- ಆಸ್ತಿ ಜಗಳ ಹಿನ್ನೆಲೆ ₹1 ಲಕ್ಷಕ್ಕೆ ಸುಪಾರಿ । ಪೊಲೀಸ್ ತಂಡಕ್ಕೆ ಎಸ್‌ಪಿ ಶ್ಲಾಘನೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಬೋರ್ ಪಾಯಿಂಟ್ ಮಾಡುವ ಕೆಲಸ ಮಾಡುತ್ತಿದ್ದ ತನ್ನ ಸ್ವಂತ ಚಿಕ್ಕಪ್ಪನನ್ನು ಆಸ್ತಿ ವಿಚಾರಕ್ಕೆ ₹1 ಲಕ್ಷಕ್ಕೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕು ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ (55) ಕೊಲೆಯಾದ ವ್ಯಕ್ತಿ. ಗ್ರಾಮದ ಸತೀಶ, ತಾಲೂಕಿನ ಲಿಂಗದಹಳ್ಳಿ ಗ್ರಾಮದ ಪ್ರಭು ಅಲಿಯಾಸ್ ಮಾಸ್ತಿ, ದಾವಣಗೆರೆ ನಿಟುವಳ್ಳಿ ಆಶಾ ವೈನ್ಸ್ ಸಮೀಪದ ವಾಸಿ ಪ್ರಶಾಂತ ನಾಯ್ಕ ಅಲಿಯಾಸ್ ಪಿಲ್ಲಿ ಹಾಗೂ ಮೊದಲನೇ ಆರೋಪಿ ಸತೀಶನ ಪತ್ನಿ ಸುಜಾತ ಸತೀಶ ಬಂಧಿತ ಆರೋಪಿಗಳು.ಗೋಪನಾಳ್ ಸಿದ್ದಲಿಂಗಪ್ಪ ಬೋರ್ ಪಾಯಿಂಟ್ ಮಾಡುವ ಕೆಲಸ ಮಾಡುತ್ತಿದ್ದರು. ಅವರ ಸೊಸೆ ದೊಡ್ಡಮ್ಮ ಸುರೇಶ ಅವರು ಚನ್ನಗಿರಿ ತಾಲೂಕಿನ ನಲ್ಲೂರು ಭದ್ರಾ ಉಪ ನಾಲೆಯಲ್ಲಿ ನ.22ರಂದು ಅಪರಿಚಿತ ವ್ಯಕ್ತಿಯ ಶವ ಅನುಮಾನಾಸ್ಪದ ರೀತಿ ದೊರೆತಿದ್ದು, ಅದು ತಮ್ಮ ಮಾವನ ಶವ ಎಂದು ಗುರುತು ಹಿಡಿದಿದ್ದರು. ಅಲ್ಲದೆ, ಮಾವನ ಕೊಲೆಯಾಗಿದೆ ಎಂದು ಶಂಕಿಸಿ, ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಅವರು ಎಎಸ್‌ಪಿಗಳಾದ ಸಂತೋಷ ವಿಜಯಕುಮಾರ, ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಪ್ರಕರಣದ ಪತ್ತೆಗೆ ಚನ್ನಗಿರಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದರು.ತನಿಖಾ ತಂಡವು ನ.23ರಂದು ಪ್ರಕರಣದ 1ನೇ ಆರೋಪಿ ಸತೀಶ, ನ.24ರಂದು 2ನೇ ಆರೋಪಿ ಲಿಂಗದಹಳ್ಳಿಯ ಪ್ರಭು ಅಲಿಯಾಸ್ ಮಾಸ್ತಿ ಹಾಗೂ 2ನೇ ಆರೋಪಿ ದಾವಣಗೆರೆ ನಿಟುವಳ್ಳಿಯ ಆಶಾ ವೈನ್ಸ್ ಸಮೀಪದ ವಾಸಿ ಪ್ರಶಾಂತ ನಾಯ್ಕ ಅಲಿಯಾಸ್ ಪಿಲ್ಲಿ, 4ನೇ ಆರೋಪಿ ಸುಜಾತ ಸತೀಶ ಹಾಗೂ 5ನೇ ಆರೋಪಿ ಶಿವಮೂರ್ತೆಪ್ಪನನ್ನು ಬಂಧಿಸಿ, ಕೊಲೆ ಪ್ರಕರಣ ಬೇಧಿಸಿದರು. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಚನ್ನಗಿರಿ ಠಾಣೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.- - -
ಬಾಕ್ಸ್* ಟವೆಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯಾದ ಸಿದ್ಧಲಿಂಗಪ್ಪ ಹಾಗೂ 5ನೇ ಆರೋಪಿ ಶಿವಮೂರ್ತೆಪ್ಪ ಸಹೋದರರಾಗಿದ್ದು, ಆಸ್ತಿ ವಿಚಾರಕ್ಕೆ ಜಗಳವಾಗಿತ್ತು. ಶಿವಮೂರ್ತೆಪ್ಪನ ಮಗ ಸತೀಶ ಹಾಗೂ ಆತನ ಹೆಂಡತಿ ಸುಜಾತ ಸತೀಶ ಸೇರಿಕೊಂಡು, 2ನೇ ಆರೋಪಿ ಲಿಂಗದಹಳ್ಳಿ ಪ್ರಭು ಅಲಿಯಾಸ್ ಮಾಸ್ತಿ, 3ನೇ ಆರೋಪಿ ಪ್ರಶಾಂತ ನಾಯ್ಕ ಅಲಿಯಾಸ್ ಪಿಲ್ಲಿಗೆ ಸಿದ್ಧಲಿಂಗಪ್ಪನ ಕೊಲೆಗೆ ಮಾಡಲು ₹1 ಲಕ್ಷ ಸುಪಾರಿ ಕೊಟ್ಟಿದ್ದರು.ಸುಪಾರಿ ಪಡೆದ ಹಂತಕರು ನ.21ರಂದು ಸಿದ್ದಲಿಂಗಪ್ಪನನ್ನು ಬೋರ್ ಪಾಯಿಂಟ್ ಮಾಡಿಸಬೇಕಿದೆ ಎಂದು ಸುಳ್ಳು ಹೇಳಿ, ತೊಗಲೇರಿ ಕ್ರಾಸ್‌ನಿಂದ ಆಟೋ ರಿಕ್ಷಾದಲ್ಲಿ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಆರೋಪಿಗಳು ಸಿದ್ದಲಿಂಗಪ್ಪನ ಕುತ್ತಿಗೆಯನ್ನು ಟವಲ್‌ನಿಂದ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವಕ್ಕೆ ಕಲ್ಲು ಕಟ್ಟಿ ನಲ್ಲೂರು ಸಮೀಪದ ಭದ್ರಾ ಕಾಲುವೆ ನೀರಿಗೆ ಹಾಕಿದ್ದರು. ಈ ವಿಚಾರವನ್ನು ಬಂಧಿತರು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
- - -(ಅರೆಸ್ಟ್.ಜೆಪಿಜಿ: (ಸಾಂದರ್ಭಿಕ ಚಿತ್ರ)