* ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆ ಉದ್ಯಮಿಗಳಿಗೆ ವರದಾನವಾಗುವ ಕಾರ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಿದ್ದು, ಆ ನಿಟ್ಟಿನಲ್ಲಿ ರಾಯಚೂರು ನಗರದಲ್ಲಿ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಐಡಿಬಿಐ) ಶಾಖೆಯನ್ನು ಆರಂಭಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನ್ಯಾಷನಲ್ ಎಂಎಸ್‌ಎಂಒ ಕ್ಲಸ್ಟರ್ ಔಟರೀಚ್ ಯೋಜನೆ ಹಾಗೂ ರಾಯಚೂರು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಎಸ್‌ಐಡಿಬಿಐ ಹೊಸ ಶಾಖೆಗಳನ್ನು ಉದ್ಘಾಟಿಸಿ, ಅರ್ಜಿ ಸಲ್ಲಿಸಿದ ಉದ್ಯಮಿದಾರರಿಗೆ ನೇರ ಸಾಲಮಂಜೂರು ಮಾಡಿ ಚೆಕ್ ವಿತರಿಸಿದ್ದಾರೆ.ಏನಿದು ಎಸ್‌ಐಡಿಬಿಐ?:
1990 ರ ಏ.2ರಂದು ಭಾರತೀಯ ಸಂಸತ್ತಿನ ಕಾಯ್ದೆಯಡಿ ಸ್ಥಾಪನೆಯಾದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಐಡಿಬಿಐ) ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳ ಪ್ರಚಾರ, ಹಣಕಾಸು ಮತ್ತು ಅಭಿವೃದ್ಧಿಗಾಗಿ ಪ್ರಧಾನ ಹಣಕಾಸು ಸಂಸ್ಥೆಯಾಗಿ ಕಾರ್ಯನಿರ್ವಹಿ ಸುತ್ತಿದ್ದು, ಇಂತಹ ಮಹತ್ವದ ಶಾಖೆಯನ್ನು ರಾಯಚೂರಿನಲ್ಲಿ ಸ್ಥಾಪಿಸಿರುವುದು ಈಗಾಗಲೇ ಬಂಡವಾಳ ಹೂಡಿ ಉದ್ಯಮಗಳನ್ನು ಸ್ಥಾಪಿಸಿದವರಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು, ಹೊಸದಾಗಿ ಉದ್ಯಮ ಸ್ಥಾಪಿಸುವವರಿಗೆ ಆರ್ಥಿಕ ನೆರವಿನ ಜೊತೆಗೆ ಯಶಸ್ವಿ ಉದ್ಯಮಿಯಾಗಲು ಅಗತ್ಯವಾದ ಕೌಶಲ್ಯ, ಮಾರ್ಗದರ್ಶನವನ್ನು ನೀಡುವ ಕಾರ್ಯವನ್ನು ಎಸ್‌ಐಡಿಬಿಐ ಮಾಡುತ್ತಿರುವುದರಿಂದ ಜಿಲ್ಲೆಯ ಉದ್ಯಮಿಗಳಿಗೆ ಸಾಕಷ್ಟು ಸಹಾಯವಾಗಲಿದೆ.ಜಿಲ್ಲೆಗೆ ಜರೂರಿಯಾಗಿತ್ತು:
ಎರಡು ನದಿಗಳು ಹರಿಯುವ ಪ್ರಾಂತ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮಾರ್ಗದ ಲಿಂಕ್ ಹೊಂದಿರುವ, ರೈಲ್ವೆ ಸಂಪರ್ಕದ ಕೊಂಡಿಯಾಗಿರುವ, ತೆಲಂಗಾಣ ರಾಜಧಾನಿಯಾದ ಹೈದರಾಬಾದ್ ಸಮೀಪದಲ್ಲಿರುವ, ಹತ್ತಿ, ಭತ್ತ ಸೇರಿ ಇತರೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ರಾಯಚೂರು ಜಿಲ್ಲೆಯಲ್ಲಿ ನೂರಾರು ಬೃಹತ್, ಮಧ್ಯಮ ಸಣ್ಣ ಹಾಗೂ ಅತೀ ಸಣ್ಣ ಕೈಗಾರಿಕೆಗಳಿದ್ದು, ಅವುಗಳ ಸಮಗ್ರ ಅಭಿವೃದ್ಧಿಗಾಗಿ ಎಸ್‌ಐಡಿಬಿಐ ನಂತಹ ಶಾಖೆಗಳ ಜರೂರಿಯಿತ್ತು. ನಬಾರ್ಡ್, ಸಿಡಾಕ್ ಮಾದರಿಯಲ್ಲಿ ಈ ಎಸ್‌ಐಡಿಬಿಐ ಕೆಲಸ ಮಾಡುತ್ತಿದ್ದರು ಉದ್ಯಮಿಗಳಿಗೆ ಹೆಚ್ಚಿನ ನೇರಸಾಲ ಸವಲತ್ತು ಕಲ್ಪಿಸಿ ಕೊಡುವುದರಿಂದ ಅವರ ಆರ್ಥಿಕ ಹಿನ್ನಡೆಯನ್ನು ವೃದ್ಧಿಸಲು ಅನುಕೂಲಕರವಾಗಲಿದೆ.ಎಸ್‌ಐಡಿಬಿಐನಿಂದ ಕೈಗಾರಿಕಾ ವಲಯ ಅಭಿವೃದ್ಧಿ: ವಿತ್ತ ಸಚಿವೆಬೆಂಗಳೂರಿನಲ್ಲಿ ಎಸ್ಐಡಿಬಿಐ ಹೊಸ ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮ್ ಅವರು ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಐಡಿಬಿಐ)ಯ ಬೆಂಗಳೂರಿನಲ್ಲಿ ವಿಭಾಗೀಯ ಕಚೇರಿ ಸೇರಿ ಕರ್ನಾಟದ ಆರು ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸಿದ್ದು, ಸುಮಾರು 1,169 ಬಂಡವಾಳ ಹೂಡಿಕೆ ಗುರಿಯನ್ನು ಹೊಂದಲಾಗಿದೆ. ಹೊಸದಾಗಿ ಆರಂಭಗೊಂಡಿರುವ ಶಾಖೆಯಲ್ಲಿ ಸುಮಾರು 20 ಎಂಎಸ್‌ಎಂಇಗಳಿಗೆ ನೇರ ಸಾಲ ಸೌಲಭ್ಯವನ್ನು ಒದಗಿಸುತ್ತಿದ್ದು ಇದರಿಂದ ಕರ್ನಾಟಕ ಕೈಗಾರಿಕಾ ವಲಯದ ಅಭಿವೃದ್ಧಿಯ ವೇಗ ಹೆಚ್ಚಾಗಲಿದ್ದು ಇದು ದೇಶದ ಕೈಗಾರಿಕಾ ವಲಯದ ಏಳಿಗೆಗೂ ಸಹಕಾರಿಯಾಗಲಿದೆ ಎನ್ನುವ ಆಶಯನುಡಿಗಳನ್ನಾಡಿದ್ದಾರೆ.