಿ ವನದಲ್ಲಿ ಅನೇಕ ಔಷಧೀಯ ಸಸ್ಯಗಳ ಸಂರಕ್ಷಣೆ ಮಾಡಲಾಗಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜೈನ ಕಾಶಿ ಎಂದೇ ಖ್ಯಾತಿ ಹೊಂದಿರುವ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದ ಶಿವಗಿರಿ ಆಯುರ್ವೇದ ವನ ಅನೇಕರ ಪರಿಶ್ರಮದ ಫಲವಾಗಿ ಇಂದು ಹಚ್ಚ ಹಸಿರಿನಿಂದ ನಳನಳಿಸುತ್ತಿದೆ.

೧೩ ವರ್ಷಗಳ ಹಿಂದೆ ಬೆಟ್ಟಕ್ಕೆ ಆಗಮಿಸಿದ ಜೈನಮುನಿ ೧೦೮ ಶ್ರೀ ಕುಲರತ್ನಭೂಷಣ ಮಹಾರಾಜರು ಇಲ್ಲಿಯೇ ನೆಲೆಸಿದ್ದಾರೆ. ಹಳಿಂಗಳಿ ಗ್ರಾಮದ ಮುನಿಗುಂಪಾ ಆವೃತ ಭದ್ರಗಿರಿ ಬೆಟ್ಟ ಜೈನ ಕಾಶಿ ಎಂದೇ ಹೆಸರಾಗಿದೆ. ತಮ್ಮ ಪಾಂಡಿತ್ಯದ ಪ್ರವಚನ, ಮೊನಚಾದ ಮಾತುಗಳಿಂದ ಜೈನ ಧರ್ಮಿಯರು ಸೇರಿ, ಇತರ ಧರ್ಮಿಯರಲ್ಲೂ ಜಾಗೃತಿ ಮೂಡಿಸಿದ ಮುನಿಗಳು ಅಧ್ಯಾತ್ಮದೊಡನೆ ಪರಿಸರ ಸಂರಕ್ಷಣೆ ಮಹತ್ವ ತಿಳಿಸುತ್ತ ಭದ್ರಗಿರಿ ಬೆಟ್ಟದಲ್ಲಿ ಲಕ್ಷಾಂತರ ಅನುಯಾಯಿಗಳಿಂದ ಗಿಡಗಳನ್ನು ನೆಡುವ ದೊಡ್ಡ ಕಾಯಕಕ್ಕೆ ಮುಂದಾಗಿ ಬರಡಾಗಿದ್ದ ಬೆಟವನ್ನು ಹಚ್ಚ ಹಸಿರಿನ ವನವಾಗಿಸಿದ್ದಾರೆ.

ಸ್ವಾಮೀಜಿಗಳು, ಸಾಹಿತಿಗಳು, ರಾಜಕೀಯ ಮುಖಂಡರು, ರೈತರು ಸೇರಿದಂತೆ ಸಾಧಕರನ್ನು ಕರೆಸಿ ಅವರ ಹಸ್ತದಿಂದ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣ ಮಾಡಿದ್ದು, ಇಲ್ಲಿಗೆ ಬಂದರೆ ದಟ್ಟಾರಣ್ಯದಲ್ಲಿ ಅಲೆದಾಡಿದ ಅನುಭವಾಗುತ್ತದೆ.

ಶಿವಗಿರಿ ವನ ನಾಮಕರಣ:

ಇಲ್ಲಿಗೆ ಶ್ರಾವಕ ಶ್ರಾವಕಿಯರು, ಕುಮಾರ ಕುಮಾರಿಕೆಯರು ಮಹಾರಾಜರ ಆಶೀರ್ವಾದ ಪಡೆದು ಪ್ರತಿದಿನ ಗಿಡಗಳಿಗೆ ನೀರು ಹಾಕುವ ಕಾಯಕದಲ್ಲಿ ನಿರತರಾಗುತ್ತಾರೆ. 2-3 ಎಕರೆಯಲ್ಲಿ ಶಿವಗಿರಿ ವನ ಎಂದು ನಾಮಕರಣ ಮಾಡಿದ ಮುನಿಗಳು, ಅಲ್ಲಿ ಸಾವಿರಾರು ಆಯುರ್ವೇದ ಗಿಡಮೂಲಿಕೆಗಳನ್ನು ನೆಟ್ಟಿದ್ದಾರೆ. ಅವು ಈಗ ಆಳೆತ್ತರಕ್ಕೆ ಬೆಳೆದು ಆಯುರ್ವೇದ ಔಷಧಿ ಮತ್ತು ಔಷಧಿಯುಕ್ತ ಗಾಳಿಯನ್ನು ಸುತ್ತಲಿನ ಪರಿಸರಕ್ಕೆ ಪಸರಿಸುತ್ತಿವೆ.

ಹಣ್ಣು, ಔಷಧಿ ಸಸ್ಯಗಳ ಆಗರ:

ಇಲ್ಲಿ ಪೆರಲ, ಚಿಕ್ಕು, ಸೀತಾಫಲ, ಮಾವು, ಹುಣಸೆ, ತೆಂಗು, ಸುಬಾಬುಲ, ಆಲ, ಅರಳಿಮರ, ಗುಲಗಂಜಿ, ಹನುಮ ಫಲ, ರಾಮಫಲ, ನೇರಳೆ, ಬೆಟ್ಟದ ನೆಲ್ಲಿ, ನೀಲಗಿರಿ, ಸಂಪಿಗೆ, ಬೇವು, ಗುಡ್ಡದ ತುಳಸಿ, ಹೊಂಗೆ, ಆಡು ಸೋಗೆ, ಈಶ್ವರ ಬಳ್ಳಿ, ಉತ್ತರಾಣಿ, ಅಮೃತ ಬಳ್ಳಿ, ಅಶ್ವಗಂಧ, ಅಶ್ವತ್ಥಮರ, ಔಡಲ, ಕಾಡು ಕರಿಬೇವು, ಕಾಡು ತುಂಬೆಗಿಡ, ಕಾಡು ಕಣಗಿಲೆ ಸೇರಿದಂತೆ 500ಕ್ಕೂ ವಿವಿಧ ಮಾದರಿಯ ಆಯುರ್ವೇದ ಔಷಧಿಯ ಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ವನದಲ್ಲಿ ಹಾಗೇ ಸುಮ್ಮನೆ ತಿರುಗಾಡಿ ಬಂದರೆ ಮನಸ್ಸು ಉಲ್ಲಾಸ ಬರುವುದರ ಜೊತೆಗೆ ದೇಹಕ್ಕೆ ಆರೋಗ್ಯದ ಸುಖಾನುಭವವಾಗುತ್ತದೆ. ಶಿವಗಿರಿಯ ಸುತ್ತಲೂ ತಂತಿ ಬೇಲಿ ಹಾಕಿ ಭದ್ರಗೊಳಿಸಲಾಗಿದೆ. ಅಲ್ಲಿ ಜೈನ ಧರ್ಮದ ಅನೇಕ ಮುನಿಗಳ ಧ್ಯಾನದ ಅನೇಕ ಕಲಾಕೃತಿಗಳನ್ನು ರಚಿಸಲಾಗಿದೆ.

ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಮುನಿಗುಂಫಾಗಳು:

ಇಲ್ಲಿ ಗಿಡಗಳು ಮರವಾಗಿ ಬೆಳೆದು ನಿಂತಿದ್ದರಿಂದ ಅನೇಕ ಜಾತಿಯ ಪಕ್ಷಿಗಳು ತಮ್ಮ ಸಂತತಿ ಹೆಚ್ಚಿಸಿಕೊಳ್ಳಲು ಗೂಡು ಕಟ್ಟಿ ಮರಿ ಮಾಡಿಕೊಂಡು ಹೋಗುತ್ತವೆ. ಅಲ್ಲದೆ ನವಿಲು, ಮೊಲ, ವಿಷ ಜಂತುಗಳು ಸಹ ಇಲ್ಲಿ ಭಯವಿಲ್ಲದೆ ತಿರುಗಾಡುತ್ತವೆ.

ಇಲ್ಲಿನ ಕೆರೆಯಲ್ಲಿ ಜಲಮಂದಿರ ನಿರ್ಮಿಸಲಾಗಿದೆ. ಬೆಟ್ಟದಲ್ಲಿ ಜೈನ ಧರ್ಮಿಯರ ಸಾವಿರಾರು ವರ್ಷಗಳ ಹಿಂದಿನವು ಎನ್ನಲಾಗುವ ೭೫೦ಕ್ಕೂ ಹೆಚ್ಚು ಮುನಿಗುಂಫಾಗಳಿವೆ. ಅಲ್ಲದೆ, ಜೈನಧರ್ಮ ಬೋಧಿಸುವ ಮುನಿಗಳು ಭಕ್ತರಿಗೆ ವಿಷಯ ಮನನ ಮಾಡುವಂತೆ ಕಾಣುವ ಸುಂದರವಾದ ಮೂರ್ತಿಗಳು ಆಕರ್ಷನೀಯವಾಗಿವೆ. ಇವೆಲ್ಲವನ್ನು ರಕ್ಷಿಸಲು ತಲೆಎತ್ತಿದಂತಿರುವ ಭದ್ರಗಿರಿ ಮಾತೆಯ ಮೂರ್ತಿಯಂತೂ ಬಹಳ ಸುಂದರವಾಗಿದ್ದು, ಈ ಬೆಟ್ಟಕ್ಕೆ ಮತ್ತಷ್ಟು ಮೆರಗು ತಂದಿದೆ.

