ಸಿಎಂಗೆ ಶೋಕಾಸ್ ನೊಟೀಸ್‌; ಸಿಡಿದೆದ್ದ ಸಿದ್ದು ಅಭಿಮಾನಿ ಬಳಗ

KannadaprabhaNewsNetwork | Published : Aug 4, 2024 1:16 AM

ಸಾರಾಂಶ

ಆರ್‍ಟಿಐ ಕಾರ್ಯಕರ್ತರೊಬ್ಬರ ಕೋರಿಕೆಯ ಮೇರೆಗೆ ರಾಜ್ಯಪಾಲರು ಧಿಡೀರನೆ ಅಂದೇ ಮುಖ್ಯಮಂತ್ರಿಗಳಿಗೆ ಶೋಕಾಸ್ ನೊಟೀಸ್‌ ನೀಡುವ ಆಶ್ಚರ್ಯಕರ ಬೆಳವಣಿಗೆಗೆ ಕಲಬುರಗಿಯಲ್ಲಿರುವ ಕುರುಬರ ಸಂಘಟನೆ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿ ಬಳಗದವರು ಸಿಡಿದೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಆರ್‍ಟಿಐ ಕಾರ್ಯಕರ್ತರೊಬ್ಬರ ಕೋರಿಕೆಯ ಮೇರೆಗೆ ರಾಜ್ಯಪಾಲರು ಧಿಡೀರನೆ ಅಂದೇ ಮುಖ್ಯಮಂತ್ರಿಗಳಿಗೆ ಶೋಕಾಸ್ ನೊಟೀಸ್‌ ನೀಡುವ ಆಶ್ಚರ್ಯಕರ ಬೆಳವಣಿಗೆಗೆ ಕಲಬುರಗಿಯಲ್ಲಿರುವ ಕುರುಬರ ಸಂಘಟನೆ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿ ಬಳಗದವರು ಸಿಡಿದೆದ್ದಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ರಾಜ್ಯಪಾಲರ ನಡೆಯನ್ನು ಕುಟುವಾಗಿ ಖಂಡಿಸಿದ್ದು, ತಕ್ಷಣ ನೊಟೀಸ್‌‌ ವಾಪಸ್‌ ಪಡೆಯಲಿ, ಬಿಜೆಪಿ ಕೈಗೊಂಬೆ ರೀತಿ ವರ್ತಿಸೋದನ್ನ ಬಿಡಲಿ ಎಂದಿದ್ದಾರೆ.

ರಾಜ್ಯಪಾಲರ ಹುದ್ದೆ ಸಾಂವಿಧಾನಿಕವಾಗಿದೆ. ಸಿದ್ದರಾಮಯ್ಯನವರು ಪಾರದರ್ಶಕತೆಗೆ ಹೆಸರಾದವರು. ಯಾರೋ ಒಬ್ಬ ಆರ್‌ಟಿಐ ಕಾರ್ಯಕರ್ತ ದೂರು ನೀಡಿದ ಅಂದಾಕ್ಷಣ ಹಿಂದೆ ಮುಂದೆ ನೋಡದೆ ನೊಟೀಸ್‌‌ ಕೊಡುವುದೆ? ದೂರು ನೀಡಿದ ಆರ್ಟಿಐ ಕಾರ್ಯಕರ್ತನ ಹಿನ್ನೆಲೆಯೇ ಸರಿಯಾಗಿಲ್ಲ. ಸುಪ್ರೀಂ ಕೋರ್ಟ್‌ ಅವರಿಗೆ ದಂಡ ವಿಧಿಸಿದೆ. ಹೀಗಾಗಿ ಇಂತಹ ವಿಚಾರದಲ್ಲಿ ಸರಿಯಾಗಿ ವರ್ತನೆ ತೋರದೆ ಬೇಕಾಬಿಟ್ಟಿ ವರ್ತಿಸಿರೋ ರಾಜ್ಯಪಾಲರ ನಡೆ ಕಂಡನೀಯ ಎಂದು ಪೂಜಾರಿ ಹಳಿದರು.

ಆ.5ರಂದು ಸರ್ದಾರ್‌ ಪಟೇಲ್‌ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕುರುಬರು, ಸಿದ್ದರಾಮಯ್ಯ ಅಭಿಮಾನಿಗಳು, ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳೆಲ್ಲರೂ ಸೇರಿ ಹೋರಾಟ ಮಾಡುತ್ತೇವೆ. ರಾಜ್ಯಪಾಲರ ಗಮನ ಸೆಳೆಯುತ್ತೇವೆ. ಮಾನವ ಸರಪಳಿ ರಚಿಸಿ ಜಿಲ್ಲಾಡಳಿತದ ಕಚೇರಿಗೆ ಮುತತಿಗೆ ಹಾಕುತ್ತೇವೆ. ರಾಜ್ಯಪಾಲರ ಧೋರಣೆ ಬದಲಾಗದೆ ಹೋದಲ್ಲಿ ಹೋರಾಟ ಇನ್ನೂ ಉಗ್ರಗೊಳಿಸುತ್ತೇವೆ ಎಂದು ಪೂಜಾರಿ ಹೇಳಿದ್ದಾರೆ.

