ಬಡವರ ಪರ, ಕಾರ್ಮಿಕ ಕಲ್ಯಾಣ ನೀತಿಗಳ ಜಾರಿಗಾಗಿ ಗದಗದಲ್ಲಿ ಸಹಿ ಸಂಗ್ರಹ ಚಳವಳಿ

KannadaprabhaNewsNetwork | Updated : Jan 14 2024, 05:34 PM IST

ಸಾರಾಂಶ

ಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯ ನಿಧಿ, ಮುಂತಾದ ಕಲ್ಯಾಣ ಸೌಲಭ್ಯಗಳ ಜಾರಿಗೆ ಸಹಿ ಸಂಗ್ರಹ ಚಳವಳಿ ಗದಗ ಗಾಂಧಿ ಸರ್ಕಲ್‌ದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಘಟಕದ ವತಿಯಿಂದ ಜರುಗಿತು.

ಗದಗ: ಇಲ್ಲಿಯ ಗಾಂಧಿ ಸರ್ಕಲ್‌ದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಘಟಕದ ವತಿಯಿಂದ ಕಾರ್ಮಿಕ ಕಲ್ಯಾಣ ಸೌಲಭ್ಯಗಳ ಜಾರಿಗಾಗಿ ಆಗ್ರಹಿಸಿ ಸಹಿ ಸಂಗ್ರಹ ಚಳವಳಿ ಜರುಗಿತು.ಈ ವೇಳೆ ಬಸವರಾಜ ಮಂತೂರ ಮಾತನಾಡಿದರು.

ಆಹಾರ, ಆರೋಗ್ಯ, ಶಿಕ್ಷಣ ಉಳಿಸಿ ದೇಶವನ್ನು ಅಭಿವೃದ್ಧಿಪಡಿಸಿ ಸಮಾನ ವೇತನ ನಿಗದಿಪಡಿಸಿ ಶ್ರಮಿಕರ ಬದುಕನ್ನು ಉಳಿಸಲು ಜ. ೨೩ರಂದು ಜಿಲ್ಲಾ ಕೇಂದ್ರಗಳಲ್ಲಿ ಸಂಸದರ ಕಚೇರಿ ಚಲೋ ಪ್ರಚಾರ ಜಾಥಾಗಳನ್ನು ಯಶಸ್ವಿಗೊಳಿಸಲು ತಿಳಿಸಿದರು.

ಬೆಲೆ ಏರಿಕೆ ತಡೆಗಟ್ಟಲು, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರ ಪರ ನೀತಿಗಳ ಜಾರಿಗಾಗಿ, ರೈತ ವಿರೋಧಿ ಕಾನೂನುಗಳ ವಾಪಸ್ಸಾತಿಗಾಗಿ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸಲು, ರೈಲ್ವೆ, ವಿದ್ಯುತ್ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನೀತಿಗಳನ್ನು ಕೈಬಿಡಲು, ಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯ ನಿಧಿ ಕಲ್ಯಾಣ ಸೌಲಭ್ಯಗಳ ಜಾರಿಗೆ ಅವರು ಆಗ್ರಹಿಸಿದರು.

ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‌ಎಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ ಹಾಗೂ ಮನರೇಗಾ ಮುಂತಾದ ಯೋಜನೆಗಳನ್ನು ಕಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು.

ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ ೧ ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು.

 ೩ರಿಂದ ೬ ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಎನ್‌ಇಪಿ ನಿಲ್ಲಿಸಬೇಕು ಎಂದರು.

ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಿ ಕಾಯಂ ಮಾಡಲು ವಿಶೇಷ ಕಾನೂನು ರಚಿಸಬೇಕು. 

ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ. ೩೧ ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ನಿವೃತ್ತಿ ಸೌಲಭ್ಯಗಳನ್ನು ಮಾಸಿಕ ಕನಿಷ್ಠ ೧೦,೦೦೦ ರು. ಪಿಂಚಣಿ ಕೊಡಬೇಕು. ನಿವೃತ್ತಿ ಹೊಂದಿದ್ದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಗ್ರಾಜ್ಯುಟಿ ಹಣ ಬಿಡುಗಡೆ ಮಾಡಬೇಕು. 

ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡಬಾರದು, ಈಗಾಗಲೇ ನಿವೃತ್ತಿ ಆದವರಿಗೆ, ಆಗುವವರಿಗೆ ಇಡಿಗಂಟು ನೀಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಇಲಾಖೇತರ ಕೆಲಸಗಳಾದ ಬಿಎಲ್‌ಒ, ಐಸಿಡಿಎಸ್ ಯೋಜನೇತರ ಕೆಲಸಗಳಾದ ಭಾಗ್ಯಲಕ್ಷ್ಮಿ, ಮಾತೃವಂದನಾ, ಗೃಹಲಕ್ಷ್ಮಿ ಮುಂತಾದ ಕೆಲಸಗಳಲ್ಲಿ ಅಂಗನವಾಡಿ ನೌಕರರ ಬಳಕೆ ನಿಲ್ಲಿಸಬೇಕು. ಶಾಲಾ ಪೂರ್ವ ಶಿಕ್ಷಣ ಕಲಿಕೆಗೆ ಸಮಯ ನೀಡಬೇಕು.

ವಿದ್ಯುತ್, ರೈಲ್ವೆ ಸೇರಿದಂತೆ ಯಾವುದೇ ಸಾರ್ವಜನಿಕ ವಲಯಗಳ ೨೯ ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಖಾಸಗೀಕರಣ ನಿಲ್ಲಬೇಕು. ದೇಶದ ಎಲ್ಲ ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು.

ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು. ರಾಜ್ಯದಲ್ಲಿ ಕೆಲಸದ ಅವಧಿಯ ಹೆಚ್ಚಳವನ್ನು ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈ ವೇಳೆ ಮಹೇಶ ಹಿರೇಮಠ, ಯಶೋಧಾ ಬೆಟಗೇರಿ, ನಾಗರತ್ನ ಬಡಿಗಣ್ಣವರ, ವಿಜಯಲಕ್ಷ್ಮೀ ಚಲವಾದಿ, ರೇಣುಕಾ ತಳವಾರ, ಸಿದ್ದಲಿಂಗಪ್ಪ ಶ್ಯಾಗೋಟಿ, ಶಾರದಾ ಸೊರಟೂರ, ರುಕ್ಮಿಣಿ, ಚನ್ನಮ್ಮ ಶ್ಯಾವಿ, ವಾಸಂತಿ ಬಿದರನ್ನವರ, ಮಂಗಲಾ ಯಂಡಿಗೇರಿ, ಲಕ್ಷ್ಮವ್ವ ಕಳಸಣ್ಣವರ, ಸಾವಿತ್ರಿ, ಕಲ್ಯಾಣಿ ಸೇರಿದಂತೆ ಅನೇಕ ಕಾರ್ಮಿಕರು ಇದ್ದರು.

Share this article