ಇದೀಗ ಕೇಂದ್ರ ಬಿಜೆಪಿ ಸರ್ಕಾರವು ಅನುದಾನ ತಾರತಮ್ಯ, ತೆರಿಗೆ ಪಾಲಿನಲ್ಲಿ ವಂಚನೆ, ಬರ ಪರಿಹಾರ ವಿಳಂಬದಿಂದ ರಾಜ್ಯದ ಜನರಿಗೆ ತೀವ್ರ ಅನ್ಯಾಯ ಮಾಡುತ್ತಿದೆ. ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ವಿಧಾನಸಭೆ
‘ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ‘ಬಸ್’ ದ್ವೇಷ ಹಾಗೂ ವಿಷದ ಹೊಗೆ ಬಿಡುತ್ತಿದೆ ಎಂದು ಜನರೇ ಪಕ್ಕಕ್ಕೆ ತಳ್ಳಿ ಹಾಕಿದರು.
ಇದೀಗ ಕೇಂದ್ರ ಬಿಜೆಪಿ ಸರ್ಕಾರವು ಅನುದಾನ ತಾರತಮ್ಯ, ತೆರಿಗೆ ಪಾಲಿನಲ್ಲಿ ವಂಚನೆ, ಬರ ಪರಿಹಾರ ವಿಳಂಬದಿಂದ ರಾಜ್ಯದ ಜನರಿಗೆ ತೀವ್ರ ಅನ್ಯಾಯ ಮಾಡುತ್ತಿದೆ. ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್‌ನ ಪ್ರತಿ ಆರೋಪಕ್ಕೂ ತಿರುಗೇಟು ನೀಡುವ ಜತೆಗೆ ರಾಜ್ಯ ಸರ್ಕಾರದ ಒಂಬತ್ತು ತಿಂಗಳ ಸಾಧನೆಯನ್ನು ಸದನದ ಮುಂದೆ ಮಂಡಿಸಿದರು.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ನಿಲುವು, ನೀತಿ, ಮುನ್ನೋಟ ಹಾಗೂ ಕಾರ್ಯಕ್ರಮಗಳನ್ನು ಸ್ಪಷ್ಟವಾಗಿ ರಾಜ್ಯದ ಜನತೆ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದೆ ಎಂಬುದೇ ಸುಳ್ಳು ಆರೋಪ ಎಂದರು.
ಕಳೆದ 9 ತಿಂಗಳಲ್ಲಿ 77 ಸಾವಿರ ಕೋಟಿ ಹೂಡಿಕೆ ಬಂದಿರುವುದೇ ರಾಜ್ಯದ ಕಾನೂನು ಸುವ್ಯವಸ್ಥೆ ಸುಗಮ ಆಗಿರುವುದಕ್ಕೆ ಸಾಕ್ಷಿ ಎಂದರು.
ಅನ್ಯಾಯಕ್ಕೆ ಎಚ್‌ಡಿಕೆ ವಕಾಲತ್ತು- ಸಿಎಂ: ರಾಜ್ಯದಿಂದ ಕೇಂದ್ರದಿಂದ ಆಗುತ್ತಿರುವ ಆರ್ಥಿಕ ಅನ್ಯಾಯ, ಅನುದಾನ, ಬರ ಪರಿಹಾರದ ಬಗ್ಗೆ ಧ್ವನಿ ಎತ್ತಿದರೆ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಪರ ವಕಾಲತ್ತು ವಹಿಸಿ ಮಾತನಾಡುತ್ತಾರೆ.
ಕೇಂದ್ರದ ಜತೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ರಾಜ್ಯದ ಪಾಲಿನ ಸಂವಿಧಾನಬದ್ಧ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುವುದಿಲ್ಲ.
ಬರ ಪರಿಹಾರ ಕೇಳಿ 17 ಬಾರಿ ಬರೆದ ಪತ್ರದ ಪೈಕಿ ಒಂದು ಪತ್ರಕ್ಕೆ ಮಾತ್ರ, ‘ನಿಮ್ಮ ಪತ್ರ ತಲುಪಿದೆ’ ಎನ್ನುವ ಉತ್ತರ ಕೇಂದ್ರದಿಂದ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ್ಲ.
