ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಎಫೆಕ್ಟ್ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿ ಸುವರ್ಣ ವಿಧಾನಸೌಧದ ಮೇಲೂ ಪರಿಣಾಮ ಬೀರುವಂತಾಗಿದೆ. ಸುವರ್ಣಸೌಧ ಕಟ್ಟಡ ನಿರ್ವಹಣೆಗೆ ಅನುದಾನ ನೀಡದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ. ಮೊದಲೇ ನಿರ್ವಹಣಾ ಅನುದಾನ ಕೊರತೆಯಿಂದ ಬಳುತ್ತಿರುವ ಸುವರ್ಣ ಸೌಧಕ್ಕೆ ಇದೀಗ ಹೆಸ್ಕಾಂ ಇಲಾಖೆ ಕರಂಟ್ ಶಾಕ್ ಕೊಟ್ಟಿದೆ.
ಹೆಸ್ಕಾಂ ಇಲಾಖೆಗೆ ಸುವರ್ಣ ಸೌಧದ ಕಳೆದ 6 ತಿಂಗಳ ಅವಧಿಯ ₹1.20 ಲಕ್ಷ ವಿದ್ಯುತ್ ಬಿಲ್‌ನ್ನು ಲೋಕೋಪಯೋಗಿ ಇಲಾಖೆ ಪಾವತಿಮಾಡದೇ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಸುವರ್ಣಸೌಧದ ನಿರ್ವಹಣೆ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ತಿಂಗಳಲ್ಲೇ ವಿದ್ಯುತ್ ಬಾಕಿ ಬಿಲ್ ಪಾವತಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ ಸುವರ್ಣಸೌಧಕ್ಕೆ ಕಲ್ಪಿಸಲಾಗಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.ಬೆಳಗಾವಿ ನಗರದಿಂದ 10 ಕಿ.ಮೀ ದೂರದ ಹಾಲಗಾ ಗ್ರಾಮದ ಬಳಿ 127.12 ಎಕರೆ ಪ್ರದೇಶದಲ್ಲಿ ₹500 ಕೋಟಿ ವೆಚ್ಚದಲ್ಲಿ ತಲೆ ಎತ್ತಿ 2012ರಲ್ಲಿ ಉದ್ಘಾಟನೆಗೊಂಡಿರುವ ಸುವರ್ಣ ವಿಧಾನಸೌಧದ ಪ್ರಯೋಜನಕ್ಕಿಂತ ನಿರ್ವಹಣೆ ಖರ್ಚು ದೊಡ್ಡದಾಗುತ್ತಿದೆ. 4 ಎಕರೆ ಪ್ರದೇಶದಲ್ಲಿನ 4+1 ಮಾದರಿಯ ಬಹುಮಹಡಿ ಕಟ್ಟಡದ ಸುತ್ತಳತೆ 60,398 ಮೀಟರ್. ಅಧಿವೇಶನ ಸಂದರ್ಭದಲ್ಲಿನ ಖರ್ಚು-ವೆಚ್ಚ ಹೊರತುಪಡಿಸಿಯೇ ವಿಶಾಲ ಕಟ್ಟಡದ ನಿರ್ವಹಣೆಗೆ ಪ್ರತಿ ವರ್ಷ ₹9 ಕೋಟಿ ಅನುದಾನ ಬೇಕಿದೆ.ಸುವರ್ಣ ವಿಧಾನಸೌಧದ ಆವರಣದ 18 ಎಕರೆ ಪ್ರದೇಶದಲ್ಲಿರುವ ಉದ್ಯಾನ ನಿರ್ವಹಣೆಗೆ ವಾರ್ಷಿಕ ₹1 ರಿಂದ 2 ಕೋಟಿ ಖರ್ಚಾಗುತ್ತಿದ್ದರೇ, ವಿದ್ಯುತ್ ಬಿಲ್ ಹೆಚ್ಚು ಕಡಿಮೆ ₹2 ಕೋಟಿ ಆಗುತ್ತಿದೆ. ಸುವರ್ಣಸೌಧದ ನಿರ್ವಹಣೆಗೆ ₹9 ಕೋಟಿ ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ತಿರಸ್ಕರಿಸಿದೆ. ಸುವರ್ಣಸೌಧ ನಿರ್ಮಾಣವಾಗಿ 13 ವರ್ಷವಾಗಿದೆ. ಆದರೆ, ಈವರೆಗೂ ಸುಣ್ಣ ಬಣ್ಣ ಬಳಿದಿಲ್ಲ. ಕರೆಂಟ್ ಬಿಲ್‌ನ್ನು ಕಟ್ಟಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ನೋಡಿದರೇ ಸರ್ಕಾರದ ಬಳಿ ಅನುದಾನವೇ ಇಲ್ಲ ಎಂಬ ಅನುಮಾನವೂ ಮೂಡುತ್ತದೆ. ಸರ್ಕಾರದ ವಿರುದ್ಧ ಈ ಭಾಗದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಆಶಯದೊಂದಿಗೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಸುವರ್ಣಸೌಧದ ಬಗ್ಗೆ ಕಾಳಜಿ ತೋರುತ್ತಿಲ್ಲ. ಅದಕ್ಕೆ ಶಕ್ತಿ ತುಂಬುವ ಕೆಲಸವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.ಸುವರ್ಣಸೌಧದಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿ ವಿದ್ಯುತ್ ಬಿಲ್ ಸುಮಾರು ₹ 20 ಲಕ್ಷ ಬರುತ್ತದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಏರಿಳಿತ ಇರುತ್ತದೆ. ಕಳೆದ 6 ತಿಂಗಳ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಹೆಸ್ಕಾಂ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಬಾಕಿ ವಿದ್ಯುತ್ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.ಎಸ್.ಎಸ್.ಸೊಬರದ,
ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ.