ಪ್ರದೀಪ್ ಮಾವಿನ ಕೈ
ಕನ್ನಡಪ್ರಭ ವಾರ್ತೆ ಬ್ಯಾಕೋಡುರಾಜ್ಯದ ಪ್ರಸಿದ್ಧ ಶಕ್ತಿ ಕೇಂದ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಹೊಳೆಬಾಗಿಲಿನಲ್ಲಿ ಕನಿಷ್ಠ ಮೂಲ ಸೌಕರ್ಯ ಸಿಗದೆ ಪ್ರವಾಸಿಗರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಸ್ಥಳಿಯಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ತಾಲ್ಲೂಕಿನಲ್ಲಿ ಸಾಗರ ಪಟ್ಟಣ, ಕಾರ್ಗಲ್ ಜೋಗ ಹೊರತು ಪಡಿಸಿದರೆ ನಿತ್ಯ ಹೆಚ್ಚಿನ ಜನಸಂದಣಿಯಿಂದಿರುವ ಪ್ರದೇಶವೆಂದರೆ ಭಾಗಶಃ ಹೊಳೆಬಾಗಿಲು ಲಾಂಚ್ ನಿಲ್ದಾಣವಾಗಿದೆ. ಆದರೆ ಲಾಂಚ್ ನಿಲ್ಲಿಸುವ ಅಂಬಾರಗೊಡ್ಲು ಹಾಗೂ ಕಳಸವಳ್ಳಿ ಎರೆಡು ಭಾಗದಲ್ಲಿ ಪ್ರವಾಸಿಗರಿಗೆ ಶೌಚಾಲಯ ಇಲ್ಲದೆ ಬಯಲು ಶೌಚ ಮಾಡುವ ದೃಶ್ಯ ಪ್ರತಿನಿತ್ಯ ಕಾಣುತ್ತಿದ್ದು, ತಾಲ್ಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.ಸಿಗಂದೂರಿಗೆ ಹೋಗಲು ಹಾಗೂ ಸಾಗರ - ಹೊಳೆಬಾಗಿಲು ಮಾರ್ಗವಾಗಿ ಬಂದರೆ ಶರಾವತಿ ನದಿಯ ತಟದಲ್ಲಿ ಸಾಲು ಸಾಲು ವಾಹನಗಳು ಕಣ್ಣಿಗೆ ಕಾಣ ಸಿಗುತ್ತವೆ. ಆದರೆ, ಸೀಮಿತ ವಾಹನಗಳು ಮಾತ್ರ ಲಾಂಚ್ ಏರಿ ದೇವಸ್ಥಾನ ತಲುಪುತ್ತಾರೆ. ಆದರೆ ಇನ್ನೂ ಕೆಲವು ಗಾಡಿಗಳ ಚಾಲಕರು, ಉಳಿದೆಲ್ಲಾ ಪ್ರಯಾಣಿಕರು ದೇವರ ದರ್ಶನದ ಮುಗಿಸಿ ಬರುವವರೆಗೂ ಅಲ್ಲೇ ಕಾಯುವ ಮತ್ತು ಕೆಲವೊಮ್ಮೆ ತಡವಾದರೆ ರಾತ್ರಿ ಅಲ್ಲೇ ತಂಗುವ ಅನಿವಾರ್ಯತೆಯೂ ಎದುರಾಗುತ್ತದೆ. ಹೀಗೆ ತಂಗುವವರಿಗೆ ಶೌಚಾಲಯದ ಚಿಂತೆ ಬೆಂಬಿಡದೆ ಕಾಡುತ್ತಿದೆ.
ಶೌಚಾಲಯಕ್ಕೆ ನಿರ್ಲಕ್ಷ್ಯ:ಇಲ್ಲಿನ ಎರಡೂ ದಡದಲ್ಲಿ ಪ್ರವಾಸಿಗರಿಂದ ವಾಹನ ನಿಲುಗಡೆ, ಇನ್ನಿತರರ ಶುಲ್ಕವನ್ನು ಹೇರಿ ವಾರ್ಷಿಕ ಹರಾಜು ಶುಲ್ಕ 8 ರಿಂ 15 ಲಕ್ಷ ರು. ಆದಾಯ ಗಳಿಸುವಲ್ಲಿ ತುಮರಿ ಮತ್ತು ಕೋಳೂರು ಗ್ರಾಮ ಪಂಚಾಯಿತಿ ಯಶಸ್ವಿಯಾಗಿವೆಯೇ ಹೊರತು ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಇನ್ನು, ಮಳೆಗಾಲದಲ್ಲಿ ಹಿನ್ನೀರು ಭರ್ತಿಯಾದ ಹಿನ್ನೆಲೆಯಲ್ಲಿ ಎರಡೂ ದಡದಲ್ಲಿ ಜಾಗ ಇಕ್ಕಟ್ಟಾಗಿದ್ದು, ಎರಡೂ ದಡದ ಪ್ಲಾಟ್ ಫಾರಂ ಇಕ್ಕೆಲಗಳಲ್ಲಿ ಕಡಿದಾದ ಪ್ರದೇಶ ವಿದೆ. ಬಯಲು ಶೌಚಾಲಯಕ್ಕೆ ಹೋಗುವುದಕ್ಕೂ ಸೂಕ್ತ ಜಗವಿಲ್ಲದಂತಾಗಿದ್ದು, ಇದರಿಂದ ಲಾಂಚ್ ಸಿಬ್ಬಂದಿಗಳಿಗೂ ಸಹ ಸಾಕಷ್ಟು ತೊಂದರೆಯಾಗಿದೆ. ನಿತ್ಯ ಸರಾಸರಿ ಐದು ಸಾವಿರ ಜನರು ಸಂಚರಿಸುವ ಪ್ರವಾಸಿ ಮಾರ್ಗದಲ್ಲಿ ಇಂತಹ ಅವ್ಯವಸ್ಥೆಗೆ ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ಎರಡೂ ದಡದಲ್ಲಿ ಬೇಕಿದೆ ಭದ್ರತೆ:
ದೇವಿ ದರ್ಶನಕ್ಕೆ ಸರ್ಕಾರಿ ರಜಾ ದಿನಗಳು ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಸ್ಥಳೀಯರು ಮತ್ತು ಪ್ರವಾಸಿಗರ ನಡುವೆ ಆಗಾಗ ವಾಗ್ವಾದ ತಪ್ಪಿದ್ದಲ್ಲ, ಇವುಗಳಿಗೆ ಕಡಿವಾಣ ಮತ್ತು ನೀರಿಗಿಳಿದು ಈಜುವುದು, ಇನ್ನಿತರ ಹುಚ್ಚಾಟ ನಿಯಂತ್ರಿಸಲು ಸರಿಯಾದ ಭದ್ರತಾ ಸಿಬ್ಬಂದಿ ನಿಯೋಜಿಸಿದ ನಂತರವಷ್ಟೇ ಇಂಥ ಹಲವು ಸಮಸ್ಯೆಗಳಿಗೆ ತೆರೆ ಬೀಳಲಿದೆ.ಇನ್ನು, ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಮುಖ್ಯ ಕರ್ತವ್ಯ, ಹೊಳೆಬಾಗಿಲಿನಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ ಆದರೆ ಯಾವುದೇ ಶೌಚಾಲಯ ವ್ಯವಸ್ಥೆ ಕಲ್ಪಿಸದೇ ಇರುವುದು ತೀವ್ರ ಅಸಮಾಧಾನ ತಂದಿದೆ ಎನ್ನುತ್ತಾರೆ ಪ್ರವಾಸಿಗರಾದ ಮಂಡ್ಯದ ಪ್ರಮೀಳಾ ಜೆ ಎಂಬುವವರು.
ಈ ಕುರಿತು ಸಾಗರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುಕಿರಣ್ ಶೆಣೈ ಮಾತನಾಡಿ, ಈ ಭಾಗದಲ್ಲಿ ತುಮರಿ ಪಂಚಾಯ್ತಿಯ ಗೇಟಿನ ಟೆಂಡರ್ ಪ್ರಕ್ರಿಯೆ ಅವಧಿ ಮುಗಿದಿದ್ದು, ಈಗಾಗಲೇ ಮರು ಟೆಂಡರ್ ಪ್ರಕ್ರಿಯೆಗೆ ಕರೆಯಲಾಗಿದ್ದು. ಎರಡೂ ಪಂಚಾಯಿತಿ ಪಿಡಿಒರವರಿಗೆ ಶೌಚಾಲಯ ನಿರ್ಮಾಣ ಸಂಬಂಧ ಮಾಹಿತಿ ಪಡೆದಿದ್ದು, ಶೌಚಾಲಯ ನಿರ್ಮಾಣದ ಜೊತೆಗೆ ಆದರ ನಿರ್ವಹಣೆಯನ್ನು ಗೇಟಿನ ಹರಾಜುದಾರರೇ ನಿರ್ವಹಿಸಲು ಸೂಚಿಸಲಾಗುವುದು. ಗೇಟಿನಲ್ಲಿ ನಿಗದಿತ ಶುಲ್ಕ ಹೊರತು ಪಡಿಸಿ ಹೆಚ್ಚಿನ ಶುಲ್ಕ ಪಡೆದರೆ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.