ಲಕ್ಷಾಂತರ ಭಕ್ತರ ಸಮ್ಮುಖ ಶ್ರೀ ರೇಣುಕಾಂಬೆ ಮಹಾರಥೋತ್ಸವ

KannadaprabhaNewsNetwork |  
Published : Mar 19, 2024, 12:46 AM IST
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊAಡ ಶ್ರೀ ರೇಣುಕಾಂಬಾದೇವಿಯ ಮಹಾರಥೋತ್ಸವ | Kannada Prabha

ಸಾರಾಂಶ

ಸೊರಬ ತಾಲೂಕು ಚಂದ್ರಗುತ್ತಿಯ ಶೀ ರೇಣುಕಾಂಬಾ ದೇವಿ ಮಹಾರಥೋತ್ಸವವು ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಬೆಟ್ಟದ ಮೇಲಿರುವ ದೇವಾಲಯದಲ್ಲಿ ಶ್ರೀ ರೇಣುಕಾಂಬಾ ದೇವಿಯ ಉತ್ಸವ ಮೂರ್ತಿಯನ್ನು ತಂದು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಸಾಗರ ಉಪವಿಭಾಗಾಧಿಕಾರಿ ಆರ್. ಯತೀಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿಯ ಶೀ ರೇಣುಕಾಂಬಾ ದೇವಿ ಮಹಾರಥೋತ್ಸವವು "ಉದೋ... ಉದೋ... " ಎಂಬ ಘೋಷದೊಂದಿಗೆ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು. ಬೆಟ್ಟದ ಮೇಲಿರುವ ದೇವಾಲಯದಲ್ಲಿ ಶ್ರೀ ರೇಣುಕಾಂಬಾ ದೇವಿಯ ಉತ್ಸವ ಮೂರ್ತಿಯನ್ನು ತಂದು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಸಾಗರ ಉಪವಿಭಾಗಾಧಿಕಾರಿ ಆರ್. ಯತೀಶ್ ಚಾಲನೆ ನೀಡಿದರು. ಭಕ್ತರು ಶ್ರೀ ದೇವಿಯ ನಾಮ ಸ್ಮರಣೆಯೊಂದಿಗೆ ರಥ ಎಳೆದರು. ಭಕ್ತರು ರಥಕ್ಕೆ ಕಾಳು ಮೆಣಸು, ಉತ್ತತ್ತಿ, ಬಾಳೆಹಣ್ಣು ಬೀರುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ರೇಣುಕಾಂಬೆಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ದೀಡು ನಮಸ್ಕಾರ ಸಲ್ಲಿಸುವುದು, ಪಡಲಿಗೆ ತುಂಬಿಸುವುದು, ಚೌಲ, ಮಕ್ಕಳಿಗೆ ಕಿವಿ ಚುಚ್ಚಿಸುವುದು ಮುಂತಾದ ಹರಕೆ, ಕಾರ್ಯಗಳನ್ನು ಮಾಡುವ ಮೂಲಕ ದೇವಿಕೃಪೆಗೆ ಪಾತ್ರರಾದರು.

ರಥೋತ್ಸವದ ತಾಂತ್ರಿಕ ವಿಧಿವಿಧಾನಗಳನ್ನು ಕೆಳದಿ ರಾಮ್ ಭಟ್ ವಹಿಸಿದ್ದರು. ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಅರವಿಂದ ಭಟ್ ನೇತೃತ್ವದಲ್ಲಿ ಜರುಗಿತು. ರೈತರು ಅಡಕೆ, ಬಾಳೆ ಫಸಲನ್ನು ರಥಕ್ಕೆ ಸಮರ್ಪಿಸಿದರು. ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸುವುದು ವಿಶೇಷವಾಗಿತ್ತು.

ಹಾವೇರಿ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ ಶಿವಮೊಗ್ಗ, ಬ್ಯಾಡಗಿ, ರಾಣೇಬೆನ್ನೂರು, ರಾಯಚೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕ ಮತ್ತು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ವಿವಿಧ ಸಂಘ ಸಂಸ್ಥೆಯವರು ಭಕ್ತರಿಗೆ ಕುಡಿಯಲು ನೀರು-ಬೆಲ್ಲ ಸೇವೆ ಮೂಲಕ ನೆರವಾದರು.

ದೇವಸ್ಥಾನ ಆವರಣದಲ್ಲಿರುವ ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರಿಗೆ ಜಾತ್ರೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ರಕ್ಷಣಾ ಸಿಬ್ಬಂದಿ ಸೇವೆ ಮತ್ತು ಆರೋಗ್ಯ ಕೇಂದ್ರಗಳು ಹಾಗೂ ಸಹಾಯ ಕೇಂದ್ರಗಳನ್ನು ಸಹ ತೆರೆಯಲಾಗಿತ್ತು.

ತಹಸೀಲ್ದಾರ್ ಹುಸೇನ್ ಸರಕಾವಸ್, ಸಹಾಯಕ ಚುನಾವಣಾಧಿಕಾರಿ ಬಿ.ರಾಜೇಶ್, ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಸೇರಿದಂತೆ ತಾಲೂಕಿನ ಕಂದಾಯ ಇಲಾಖೆ, ರಕ್ಷಣಾ ಇಲಾಖೆ ಅಧಿಕಾರಿಗಳು, ತಾಲೂಕಿನ ವಿವಿಧ ಸಂಘ- ಸಂಸ್ಥೆಗಳ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

- - - ಬಾಕ್ಸ್ ತಾತ್ಕಾಲಿಕ ಮೂಲಸೌಕರ್ಯ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ನೆರಳಿಗಾಗಿ ಶಾಮಿಯಾನ, ಟ್ಯಾಂಕರ್‌ನಲ್ಲಿ ಕುಡಿಯುವ ನೀರು, ಮೊಬೈಲ್ ಶೌಚಾಲಯ ಸೇರಿದಂತೆ ತಾತ್ಕಾಲಿಕ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ತಾಲೂಕು ಆಡಳಿತ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿತ್ತು.

- - - -೧೮ಕೆಪಿಸೊರಬ೦೧:

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ದೇವಿಯ ಮಹಾರಥೋತ್ಸವ ಲಕ್ಷಾಂತರ ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