ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಸಮೀಪದ ಕೊಪ್ಪ ಭಾರತ ಮಾತಾ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರೇಮಿಗಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿ ಪ್ರಕೃತಿ ಪ್ರೇಮ ಮೆರೆದ ಕಾರ್ಯಕ್ರಮ ಜನರ ಗಮನ ಸೆಳೆಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಭಾರತಮಾತಾ ಪದವಿ ಕಾಲೇಜು ಸಂಯುಕ್ತ ಆಶಯದಲ್ಲಿ ಕುಶಾಲನಗರ ಕೊಪ್ಪ ಗಡಿಭಾಗದ ಸೇತುವೆ ಕೆಳಭಾಗದಲ್ಲಿ ಕಾವೇರಿ ನದಿಯನ್ನು ಸ್ವಚ್ಛಗೊಳಿಸುವ ಮೂಲಕ ಐ ಲವ್ ಕಾವೇರಿ ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳು ಸಂಘಟನೆಗಳ ಪ್ರಮುಖರು ನದಿಯನ್ನು ಸ್ವಚ್ಛಗೊಳಿಸಿದರು.ಈ ಸಂದರ್ಭ ಮಾತನಾಡಿದ ಭಾರತ್ ಮಾತಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಎಬಿನ್, ಫೆ. 14ರಂದು ಕೆಲವೆಡೆ ಯುವ ಪೀಳಿಗೆ ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಕಾಲಹರಣ ಮಾಡುತ್ತಾರೆ. ಆದರೆ ನಮ್ಮ ವಿದ್ಯಾರ್ಥಿಗಳ ಮೂಲಕ ಆ ದಿನವನ್ನು ಕಾವೇರಿ ನದಿಯನ್ನು ಪ್ರೀತಿಸುವ ದಿನವಾಗಿಸಿ ಈ ಮೂಲಕ ನದಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಹೇಳಿದರು. ಸ್ವಚ್ಛ ಕಾವೇರಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭ ಮಾತನಾಡಿದ ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ ಎನ್ ಚಂದ್ರಮೋಹನ್, ಸ್ವಚ್ಛ ಕಾವೇರಿಗಾಗಿ ಹಲವಾರು ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನದಿ ತಟದ ಜನರಿಗೆ ಮತ್ತು ಪ್ರವಾಸಿಗರಿಗೆ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಸ್ವಚ್ಛ ಕಾವೇರಿ ಗುರಿ ಇನ್ನೂ ತಲುಪುವಲ್ಲಿ ವಿಫಲವಾಗಿರುವುದು ವಿಷಾದನೀಯ ಎಂದರು.ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಮತ್ತು ಕಾವೇರಿ ನದಿ ಸ್ವಚ್ಛತಾ ಅಭಿಯಾನ ಮತ್ತು ರಿವರ್ ಸೇವಾ ಟ್ರಸ್ಟ್ ಪ್ರಮುಖರು ಪಾಲ್ಗೊಂಡಿದ್ದರು.ಇದೇ ಸಂದರ್ಭ ಪ್ರಾಂಶುಪಾಲರಾದ ಫಾ .ಎಬಿನ್, ಅಂತಾರಾಷ್ಟ್ರೀಯ ಸ್ಕೇಟಿಂಗ್ ಕ್ರೀಡಾಪಟು ಕಲ್ಪನಾ ಕುಟ್ಟಪ್ಪ, ಮತ್ತು ಖಾಸಗಿ ಚಾನೆಲ್ ಜಿಲ್ಲಾ ವರದಿಗಾರರ ಅನು ಕಾರಿಯಪ್ಪ ಅವರನ್ನು ಸ್ವಚ್ಛತಾ ಅಭಿಯಾನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾವೇರಿ ನದಿಯಿಂದ ತೆರವುಗೊಳಿಸಲಾದ ಸುಮಾರು ನಾಲ್ಕು ಟ್ರ್ಯಾಕ್ಟರ್ ಪ್ರಮಾಣದ ತ್ಯಾಜ್ಯಗಳನ್ನು ಕುಶಾಲನಗರ ಪುರಸಭೆಯ ವಾಹನಗಳ ಮೂಲಕ ಸಾಗಿಸಲಾಯಿತು.ಈ ಸಂದರ್ಭ ಕಾವೇರಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರಾದ ಕೊಡಗನ ಹರ್ಷ, ಡಿ ಆರ್ ಸೋಮಶೇಖರ್, ಬೋಸ್ ಮೊಣ್ಣಪ್ಪ, ಕಾವೇರಿ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ, ಚೈತನ್ಯ, ಕಾಲೇಜಿನ ಉಪ ಪ್ರಾಂಶುಪಾಲರಾದ ಟಿ ಥಾಮಸ್, ಪ್ರಮುಖರಾದ ದೇವೇಂದ್ರ, ಎಚ್ ಆರ್ ದಿನೇಶ್, ರೇಷ್ಮಾ ಮಂಜುಶ್ರೀ, ಬೃಂದಾ , ಅಭಿಷೇಕ್, ಲೀನಾ, ಕುಶಾಲನಗರ ವಾಸವಿ ಯೋಜನಾ ಸಂಘದ ಪ್ರಮುಖರಾದ ವೈಶಾಕ್, ಪ್ರವೀಣ್ ಮತ್ತಿತರರು ಪಾಲ್ಗೊಂಡಿದ್ದರು.