ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದ ಸರ್ಕಾರ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮೀಣ ಜಲಮೂಲಗಳ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡದ್ದರಿಂದ ಹೂಳು ತುಂಬಿಕೊಂಡಿವೆ.
ಗ್ರಾಮೀಣ ಭಾಗದ ರೈತರು ಮತ್ತು ಕೂಲಿ ಕಾರ್ಮಿಕರು ಬೇಸಿಗೆ ಕಟಾವಿನ ಬಳಿಕ ಕೆಲಸ ಅರಸಿ ಬೇರೆ ನಗರಗಳಿಗೆ ಗುಳೆ ಹೋಗಬಾರದೆಂಬ ಉದ್ದೇಶದಿಂದ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಗುಳೇ ಹೋಗುವವರ ಸಂಖ್ಯೆ ಕಡಿಮೆ ಆಗಿದೆ.ರೈತರಿಗೆ ಅನುಕೂಲ: ಸರ್ಕಾರ ಯೋಜನೆ ಜಾರಿಗೆ ತಂದ ಬಳಿಕ ರೈತರು ಈ ಯೋಜನೆಯ ಅಡಿಯಲ್ಲಿ ಹೊಸ ಕೆರೆ ತೆಗೆಸುವುದು, ಬದು ನಿರ್ಮಾಣ, ಜಲ ಮೂಲದಲ್ಲಿರುವ ಹೂಳು ಎತ್ತುವುದು ಸೇರಿದಂತೆ ಮುಂತಾದ ಕೆಲಸಗಳನ್ನು ಮಾಡಿಕೊಳ್ಳಬಹುದು. ತಮ್ಮ ಹೊಲದಲ್ಲಿ ಹಾಗೂ ಇತರೆಡೆಯೂ ಸರ್ಕಾರ ಜಾರಿ ಮಾಡುವ ಇಂತಹ ಕಾಮಗಾರಿಯಲ್ಲಿ ಕಾರ್ಮಿಕರು ಭಾಗಿಯಾಗುವುದರಿಂದ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಗ್ರಾಮದಲ್ಲೇ ಉದ್ಯೋಗ ಮಾಡಿ ಕೂಲಿ ಪಡೆದು ಅಲ್ಲಿಯೇ ಜೀವನ ಸಾಗಿಸಲು ಅನುಕೂಲವಾಗಿದೆ ಎಂದು ನೆರೇಗಾ ಕೂಲಿ ಕಾರ್ಮಿಕರು ಹೇಳುತ್ತಾರೆ. ಆದರೆ ಹೊಲ ಮತ್ತು ಗ್ರಾಮದ ಜಲ ಮೂಲಗಳ ಸ್ವಚ್ಛತೆಗೆ ಅಧಿಕಾರಿಗಳು ಆಧ್ಯತೆ ನೀಡುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ.ಬದು ನಿರ್ಮಾಣಕ್ಕೆ ಹಿಂದೇಟು: ರೈತರು ತಮ್ಮ ಹೊಲದಲ್ಲಿ ಬದು ನಿರ್ಮಿಸಿಕೊಳ್ಳಲೂ ಸಹ ಅವಕಾಶವಿದ್ದರೂ ಹೆಚ್ಚಿನ ರೈತರು, ಅದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಫಲವತ್ತಾದ ಕಪ್ಪು ಮಣ್ಣು ಬದುವಿಗೆ ಹೋಗುವುದರಿಂದ ಹಾಗೂ ಮಣ್ಣು ತೆಗೆದ ಜಾಗದಲ್ಲಿ ಗುಂಡಿಗಳಾಗಿ ಬಿತ್ತನೆಗೆ ತೊಂದರೆ ಆಗಲಿದೆ ಎಂದು ಬದು ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಪಂ ಅಧಿಕಾರಿಗಳೇ ಹೇಳುತ್ತಾರೆ.ಅಧಿಕಾರಿಗಳ ನಿರ್ಲಕ್ಷ್ಯ: ಈ ಯೋಜನೆಯ ಅಡಿಯಲ್ಲಿ ಕೆರೆ ಹೂಳು ಎತ್ತುವುದು, ಬದು ನಿರ್ಮಾಣ, ಜಲ ಮೂಲಗಳ ಸ್ವಚ್ಛತೆ ಸೇರಿದಂತೆ ಒಟ್ಟು 230 ರೀತಿ ವಿವಿಧ ಕೆಲಸವನ್ನು ಕೂಲಿ ಕಾರ್ಮಿಕರಿಗೆ ಗ್ರಾಪಂ ಅಧಿಕಾರಿಗಳು ನೀಡಲು ಅವಕಾಶವಿದೆ. ಆದರೆ, ಗ್ರಾಪಂ ಅಧಿಕಾರಿಗಳು ಮುಂಚಿತವಾಗಿ ಕ್ರಿಯಾ ಯೋಜನೆ ರೂಪಿಸಿಕೊಳ್ಳದೆ, ಕೇವಲ ಬೇಸಿಗೆಯಲ್ಲಿ ಮಾತ್ರ 2 ತಿಂಗಳ ಈ ಯೋಜನೆ ಬಗ್ಗೆ ಚಿಂತಿಸುತ್ತಿರುವುದರಿಂದ ಯೋಜನೆ ಸರಿಯಾಗಿ ಜನರಿಗೆ ಮುಟ್ಟುತ್ತಿಲ್ಲವೆಂದು ಜನರ ಆರೋಪವಾಗಿದೆ.ಪ್ರತಿ ಗ್ರಾಮದಲ್ಲಿ ರೈತರ ಜಮೀನುಗಳಿಂದ ನೀರು ಹರಿದು ಹೋಗುವ ಹಲವಾರು ಜಲ ಮೂಲಗಳಲ್ಲಿ ಹೂಳು ತುಂಬಿ ಜಾಲಿ ಕಂಟಿ ಬೆಳೆದು ನಿಂತಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಈ ಜಲ ಮೂಲ (ಚಿಕ್ಕ ಹಳ್ಳಗಳ) ಯಿಂದ ಹರಿದು ಹೋಗದೆ, ಜಮೀನಿನಲ್ಲಿ ಹರಿದು ಹೋಗುವುದರಿಂದ ರೈತರ ಫಲವತ್ತಾದ ಕಪ್ಪು ಮಣ್ಣು ಜಮೀನುಗಳಿಗೆ ಹಾನಿಯಾಗುತ್ತದೆ. ಈ ಬಗ್ಗೆ ರೈತರು ತಮ್ಮ ಜಮೀನಿನಲ್ಲಿ ಜಲಮೂಲಗಳಲ್ಲಿ ಹೂಳು ತುಂಬಿದೆ. ಎನ್.ಆರ್.ಜಿ. ಯೋಜನೆಯಲ್ಲಿ ಹೂಳು ಎತ್ತಬೇಕು ಎಂದು ರೈತರು ಗ್ರಾಪಂ ಅಧಿಕಾರಿಗಳಗೆ ಕೋರಿದರೂ ಪ್ರಯೋಜನವಾಗುತ್ತಿಲ್ಲ.
ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ 100 ಮಾನವ ದಿನಗಳ ಉದ್ಯೋಗ ಮಾಡಲು ಅನುಕೂಲ ಕಲ್ಪಿಸಿದೆ, ಆದರೆ ರೈತರು ಹೆಚ್ಚು ಕೆರೆ ಮತ್ತು ಬದು ನಿರ್ಮಾಣ ಮಾಡಿಸಿಕೊಳ್ಳದ್ದರಿಂದ ಕೆಲವು ಗ್ರಾಪಂಗಳಲ್ಲಿ ಎನ್.ಆರ್.ಜಿ. ಯೋಜನೆ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ.ಗ್ರಾಮೀಣ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗುವ ಹಲವಾರು ರೀತಿ ಕೆಲಸ ಕಾರ್ಯಗಳನ್ನು ಈ ಎನ್.ಆರ್.ಜಿ. ಯೋಜನೆಯ ಅಡಿಯಲ್ಲಿ ಮಾಡಿಸಲು ಗ್ರಾಪಂ ಅಧಿಕಾರಿಗಳಿಗೆ ಅವಕಾಶವಿದೆ. ಆದರೆ ಅವರ ಬೇಜವಾಬ್ದಾರಿಯಿಂದ ಈ ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ ಎಂದು ರೈತ ಸೇನಾ ಸಂಘಟನೆ ತಾಲೂಕು ಗ್ರಾಮೀಣ ಭಾಗದ ಅಧ್ಯಕ್ಷ ಶ್ರೀಶೈಲ ಮೇಟಿ ಹೇಳಿದರು.ನಮ್ಮ ತಾಲೂಕಿನ ಎಲ್ಲಾ ಗ್ರಾಪಂ ಅಧಿಕಾರಿಗಳಿಗೆ ಜಲ ಮೂಲ ಮತ್ತು ಕೆರೆ ಹೂಳು ಎತ್ತುವುದು, ಗ್ರಾಮದಲ್ಲಿ ಈ ಯೋಜನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ತಿಳಿಸುತ್ತೇನೆ ಎನ್.ಆರ್.ಜಿ. ಯೋಜನೆ ತಾಲೂಕು ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು.