ಉದ್ಯೋಗ ಖಾತ್ರಿ ಕೆಲಸಕ್ಕೆ ತಾಲೂಕು ಪಂಚಾಯಿತಿಗೆ ಮುತ್ತಿಗೆ

KannadaprabhaNewsNetwork | Published : Mar 11, 2025 12:46 AM

ಸಾರಾಂಶ

೨೦೨೪-೨೫ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆ. ಕಾಟಾಪುರ ಗ್ರಾಮದ ಕೆರೆ ಹೂಳೆತ್ತಲು ₹ ೩೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ೨೦೨೪ರ ಜುಲೈನಲ್ಲಿ ಡಿಪಿಆರ್ ಕೂಡಾ ಮಾಡಲಾಗಿದೆ. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ೧೪ ದಿನಗಳು ಮಾತ್ರ ಫಲಾನುಭವಿಗಳಿಗೆ ಕೆಲಸ ನೀಡಲಾಗಿದೆ.

ಕನಕಗಿರಿ:

ತಾಲೂಕಿನ ಹಿರೇಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಕಾಟಾಪುರ ಗ್ರಾಮಸ್ಥರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ನಾಗನಗೌಡ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆ. ಕಾಟಾಪುರ ಗ್ರಾಮದ ಕೆರೆ ಹೂಳೆತ್ತಲು ₹ ೩೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ೨೦೨೪ರ ಜುಲೈನಲ್ಲಿ ಡಿಪಿಆರ್ ಕೂಡಾ ಮಾಡಲಾಗಿದೆ. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ೧೪ ದಿನಗಳು ಮಾತ್ರ ಫಲಾನುಭವಿಗಳಿಗೆ ಕೆಲಸ ನೀಡಲಾಗಿದೆ. ಗ್ರಾಮಸ್ಥರು ಖಾತ್ರಿಯಡಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಕೇಳಿದಾಗ ಫಾರಂ-೬ ನೀಡಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿಲ್ಲ. ಇದರಿಂದ ಖಾತ್ರಿ ಫಲಾನುಭವಿಗಳು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಳೆದ ಮರ‍್ನಾಲ್ಕು ದಿನಗಳಿಂದ ತಾಲೂಕು ಪಂಚಾಯಿತಿ ಕಚೇರಿಗೆ ಖಾತ್ರಿ ಕೆಲಸ ನೀಡಲು ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಖಾತ್ರಿ ಫಲಾನುಭವಿಗಳಿಗೆ ಕೆಲಸ ನೀಡುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ, ಕೆ. ಕಾಟಾಪುರ ಖಾತ್ರಿ ಫಲಾನುಭವಿಗಳಿಗೆ ಕೆಲಸ ನೀಡಲು ಕ್ರಮವಹಿಸಲಾಗುವುದು.

ಫಲಾನುಭವಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಫಾರಂ-6ನಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದರಲ್ಲದೆ, ಫಲಾನುಭವಿಗಳು ನರೇಗಾ ಕೆಲಸಕ್ಕಾಗಿ ತೊಂದರೆ ಅನುಭವಿಸುತ್ತಿರುವುದನ್ನು ಸರಿಪಡಿಸುವಂತೆ ಪಿಡಿಒ ಯು. ಮಲ್ಲಿಕಾರ್ಜುನಗೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ವಿರೂಪಣ್ಣ ತಳವಾರ, ಸಿದ್ರಾಮೇಶ ತಳವಾರ, ಶರಣಗೌಡ, ಹನುಮೇಶ ಗಾಣದಾಳ, ಮಹಾಂತೇಶ ಪಚ್ಚಿ, ಹನುಮಂತಪ್ಪ ಹರಿಜನ, ಯಲ್ಲಪ್ಪ ಗೌಡ್ರ, ಪಚ್ಚೆಪ್ಪ ಪಚ್ಚಿ, ಕರಿಯಪ್ಪ ಪಚ್ಚಿ, ಸೂರ್ಯ ಪಚ್ಚಿ, ಸೋಮನಾಥ ಕಲ್ಗುಡಿ, ಬಾಳಮ್ಮ ಹರಿಜನ, ಮುತ್ತಮ್ಮ ಹರಿಜನ, ಸೋಮಮ್ಮ ಗೌಡ್ರ, ಹನುಮಮ್ಮ ಚಿಗರಿ ಸೇರಿದಂತೆ ಇದ್ದರು.

Share this article