ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಲವ್ ಜಿಹಾದ್ ವಿರುದ್ಧ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶ್ರೀರಾಮಸೇನಾ ಕಾರ್ಯಕರ್ತರು ಗುರುವಾರ ಇಲ್ಲಿನ ಕಾಲೇಜುಗಳಿಗೆ ಭೇಟಿ ನೀಡಿ, ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.ಈ ವೇಳೆ ಶ್ರೀರಾಮಸೇನೆ ಕಾರ್ಯಕರ್ತರು ಮಾತನಾಡಿ, ಲವ್ ಜಿಹಾದ್‌ಗೆ ತುತ್ತಾಗಿರುವ ಸಂತ್ರಸ್ತೆಯರು ಮಾಹಿತಿ ನೀಡಿದರೆ, ಅವರಿಗೆ ಅಗತ್ಯ ಸಹಾಯ ಮಾಡಲಾಗುವುದು. ಹಿಂದು ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿರುವವರ ವಿರುದ್ಧ ಎಚ್ಚರದಿಂದ ಇರಿ. ಅಗತ್ಯ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9090443444ಗೆ ಕರೆ ಮಾಡುವಂತೆ ತಿಳಿಸಿದರು.
ಇಲ್ಲಿನ ಬಿವಿಬಿ, ಪಿಸಿ ಜಾಬಿನ ಕಾಲೇಜು ಹಾಗೂ ಕನಕದಾಸ ಕಾಲೇಜುಗಳಿಗೆ ಶ್ರೀರಾಮಸೇನಾ ಕಾರ್ಯಕರ್ತರು ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕರಪತ್ರ ವಿತರಿಸಿದರು. ಈ ವೇಳೆ ಶ್ರೀರಾಮಸೇನೆಯ ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ಬಸವರಾಜ ಗೌಡರ, ಬಸು ದುರ್ಗದ, ಗುಣಧರ ದೊಡೋತಿ, ಪ್ರವೀಣ ಮಾಳೋಧಕರ ಸೇರಿದಂತೆ ಹಲವರಿದ್ದರು. ಉತ್ತಮ ಪ್ರತಿಕ್ರಿಯೆ:ಲವ್ ಜಿಹಾದ್‌ನಿಂದ ಹಿಂದು ಯುವತಿಯರ ರಕ್ಷಣೆಗಾಗಿ ಶ್ರೀರಾಮಸೇನಾ ಮೇ 29ರಿಂದ ಪ್ರಾರಂಭಿಸಿರುವ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೇ, ಹೊರ ರಾಜ್ಯಗಳಿಂದಲೂ ಸಹಾಯವಾಣಿಗೆ ಕರೆ ಮಾಡುತ್ತಿರುವ ಸಂತ್ರಸ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಸಹಾಯವಾಣಿಗೆ ಇದು ವರೆಗೆ 1,073 ಕರೆ ಬಂದಿವೆ. ಇದರಲ್ಲಿ 197 ಮಿಸ್ಡ್ ಕಾಲ್‌ಗಳಿದ್ದು, 876 ಕರೆ ಸ್ವೀಕರಿಸಲಾಗಿದೆ. ಶ್ರೀರಾಮಸೇನಾ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ 569 ಕರೆಗಳು ಬಂದಿದ್ದು, 175 ಬೆದರಿಕೆ ಕರೆಗಳು ಬಂದಿವೆ. ಹೊರ ರಾಜ್ಯದಿಂದಲೂ 23 ಕರೆಗಳು ಬಂದಿವೆ. ಲವ್ ಜಿಹಾದ್‌ನ ದೂರುಗಳುಳ್ಳ 109 ಕರೆಗಳು ಬಂದಿದ್ದು, ಇದರಲ್ಲಿ 64 ದೂರುಗಳನ್ನು ಶ್ರೀರಾಮಸೇನಾ ಮುಖಂಡರು ಹಾಗೂ ಕಾರ್ಯಕರ್ತರು ಬಗೆಹರಿಸಿದ್ದಾರೆ. 27 ದೂರುಗಳು ಬಗೆಹರಿಯುವ ಹಂತದಲ್ಲಿ ಇವೆ. 18 ದೂರುಗಳು ಬಾಕಿ ಇವೆ ಎಂದು ಕಾರ್ಯಕರ್ತರು ಮಾಹಿತಿ ನೀಡಿದರು.