ಕೆಸರು ಗದ್ದೆಯಾದ ಸಿದ್ದಾಪುರ ಗ್ರಾಮದ ರಸ್ತೆ

KannadaprabhaNewsNetwork | Published : Aug 4, 2024 1:27 AM

ಸಾರಾಂಶ

ಸಿರಿಗೆರೆ-ಸಾಸಲು ಗ್ರಾಮ ಕೂಡುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಿರಿಗೆರೆ ಎರಡು ಕಿ.ಮೀ. ದೂರದಲ್ಲಿರುವ ಸಿದ್ದಾಪುರ ಗ್ರಾಮದ ನಿಲ್ದಾಣದಲ್ಲಿ ಇಳಿಯುವ ಗ್ರಾಮಸ್ಥರು ಊರೊಳಗೆ ಹೋಗಲು ಪಡುವ ಸಂಕಷ್ಟ ಅಷ್ಟಿಷ್ಟಲ್ಲ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮೊನ್ನೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸಿದ್ದ ಸಿರಿಗೆರೆ ಸಮೀಪದ ಸಿದ್ದಾಪುರ ಗ್ರಾಮದ ಜನರು ಈಗ ತಮ್ಮ ಊರಿಗೆ ತಲುಪಲು ದಾರಿ ಎಂಬುದನ್ನು ಹುಡುಕಲು ಪರಿತಪಿಸುತ್ತಿದ್ದಾರೆ.

ಸಿರಿಗೆರೆ-ಸಾಸಲು ಗ್ರಾಮ ಕೂಡುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಿರಿಗೆರೆ ಎರಡು ಕಿ.ಮೀ. ದೂರದಲ್ಲಿರುವ ಸಿದ್ದಾಪುರ ಗ್ರಾಮದ ನಿಲ್ದಾಣದಲ್ಲಿ ಇಳಿಯುವ ಗ್ರಾಮಸ್ಥರು ಊರೊಳಗೆ ಹೋಗಲು ಪಡುವ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವು ದಶಕಗಳ ಹಿಂದೆ ಬಸ್‌ ನಿಲ್ದಾಣದಿಂದ ಗ್ರಾಮದ ಒಳಕ್ಕೆ ಅರ್ಧ ಕಿ.ಮೀ. ದೂರದ ಡಾಂಬರು ರಸ್ತೆ ಮಾಡಲಾಗಿತ್ತು. ಕಳೆದ ೧೫ ದಿನಗಳಿಂದ ಹಿಡಿದಿರುವ ಜಿಟಿಜಿಟಿ ಮಳೆಯಿಂದ ಇಡೀ ಡಾಂಬರು ರಸ್ತೆ ತನ್ನ ವಿರೂಪ ಪ್ರದರ್ಶಿಸುತ್ತಿದೆ.

ಗ್ರಾಮದ ಹೃದಯ ಭಾಗದವರೆಗಿನ ರಸ್ತೆ ಯಾವ ಗದ್ದೆಗಳಿಗೂ ಸಾಟಿ ಇಲ್ಲದಂತೆ ಹಾಳಾಗಿದ್ದು, ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರು, ಮಹಿಳೆಯರು ಪಡುವ ಪಾಡು ಹೇಳತೀರದು. ಗ್ರಾಮದಲ್ಲಿ ೧೫೦ ಮನೆಗಳಿದ್ದು, ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಹೆದರಿಕೊಳ್ಳುತ್ತಿದ್ದಾರೆ. ಸಾಹಸ ಮಾಡಿ ರಸ್ತೆ ದಾಟುವ ಸಂದರ್ಭದಲ್ಲಿ ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ.

ಗಬ್ಬೆದ್ದಿರುವ ರಸ್ತೆಗಳನ್ನು ನೋಡಿರುವ ಪಕ್ಕದೂರಿನ ಶಾಲಾ ಬಸ್‌ ಚಾಲಕರೂ ಕೂಡ ಈ ರಸ್ತೆಯಲ್ಲಿ ಸಿದ್ದಾಪುರದ ಗ್ರಾಮದ ಒಳಕ್ಕೆ ಹೋಗಿ ಮಕ್ಕಳನ್ನು ಕರೆತರಲು ಹಿಂಜರಿಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಜಿಲ್ಲಾ ಮುಖ್ಯರಸ್ತೆ ಗೋಳು ಕೂಡ ಹೇಳತೀರದಾಗಿದೆ. ಜಮ್ಮೇನಹಳ್ಳಿ ಗೇಟಿನಿಂದ ದೊಡ್ಡಿಗನಾಳು ಗೇಟಿನವರೆಗೆ ಹಾಳಾಗಿರುವ ರಸ್ತೆ ಕಂಡು ಪ್ರಯಾಣಿಕರು ಹೌಹಾರುತ್ತಾರೆ. ಈ ಹಿಂದೆ ಲೋಕೋಪಯೋಗಿ ಇಲಾಖೆ ಗ್ಯಾಂಗ್‌ಮನ್‌ಗಳು ರಸ್ತೆ ಹಾಳಾಗುತ್ತಿದ್ದಂತೆ ಒಂದಿಷ್ಟು ಡಾಂಬರು ಹಚ್ಚಿ ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡುತ್ತಿದ್ದರು. ಈಗ ಆ ಸೌಲಭ್ಯವೂ ಇಲ್ಲದೆ ಹೋಗಿದೆ. ಇದರ ಜೊತೆಗೆ ರಸ್ತೆ ಸಂಕಟ ಇಲ್ಲಿಗೇ ನಿಂತಿಲ್ಲ. ತೋಟಗಳಿಗೆ ಪೈಪ್‌ ಅಳವಡಿಸಲು ರಸ್ತೆ ಅಗಿದು ಸರಿಯಾಗಿ ದುರಸ್ತಿ ಮಾಡದೇ ಇರುವುದರಿಂದ ರಾತ್ರಿ ವೇಳೆಯಲ್ಲಿ ಓಡಾಡುವ ವಾಹನ ಚಾಲಕರು ಬಿದ್ದು ಅಪಘಾತಕ್ಕೀಡಾಗಿದ್ದಾರೆ.

ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರು:

ಸಿದ್ದಾಪುರ ಗ್ರಾಮವು ವ್ಯಾಪಕ ಗಣಿಗಾರಿಕೆ ನಡೆಯುವ ಗಾದ್ರಿಗುಡ್ಡದ ಸಮೀಪವೇ ಇರುವಂತಹ ಗ್ರಾಮ. ಆದರೆ ಗಣಿಬಾಧಿತ ಪ್ರದೇಶದ ಸೌಲಭ್ಯಗಳು ಯಾವುವೂ ಕೂಡ ಈ ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ಗ್ರಾಮದ ವಿದ್ಯುತ್‌, ನೀರು, ರಸ್ತೆ, ಶಾಲಾ ನಿರ್ವಹಣೆ ಕೆಲಸಗಳು ದುಸ್ಥಿತಿಗೆ ಬಂದಿವೆ. ಈ ಹಿನ್ನೆಲೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಗ್ರಾಮದ ಜನರು ಮತದಾನವನ್ನು ಬಹಿಷ್ಕರಿಸಿದ್ದರು. ಆಗ ಸ್ಥಳಕ್ಕೆ ಆಗಮಿಸಿ ಇನ್ನಿಲ್ಲದ ಭರವಸೆ ನೀಡಿದ ಅಧಿಕಾರಿಗಳು ಈಗಲಾದರೂ ಗ್ರಾಮದ ರಸ್ತೆಗಳನನ್ನು ದುರಸ್ತಿ ಮಾಡಿಸಬೇಕೆನ್ನುವುದು ಗ್ರಾಮಸ್ಥರ ಒತ್ತಾಯ.

Share this article