ವಿಜೃಂಭಣೆಯಿಂದ ನಡೆದ ಶ್ರೀ ಮುನಿಯಪ್ಪಸ್ವಾಮಿ ರಥೋತ್ಸವ

KannadaprabhaNewsNetwork | Published : Dec 13, 2024 12:51 AM

ಸಾರಾಂಶ

ತಿಪಟೂರು : ಕಲ್ಪತರು ನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರ ಬಾಗುವಾಳ ಆಲದಮರ ಶ್ರೀ ಮುನಿಯಪ್ಪಸ್ವಾಮಿ ಕ್ಷೇತ್ರದಲ್ಲಿ ಶ್ರೀ ಮುನಿಯಪ್ಪ ಸ್ವಾಮಿಯವರ ರಥೋತ್ಸವ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನೆರವೇರಿತು.

ತಿಪಟೂರು : ಕಲ್ಪತರು ನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರ ಬಾಗುವಾಳ ಆಲದಮರ ಶ್ರೀ ಮುನಿಯಪ್ಪಸ್ವಾಮಿ ಕ್ಷೇತ್ರದಲ್ಲಿ ಶ್ರೀ ಮುನಿಯಪ್ಪ ಸ್ವಾಮಿಯವರ ರಥೋತ್ಸವ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನೆರವೇರಿತು.

ಮುನಿಯಪ್ಪಸ್ವಾಮಿ ರಥವನ್ನು ವಿವಿಧ ರೀತಿಯ ಹೂವಿನ ಹಾರ, ಬಣ್ಣ ಬಣ್ಣದ ವಸ್ತ್ರಗಳಿಂದ ಶೃಂಗರಿಸಲಾಗಿತ್ತು. ವಿಶೇಷ ಪೂಜಾ ವಿಧಾನಗಳೊಂದಿಗೆ ನೆರೆದಿದ್ದ ಭಕ್ತರ ಸಮೂಹ ಶ್ರೀಗಳವರ ನೇತೃತ್ವದಲ್ಲಿ ಮುನಿಯಪ್ಪಸ್ವಾಮಿ ರಥವನ್ನು ಎಳೆದರು. ರಥೋತ್ಸವದ ಮೇಲೆ ಹೂವು, ಬಾಳೆಹಣ್ಣು ಎಸೆಯುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ತಮ್ಮ ಹರಕೆ ತೀರಿಸಿ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದ ನಂತರ ಶ್ರೀಗಳವರು ಪತ್ರಿಕೆಯೊಂದಿಗೆ ಮಾತನಾಡಿ ಈ ಜಾತ್ರೆ ಜನ ಮತ್ತು ಜಾನುವಾರುಗಳ ವಿಶೇಷ ಗ್ರಾಮೀಣ ಸೊಗಡಿನ ಜಾತ್ರೆಯಾಗಿದೆ. ಈ ಭಾಗದ 20ಕ್ಕೂ ಹೆಚ್ಚು ಗ್ರಾಮಗಳ ರೈತರು ವರ್ಷ ಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಈ ವೇಳೆಯಲ್ಲಿ ಸೇರುತ್ತಾರೆ. ಹಾಗೆಯೇ ಜಾನಪದ ಸೊಗಡಿನ ಈ ಜಾತ್ರೆಯಲ್ಲಿ ಜನರು ತಮ್ಮ ಶಾಂತಿ, ನೆಮ್ಮದಿ ಹಾಗೂ ಇಷ್ಠಾರ್ಥಗಳ ಈಡೇರಿಕೆಗಾಗಿ ಬಂದು ಅತ್ಯಂತ ಭಕ್ತಿಯಿಂದ ಮಂಗಳಾರತಿ ಮಾಡಿಸುತ್ತಾರೆ. ಈ ನಾಲ್ಕೈದು ದಿನಗಳಲ್ಲಿ ಮನೆಮಂದಿಯೆಲ್ಲಾ ಇಲ್ಲಿಗೆ ಬಂದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಉತ್ಸವಾದಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿಯೊಬ್ಬರೂ ಹಿರಿಯರ ಮಾರ್ಗದರ್ಶನ, ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕು ಸಾಗಿಸಿದಲ್ಲಿ ಸ್ವಾಭಿಮಾನಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದ್ದು ಈ ದಿಕ್ಕಿನಲ್ಲಿ ಭಕ್ತಕೋಟಿ ಸಾಗಬೇಕಿದೆ ಎಂದರು. ರಥೋತ್ಸವದಲ್ಲಿ ಅರಸೀಕೆರೆ ತಾ. ಮಾಡಾಳು ನಿರಂಜನ ಪೀಠಾಧ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಸೇರಿದಂತೆ ರೈತರು, ಭಕ್ತರು ಭಾಗವಹಿಸಿದ್ದರು. ಶ್ರೀ ಮುನಿಯಪ್ಪಸ್ವಾಮಿಗೆ ಜಾತ್ರೆ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Share this article