ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನ ಸೆ.17ರಿಂದ ಅ.2ರ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಜಿಲ್ಲಾದ್ಯಂತ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನವನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪರಿಶ್ರಮದ ಮೂಲಕ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಕರೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಗಾರ, ಬೆಳೆ ಹಾನಿ ಹಾಗೂ ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ವೀಕ್ಷಣೆ ಮತ್ತು ಮಂಡಲವಾರು ಸಂಘಟನಾತ್ಮಕ ಕೆಲಸ ಕಾರ್ಯಗಳ ಪ್ರಗತಿ ಅಭಿನಂದನೀಯ. ಜಿಎಸ್ಟಿ ಸುಧಾರಣೆಯಿಂದ ದೇಶವಾಸಿಗಳಿಗೆ ಲಭಿಸುವ ಪ್ರಯೋಜನದ ಕುರಿತು ಪಕ್ಷದ ಕಾರ್ಯಕರ್ತರು ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು. ಅ.2ರಂದು ಸೇವಾ ಪಾಕ್ಷಿಕ ಚಟುವಟಿಕೆಗಳ ಜೊತೆಗೆ ಮಂಡಲದ ವಿವಿಧ ಮಟ್ಟದ ಕಾರ್ಯಾಗಾರಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನದ ಎಲ್ಲಾ ಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲರೂ ಬದ್ಧತೆಯಿಂದ ಕೈಜೋಡಿಸಬೇಕು. ನಂತರ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ವೀಕ್ಷಣೆ ಮಾಡಿ ಶೀಘ್ರದಲ್ಲಿಯೇ ಬೆಳೆ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಸೇವಾ ಪಾಕ್ಷಿಕ ಅಭಿಯಾನದ ಜಿಲ್ಲಾ ಸಹ ಸಂಚಾಲಕ ಗೋಪಾಲ ಘಟಕಾಂಬಳೆ, ರಾಜೇಶ ತವಶೆ ಮಾತನಾಡಿ, ಸೇವಾ ಪಾಕ್ಷಿಕ ಅಭಿಯಾನದಲ್ಲಿ ಜಿಲ್ಲೆ, ಎಲ್ಲಾ ಮಂಡಲ ಮತ್ತು ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಸೇವಾ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಜಿಲ್ಲಾ ಕಾರ್ಯದರ್ಶಿ ರಮೇಶ ಮಸಿಬಿನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬು ಮಾಶ್ಯಾಳ ಅವರು ಮಾತನಾಡಿ, ಜನರ ಧನಾತ್ಮಕ ಚಿಂತನೆಗಳನ್ನು ಅನುಮಾನಕ್ಕೆ ತಳ್ಳುವುದರಲ್ಲಿ ಕಾಂಗ್ರೆಸ್ ನಿಪುಣತೆ ಹೊಂದಿದೆ. ಆದರೆ ಕಾಂಗ್ರೆಸ್‌ನ ಯಾವುದೇ ಅಪಪ್ರಚಾರಗಳಿಂದ ಬಿಜೆಪಿಯ ಬಲಾಡ್ಯ ಸಂಘಟನೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಪಕ್ಷ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕ ಅಭಿಯಾನದ ಎಲ್ಲ ಸೇವಾ ಚಟುವಟಿಕೆಗಳು ಅತ್ಯುತ್ತಮವಾಗಿ ಮೂಡಿಬರಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಮುಖಂಡರಾದ ನಿಂಗನಗೌಡ ಬಿರಾದಾರ, ಸೋಮು ದೇವೂರ, ಕಲ್ಮೇಶ ಬುದ್ನಿ, ಅಶ್ವಿನಿ ಪಟ್ಟಣಶೆಟ್ಟಿ, ಭಾರತಿ ಬುಯ್ಯಾರ, ಬಾಲರಾಜ ರೆಡ್ಡಿ, ದಾವೂದ್, ವಿಠ್ಠಲ ಯಂಕಂಚಿ, ಸಿದ್ದರಾಮಯ್ಯ ಮಠ, ಯಲ್ಲು ಬಾವುರ, ಶ್ರೀಮಂತ ನಾಟಿಕಾರ, ಮಂಜುನಾಥ ಬಡಿಗೇರ, ಜಗದೀಶ ಚವ್ಹಾಣ, ಪಿಂಟೂ ಬಾಸುತ್ಕರ, ರಮೇಶ ಹಂಚಲಿ, ಅಭಿಷೇಕ್ ಅಂಬಲಗಿ, ಸತೀಶ ಬಿರಾದಾರ, ಜಕ್ಕು ದೊಡ್ಡಿಣಿ, ಶಿವಾನಂದ ಉತ್ನಾಳ, ಸಂಜು ಪವಾರ ಸೇರಿದಂತೆ ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ದೊಡ್ಡಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು, ಮಾಜಿ ಮಂಡಲ ಪ್ರ.ಕಾ ಭೀಮನಗೌಡ ಲಚ್ಯಾಣ ವಂದಿಸಿದರು.