ಸಂಜೆ ಹಾಗೂ ಬೆಳಗ್ಗೆ ನವಿಲುಗಳ ನರ್ತನ, ಹಕ್ಕಿಗಳ ಚಿಲಿಪಿಲಿ ಹಾಗೂ ಅನೇಕ ಜಾತಿಯ ಪಕ್ಷಿಗಳು ತಂಡತಂಡವಾಗಿ ಬಂದು ನಲಿದು ಹೂವಿನ ಮಕರಂದ ಹಾಗೂ ಹಣ್ಣು ಹಂಪಲ ತಿಂದು ಹೋಗುವ ಸನ್ನಿವೇಶವಂತೂ ನೋಡುಗರಿಗೆ ಮುದನೀಡುತ್ತದೆ.

ಧರ್ಮ ಜಾಗೃತಿಯೊಂದಿಗೆ ಪರಿಸರ ಬೆಳೆಸಿ ರಕ್ಷಣೆ ಮಾಡುತ್ತಿರುವ ಜೈನ ಮುನಿ ಆಚಾರ್ಯರತ್ನ ಶ್ರೀ ಕುಲರತ್ನಭೂಷಣರ ಈ ಕಾರ್ಯಕ್ಕೆ ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರೂ ತೆಲೆದೂಗುತ್ತಾರೆ.

ಸಾವಿರಾರು ವರ್ಷಗಳ ಹಿಂದೆ ಉತ್ತರ ಭಾರತದಿಂದ ಭದ್ರಬಾಹು ಮುನಿಗಳು ತಮ್ಮ ಶಿಷ್ಯರೊಡನೆ ಶ್ರವಣಬೆಳಗೊಳದತ್ತ ಸಾಗುವಾಗ ನೆಲೆ ನಿಂತು ಚಾತುರ್ಮಾಸ ಆಚರಿಸಿದ ತಾಣವಾಗಿರುವ ಮುನಿಗುಂಫಾ ಇಂದಿಗೂ ಜೈನಧರ್ಮಿಯರ ಪವಿತ್ರ ಪ್ರೇಕ್ಷಣೀಯ ಕ್ಷೇತ್ರವಾಗಿದೆ. ಇದನ್ನು ಪಾವನ ಕ್ಷೇತ್ರವಾಗಿಸಲು ನನ್ನ ಕೆಲಸ ನೆಪ ಮಾತ್ರ. ಇಲ್ಲಿ ಎಲ್ಲವೂ ಭಕ್ತರ ಸೇವೆಯೇ ಪ್ರಧಾನವಾಗಿದ್ದು ಎನ್ನು ಮುನಿಗಳ ಪ್ರಾಮಾಣಿಕ ಹಾಗೂ ಅರ್ಪಣಾ ಮನೋಭಾವದ ಸೇವೆಯಿಂದ ಇಂದು ಬೃಹತ್ ಅರಣ್ಯ ಸಂಪತ್ತು ತಲೆ ಎತ್ತಿದ್ದು, ಬೆಟ್ಟ ಸುಂದರವಾಗಿ ಕಾಣುವಂತಾಗಿದೆ. ಮುಂದಿನ ದಿನಗಳಲ್ಲಿ ಇದೊಂದು ಜೈನ ಧರ್ಮದ ಭಕ್ತಿಯ ಕಂಪು ಸೂಸುವ ಪವಿತ್ರ ತಾಣವಾಗುವುದರಲ್ಲಿ ಸಂದೇಹವಿಲ್ಲ.---------------ಆಚಾರ್ಯ ಮುನಿ ಕುಲರತ್ನಭೂಷಣ ಮಹಾರಾಜರು ಭದ್ರಗಿರಿಯ ಉದ್ಧಾರಕ್ಕೆ ಮತ್ತು ಸಂರಚನೆಗೆ ಮುಖ್ಯ ಕಾರಣಕರ್ತರು. ಜನರು ಕಾಲಿಡಲು ಭಯಪಡುತ್ತಿದ್ದ ಹಾಳುನೆಲದಂತಿದ್ದ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ನೆಲೆ ನಿಂತು, ಭದ್ರಗಿರಿ ಬೆಟ್ಟಕ್ಕೆ ಹಸಿರು ಹೊದಿಕೆಯುಡಿಸಿ ಸುತ್ತಲಿನ ಭಕ್ತರಿಗೆ, ಶ್ರಾವಕ-ಶ್ರಾವಕಿಯರಿಗೆ ಒಂದೊಂದು ಸಸಿ ನೆಡುವಂತೆ ಆದೇಶಿಸಿದ ಕಾರಣ ಇಂದು ಬೆಟ್ಟ ಹಸಿರುಮಯವಾಗಿದೆ. ಬೆಟ್ಟದಲ್ಲಿ ಜಲಮಂದಿರ ನಿರ್ಮಾಣಗೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

-ಧನಪಾಲ ಯಲ್ಲಟ್ಟಿ ಮತ್ತು ಭುಜಬಲಿ ವೆಂಕಟಾಪುರ ಹಳಿಂಗಳಿ ಗ್ರಾಮಸ್ಥರು.

Share this article