ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾನೂನು ನಿರ್ಬಂಧವಿದ್ದರೂ ಮಲ ಹೊರುವ ಅನಿಷ್ಠ ಪದ್ಧತಿ ನಡೆಸುತ್ತಿರುವ ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಬುಧವಾರ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಆಯೋಗದ ವತಿಯಿಂದ ನಡೆದ ಮ್ಯಾನ್ಯುಯಲ್ ಸ್ಕಾವೇಂಜರ್ಸ್ ಪುನರ್ವಸತಿ ಸಹಾಯಧನ ವಿತರಣಾ ಸಮಾವೇಶ ಉದ್ಘಾಟಿಸಿ, ಫಲಾನುಭವಿಗಳಿಗೆ ಸಹಾಧನ ವಿತರಿಸಿ ಅವರು ಮಾತನಾಡಿದರು.
ಮಲ ಹೊರುವುದನ್ನು ನಿಷೇಧಿಸಿ ದಶಕಗಳೇ ಕಳೆದಿವೆ. ಆದರೂ ಅಲ್ಲಲ್ಲಿ ಇಂತ ಅನಿಷ್ಟ ಪದ್ಧತಿ ನೋಡುತ್ತಿದ್ದೇವೆ. ಈ ಆಚರಣೆ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಶಿಕ್ಷಣವಿಲ್ಲದ ಕಾರಣ ಹಿಂದುಳಿದವರು ಅವಕಾಶ ವಂಚಿತರಾಗಿದ್ದಾರೆ. ಸಫಾಯಿ ಕರ್ಮಚಾರಿಗಳು ತಮ್ಮ ಮಕ್ಕಳು ಎಂಜಿನಿಯರಿಂಗ್, ಡಾಕ್ಟರ್, ಪ್ರೊಫೆಸರ್, ವಿಜ್ಞಾನಿಗಳಾಗುವಂತೆ ಶಿಕ್ಷಣ ಕೊಡಿಸಬೇಕು.
ಶಿಕ್ಷಣ ಕೇವಲ ಯಾವುದೆ ಒಂದು ವರ್ಗಕ್ಕೆ ಸೀಮಿತವಲ್ಲ. ಶಿಕ್ಷಣ ಕೊಡಿಸುವ ಮೂಲಕ ಮಲ ಹೋರುವ ಪದ್ಧತಿಯಂತಹ ಕೆಲಸಕ್ಕೆ ಮುಂದಿನ ಪೀಳಿಗೆ ಬರುವುದನ್ನು ತಡೆಯಬೇಕು ಎಂದರು.
ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಸಫಾಯಿ ಕರ್ಮಚಾರಿಗಳ ಸಂಬಳವನ್ನು ₹ 7 ಸಾವಿರದಿಂದ ₹ 17ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು ₹ 7.5 ಲಕ್ಷ ನೆರವು ನೀಡುವ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದು ನಮ್ಮ ಸರ್ಕಾರವೇ.
ಈಗ 4 ಸಾವಿರಕ್ಕೂ ಹೆಚ್ಚಿನ ಸಫಾಯಿ ಕರ್ಮಚಾರಿಗಳಿಗೆ ತಲಾ 40 ಸಾವಿರ ರು. ಸಹಾಯಧನ ವಿತರಣೆ ಮಾಡಲಾಗುತ್ತಿದ್ದು, ಈ ಮೊತ್ತ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶ.
ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಒಂದು ಸಾವಿರ ಸಫಾಯಿ ಕರ್ಮಚಾರಿಗಳಿಗೆ ಮನೆಯನ್ನು ಒದಗಿಸಿಕೊಡುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯ ಸರ್ಕಾರದಿಂದ 4 ಸಾವಿರ ಸಫಾಯಿ ಕರ್ಮಚಾರಿಗಳಿಗೆ ₹ 18.60ಕೋಟಿ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ, ಪಂಗಡದ ಜನತೆಗೆ ಎಸ್‌ಸಿಪಿ, ಟಿಎಸ್‌ಪಿ ಸೌಲಭ್ಯ ಸಮರ್ಪಕವಾಗಿ ಸಿಗುವಂತೆ ಮಾಡಲು ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಸಾಂಕೇತಿಕವಾಗಿ ಬೆಂಗಳೂರು ನಗರ, ಮೈಸೂರು, ಮಂಡ್ಯ ಹಾಗೂ ರಾಯಚೂರಿನ ಪೌರಕಾರ್ಮಿಕರಿಗೆ ಪುನರ್ವಸತಿ ಸಹಾಯಧನ ವಿತರಣೆ ಮಾಡಲಾಯಿತು. ಜೊತೆಗೆ ನಾಲ್ವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.