ಬಿಟ್ಟಿ ಭಾಗ್ಯವಲ್ಲ, ಸಿದ್ದರಾಮಯ್ಯನವರ ಗಟ್ಟಿ ಗ್ಯಾರಂಟಿ: ಶಾಸಕ ಕೋಳಿವಾಡ

KannadaprabhaNewsNetwork | Published : Feb 19, 2024 1:39 AM

ಸಾರಾಂಶ

ರಾಜ್ಯ ಸರ್ಕಾರ ಬಡ ಜನರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯವಲ್ಲ, ಅವು ಸಿದ್ದರಾಮಯ್ಯನವರ ಗಟ್ಟಿ ಗ್ಯಾರಂಟಿಗಳು.

ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟನೆ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ರಾಜ್ಯ ಸರ್ಕಾರ ಬಡ ಜನರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯವಲ್ಲ, ಅವು ಸಿದ್ದರಾಮಯ್ಯನವರ ಗಟ್ಟಿ ಗ್ಯಾರಂಟಿಗಳು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ತಾಲೂಕಿನ ಮೆಡ್ಲೇರಿ ಗ್ರಾಮದ ಹೊರಬೀರಪ್ಪ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ₹222 ಕೋಟಿ ಹಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ಬಿಟ್ಟಿಯಾಗಿ ನೀಡಿದೆ. ಆದರೆ ಸಿದ್ದರಾಮಯ್ಯ 2013ರಲ್ಲಿ 165 ಭರವಸೆಗಳನ್ನು ನೀಡಿ ಅವುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿದ್ದರು. ಇದೀಗ 2023ರ ಚುನಾವಣಾ ಪೂರ್ವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಶಕ್ತಿ ಯೋಜನೆ ಜಾರಿ ಮಾಡಿತು. ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುಲಿವೆ. ಗೃಹಲಕ್ಷ್ಮಿ ಯೋಜನೆ ಕುಟುಂಬಕ್ಕೆ ಸಹಕಾರಿಯಾಗಿದ್ದು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಹೆಚ್ಚಳ ನಿರ್ವಹಣೆ ಮಾಡಲು ಪ್ರಯೋಜನಕಾರಿಯಾಗಿದೆ. ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಆಹಾರ ಸಮಸ್ಯೆ ನಿವಾರಣೆತಾಗಲಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ ನಗದು ಹಣ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯದ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರಿಲ್ಲ ಹಾಗೂ ಅಭಿವೃದ್ಧಿ ಕುಂಠಿತವಾಗಿಲ್ಲ. ಶ್ರೀಮಂತರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಬಡವರಿಗೆ ಹಂಚಿಕೆ ಮಾಡಲಾಗುತ್ತಿದೆ. ಬಡವರ ಬಗ್ಗೆ ಕಳಕಳಿಯಿರುವ ಸರ್ಕಾರಗಳು ಅಧಿಕಾರಕ್ಕೆ ಬರಬೇಕು ಎಂದರು.

ಸಿಡಿಪಿಒ ಪಾರ್ವತಿ ಹುಂಡೇಕಾರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಸಬಲೀಕರಣವಾಗಲಿದೆ. ತಾಲೂಕಿನಲ್ಲಿ 80270 ಮಹಿಳೆಯರು ಈ ಯೋಜನೆಗೆ ಅರ್ಹರಿದ್ದಾರೆ. ಆ ಪೈಕಿ 70740 ನೋಂದಣಿ ಮಾಡಿಸಿದ್ದು 66765 ಫಲಾನುಭವಿಗಳಿಗೆ ಹಣ ಸಂದಾಯ ಮಾಡಲಾಗಿದೆ. ಇದಲ್ಲದೆ ಇಲಾಖೆ ವತಿಯಿಂದ ಇ ಕೆವೈಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಹೆಸ್ಕಾಂ ಅಧಿಕಾರಿ ಲಕ್ಷ್ಮಪ್ಪ ಮಾತನಾಡಿ, ತಾಲೂಕಿನಲ್ಲಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು 88364 ಕುಟುಂಬಗಳು ಅರ್ಹರಿದ್ದು, ಸದ್ಯ 77756 ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಾಕರಸಾ ಸಂಸ್ಥೆ ಡಿಪೋ ಮ್ಯಾನೇಜರ್ ಪ್ರಶಾಂತ ಸಂರ್ಗೆಸಿ ಮಾತನಾಡಿ, ಇದುವರೆಗೂ ತಾಲೂಕಿನ 74 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಸ್ಥಳೀಯ ಘಟಕಕ್ಕೆ ₹22 ಕೋಟಿ ಹಣ ಜಮೆಯಾಗಿದೆ ಎಂದರು.

ಆಹಾರ ಸರಬರಾಜು ಇಲಾಖೆ ಶಿವಪ್ಪ ಮಾತನಾಡಿ, ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 76979 ಪಡಿತರ ಚೀಟಿ ಗ್ರಾಹಕರಿಗೆ 14533 ಕ್ವಿಂಟಲ್ ಅಕ್ಕಿ ವಿತರಿಸಲಾಗಿದ್ದು, ಒಟ್ಟು ಸುಮಾರು 4.06 ಕೋಟಿ ಹಣ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಬಸವಣ್ಣೇವ್ವ ಮಾಳಗಿ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಇಒ ಸುಮಲತಾ ಎಸ್.ಪಿ., ಬಿಇಒ ಎಂ.ಎಚ್. ಪಾಟೀಲ, ಹೆಸ್ಕಾಂ ಅಧಿಕಾರಿ ಪ್ರಸಾದ, ಉಪ ತಹಸೀಲ್ದಾರ ಕೆ.ಜಿ. ಗೊರವರ, ಕಂದಾಯ ವೃತ್ತ ನಿರೀಕ್ಷಕ ವಾಗೀಶ ಮಳೇಮಠ, ತಾಪಂ ಅಧಿಕಾರಿ ಬಿ.ಎಸ್. ಶಿಡೇನೂರ, ಗ್ರಾಪಂ ಉಪಾಧ್ಯಕ್ಷ ರೂಪ್ಲಪ್ಪ ಲಮಾಣಿ, ಮಂಜನಗೌಡ ಪಾಟೀಲ, ಶೇರುಖಾನ ಕಾಬೂಲಿ. ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ತಳವಾರ, ಡಿಳ್ಳೆಪ್ಪ ಅಣ್ಣೇರ, ಇರ್ಫಾನ ದಿಡಗೂರ, ನಾಗರಾಜ ಮರಿಯಮ್ಮನವರ ಹಾಗೂ ಹೋಬಳಿ ಮಟ್ಟದ ಎಲ್ಲಾ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.

Share this article