ರಾಜ್ಯಕ್ಕೆ ಬರಗಾಲ ಬಂದಾಗ ನರೇಗಾ ಮಾನವ ದಿನಗಳನ್ನು ನಿಯಮಬದ್ಧವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು.
ಇದಕ್ಕಾಗಿ ಹಲವು ಬಾರಿ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳ ಲೆಕ್ಕ ಬಿಚ್ಚಿಟ್ಟು, ಎದೆ ತಟ್ಟಿಕೊಂಡ ಸಿಎಂ: ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದ್ದೇವೆ.
ಕಳೆದ 9 ತಿಂಗಳಲ್ಲಿ ಐದೂ ಗ್ಯಾರಂಟಿ ಈಡೇರಿಸಿದ್ದೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಎದೆ ತಟ್ಟಿಕೊಂಡು ಹೇಳಿದರು.
ಪಂಚ ಗ್ಯಾರಂಟಿ ಫಲಾನುಭವಿಗಳ ಬಗ್ಗೆ ಅಂಕಿ-ಅಂಶಗಳ ಸಹಿತ ವಿವರಿಸಿದ ಮುಖ್ಯಮಂತ್ರಿಗಳು ಈ ವರ್ಷ 39,675 ಕೋಟಿ ರು.ಗಳನ್ನು ಗ್ಯಾರಂಟಿಗಳಿಗೆ ಮೀಸಲಿಟ್ಟಿದ್ದು, ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
‘ಕೇಂದ್ರದ ಜತೆ ಮಾತಾಡಿ ನಮಗೆ ಅಕ್ಕಿ ಕೊಡಿಸಿ’ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆ.ಜಿ.ಗೆ 34 ರು.ಗಳಂತೆ ಅಕ್ಕಿ ಕೊಡಿ ಎಂಬ ಮನವಿಗೆ ಕೇಂದ್ರ ಒಪ್ಪಲಿಲ್ಲ.
ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿದರು. ಈಗ 29 ರುಪಾಯಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ಧರಿದ್ದೇವೆ.
ನೀವು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಿ ಎಂದು ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು. ಹಾಲಿನ ಉತ್ಪಾದನೆ ಕುಸಿದಿಲ್ಲರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಸಿದಿದೆ ಎಂದು ಆರ್. ಅಶೋಕ್ ಸದನದಲ್ಲಿ ಸುಳ್ಳು ಹೇಳಿದ್ದಾರೆ.
ವಾಸ್ತವವಾಗಿ ಕಳೆದ ವರ್ಷಕ್ಕಿಂತ 2.5 ಲಕ್ಷ ಲೀಟರ್ ಉತ್ಪಾದನೆ ಹೆಚ್ಚಳ ಆಗಿದೆ ಎಂದು ಅಂಕಿ-ಅಂಶ ಸಹಿತ ಸಿದ್ದರಾಮಯ್ಯ ವಿವರಿಸಿದರು. ರೈತರಿಗೆ ನೀಡಬೇಕಿದ್ದ ಪ್ರೋತ್ಸಾಹ ಧನಕ್ಕಾಗಿ 2019 ರಿಂದ ಇಲ್ಲಿಯವರೆಗೆ 1178 ಕೋಟಿ ರು.ಗಳು ಬಿಡುಗಡೆಯಾಗಿದೆ.
ಈ ವರ್ಷ 1172 ಕೋಟಿ ರು.ಗಳಲ್ಲಿ 971 ಕೋಟಿ ರು. ಬಿಡುಗಡೆ ಮಾಡಲಾಗಿದೆ. ರೈತರಿಗೆ ಪ್ರೋತ್ಸಾಹಧನವನ್ನು 3 ರು.ಗಳಿಂದ 5 ರು.ಗೆ ಹೆಚ್ಚಳ ಮಾಡಿದ್ದು ನಾನು ಎಂದು ಹೇಳಿದರು.