24 ರಂದು ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ 6ನೇ ಘಟಿಕೋತ್ಸವ

KannadaprabhaNewsNetwork | Published : Feb 21, 2024 2:04 AM

ಸಾರಾಂಶ

ಯುಜಿ, ಪಿಜಿ, ಪಿಎಚ್‌.ಡಿ ಸೇರಿದಂತೆ ಒಟ್ಟು 1660 ಮಂದಿಗೆ ಪದವಿ ಪ್ರಧಾನ ಮಾಡಲಾಗುವುದು. 1060 ಬಿಇ, 47 ಬಿಸಿಎ, 120 ಎಂ.ಟೆಕ್, 117 ಎಂಸಿಎ, 51 ಎಂಎಸ್ಸಿ, 256 ಎಂಬಿಎ ಮತ್ತು 9 ಪಿಎಚ್‌.ಡಿ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ನಾನಾ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 32 ವಿದ್ಯಾರ್ಥಿಗಳು ಸೇರಿದಂತೆ 63 ವಿದ್ಯಾರ್ಥಿಗಳಿಗೆ ಪದಕ ನೀಡಲಾಗುವುದು. ಇದರಲ್ಲಿ 31 ದತ್ತಿ ಪದಕಗಳು ಸೇರಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ 6ನೇ ಘಟಿಕೋತ್ಸವವನ್ನು ಫೆ.24ರ ಸಂಜೆ 4ಕ್ಕೆ ಎಸ್ ಜೆಸಿಇ ಆವರಣದಲ್ಲಿ ಆಯೋಜಿಸಲಾಗಿದ್ದು, ಪಿಎಚ್‌.ಡಿ ಸೇರಿದಂತೆ 1660 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಪ್ರೊ.ಎ.ಎನ್. ಸಂತೋಷ್‌ ಕುಮಾರ್ ತಿಳಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಘಟಿಕೋತ್ಸವ ನಡೆಯಲಿದ್ದು, ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡುವರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಬಿ. ಸುರೇಶ್ ಅತಿಥಿಯಾಗುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುಜಿ, ಪಿಜಿ, ಪಿಎಚ್‌.ಡಿ ಸೇರಿದಂತೆ ಒಟ್ಟು 1660 ಮಂದಿಗೆ ಪದವಿ ಪ್ರಧಾನ ಮಾಡಲಾಗುವುದು. 1060 ಬಿಇ, 47 ಬಿಸಿಎ, 120 ಎಂ.ಟೆಕ್, 117 ಎಂಸಿಎ, 51 ಎಂಎಸ್ಸಿ, 256 ಎಂಬಿಎ ಮತ್ತು 9 ಪಿಎಚ್‌.ಡಿ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ನಾನಾ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 32 ವಿದ್ಯಾರ್ಥಿಗಳು ಸೇರಿದಂತೆ 63 ವಿದ್ಯಾರ್ಥಿಗಳಿಗೆ ಪದಕ ನೀಡಲಾಗುವುದು. ಇದರಲ್ಲಿ 31 ದತ್ತಿ ಪದಕಗಳು ಸೇರಿವೆ ಎಂದರು.

ವಿವಿ ಇತ್ತೀಚೆಗೆ ಕೈಗಾರಿಕೆ ಮತ್ತು ಉದ್ಯಮಚಾಲಿತ ಕೋರ್ಸ್‌ ಗಳನ್ನು ಆರಂಭಿಸಿದೆ. ಜೊತೆಗೆ ವಿವಿಧ ಕಂಪನಿಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಸಂಶೋಧನಾ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಿವಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಲವು ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಸಚಿವ ಪ್ರೊ.ಎಸ್.ಎ. ಧನರಾಜ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಪಿ. ನಂಜುಂಡಸ್ವಾಮಿ, ಡೀನ್ ಡಾ.ಎಂ.ಎನ್. ನಾಗೇಂದ್ರಪ್ರಸಾದ್, ಎಸ್ ಜೆಸಿಇ ಪ್ರಭಾರ ಪ್ರಾಂಶುಪಾಲ ಡಾ.ಸಿ. ನಟರಾಜ್ ಇದ್ದರು.

- ನ್ಯಾನೊ ಉಪಗ್ರಹ ಉಡಾವಣೆ

ಸೂಕ್ಷ್ಮ ಗುರುತ್ವಾಕರ್ಷಣ ವಲಯದಲ್ಲಿ ಔಷಧಿಗಳ ಪರಿಣಾಮ ಕುರಿತು ಅಧ್ಯಯನ ಮಾಡುವ ಸಲುವಾಗಿ ಇಸ್ರೋ ಸಹಯೋಗದಲ್ಲಿ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ನ್ಯಾನೋ ಉಪಗ್ರಹ ಉಡಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಎ.ಎನ್. ಸಂತೋಷ್‌ ಕುಮಾರ್ ತಿಳಿಸಿದರು.

ನಮ್ಮ ವಿವಿಯ 60 ವಿದ್ಯಾರ್ಥಿಗಳು, ಬೋಧಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಪಗ್ರಹ ಸುಮಾರು 1.5 ಕೆ.ಜಿ ತೂಕ ಇರಲಿದ್ದು, ಸುಮಾರು 1.25 ಕೋಟಿ ರೂ. ವೆಚ್ಚವಾಗಲಿದೆ. ಏಪ್ರಿಲ್‌ ನಲ್ಲಿ ಉಡಾವಣೆ ಮಾಡುವ ನಿರೀಕ್ಷೆಯಿದ್ದು, ವಿವಿಯಿಂದಲೇ ಮಾನಿಟರಿಂಗ್ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಉಪಗ್ರಹ ಉಡಾವಣೆ ಮಾಡುತ್ತಿರುವ ಮೊದಲ ವಿವಿ ನಮ್ಮದು ಎಂದು ಅವರು ಹೇಳಿದರು.

Share this article