ಸಂಘದ ಸೈಬಣ್ಣ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ರವಿಗೌಂಡ ಕಟ್ಟೀಮನಿ, ತಿಪ್ಪಣ್ಣ, ಹೂವಮ್ಣಸೇರಿದಂತೆ ಅನೇಕ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದು, ರಾಜ್ಯಪಾಲರ ನಡೆ ವಿರೋಧ ವ್ಯಕ್ತಪಡಿಸಿದರು.

ರಾಜ್ಯಪಾಲರಿಂದ ಅಧಿಕಾರ ದುರುಪಯೋಗ:

ಮುಖ್ಯಮಂತ್ರಿಗೆ ನೊಟೀಸ್‌‌ ನೀಡಿರುವ ರಾಜ್ಯಪಾಲರ ಕ್ರಮವನ್ನು ಸಿಪಿಐಎಂ ಖಂಡಿಸಿದೆ. ಹೇಳಿಕೆ ಕಾರ್ಯದರ್ಶಿ ನೀಡಿರುವ ಕೆ. ನೀಲಾ ಅವರು ರಾಜ್ಯಪಾಲರೊಬ್ಬರು ಸಾಮಾನ್ಯ ಪ್ರಜೆಯೊಬ್ಬರ ಮನವಿ ಮೇರೆಗೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವ ಬೆಳವಣಿಗೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳಲ್ಲಿ ಆತಂಕ ಮೂಡಿಸಿದೆ ಎಂದಿದ್ದಾರೆ.

ರಾಜ್ಯಪಾಲರು ಮುಡಾ ಪ್ರಕರಣಕ್ಕೆ ಸಂಬಂದಿಸಿ ವಿಧಾನ ಸಭೆಯಲ್ಲೂ ಹಾಗೂ ನೇರ ರಾಜ್ಯಪಾಲರಿಗೂ ವಿವರವಾದ ಮಾಹಿತಿ ನೀಡಿದಾಗಲೂ, ಪ್ರಕರಣಕ್ಕೆ ಸಂಬಂದಿಸಿ ನ್ಯಾಯಾಂಗ ತನಿಖೆಗೆ ಕ್ರಮವಹಿಸಿದಾಗಲೂ, ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಇಷ್ಟೊಂದು ಅವಸರದಲ್ಲಿ ಬಳಸಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರದ ಮುಖ್ಯಮಂತ್ರಿಗೆ, ಆ ಸರಕಾರವನ್ನು ಪ್ರತಿನಿಧಿಸುವ ರಾಜ್ಯಪಾಲರು ಶೋಕಾಸ್ ನೊಟೀಸ್‌ ನೀಡಿರುವುದು ರಾಜ್ಯಪಾಲರ ಘನತೆಗೆ ತಕ್ಕುದಲ್ಲ.

ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡುವ ಬಿಜೆಪಿ ಹಾಗೂ ಒಕ್ಕೂಟ ಸರಕಾರದ ಮುಂದುವರೆದ ದುರ್ನಡೆಯ ಭಾಗವಾಗಿದೆ. ಬಿಜೆಪಿ ಮತ್ತು ಅದರ ಒಕ್ಕೂಟ ಸರಕಾರ ವಿರೋಧ ಪಕ್ಷಗಳ ಸರಕಾರಗಳನ್ನು ದುರ್ಬಲಗೊಳಿಸಲು ಇಲ್ಲವೆ ಅಗತ್ಯ ಬಹುಮತವಿಲ್ಲದಿದ್ದರೂ ಬಲವಂತವಾಗಿ ಬಿಜೆಪಿಯ ಸರಕಾರ ಸ್ಥಾಪನೆಗೆ ಕ್ರಮವಹಿಸಲು ರಾಜ್ಯಪಾಲರ ಕಛೇರಿ ಹಾಗೂ ಅವರ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಇದೇ ಮೊದಲ ಸಲವೇನಲ್ಲ ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕೆಂದು ಕೆ.ನೀಲಾ ಅಭಿಪ್ರಾಯಪಟ್ಟಿದ್ದಾರೆ.

Share this article