ಸಹಕಾರ ಕ್ಷೇತ್ರ ಪ್ರಗತಿಯಾದರೆ ಆರ್ಥಿಕ ಪ್ರಗತಿಗೆ ಸಾಧ್ಯ

KannadaprabhaNewsNetwork |  
Published : Sep 15, 2025, 01:00 AM IST
37 | Kannada Prabha

ಸಾರಾಂಶ

ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಸಹಕಾರ ಕ್ಷೇತ್ರ ಸ್ವಾಯತ್ತತೆ, ಸ್ವಾವಲಂಬಿಯಾಗಿ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಗ್ರಾಮಾಂತರ ಪ್ರದೇಶ ಸೇರಿದಂತೆ ಇಡೀ ದೇಶದಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ಬೆಳೆದರೆ ಎಲ್ಲರಿಗೂ ಸಮಾನತೆ, ಆರ್ಥಿಕ ಪ್ರಗತಿಗೆ ದಾರಿಯಾಗಲಿದೆ. ಸಹಕಾರ ಕ್ಷೇತ್ರ ಸ್ವಾಯತ್ತತೆಯಿಂದ ಕೆಲಸ ಮಾಡಿದಷ್ಟು ಅಭಿವೃದ್ಧಿ ಕಂಡು ನೂರಾರು ಜನರಿಗೆ ನೆರವಾಗಲು ಕಾರಣವಾಗಲಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ನಗರದ ಬೋಗಾದಿ ಹೊರ ವರ್ತುಲ ರಸ್ತೆಯ ಜಿ.ಎಲ್.ಎನ್. ಕನ್ವೆನ್ಷನ್ ಹಾಲ್‌ ನಲ್ಲಿ ನಡೆದ ಶ್ರೀ ಶಾರದ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 25 ವರ್ಷಗಳಲ್ಲಿ ಎರಡೂವರೆ ಸಾವಿರ ಸದಸ್ಯರನ್ನು ನೋಂದಾಯಿಸಿ ಆದಾಯ ಮತ್ತು ಪ್ರಗತಿ ಸಾಧಿಸಿರುವುದು ಶ್ಲಾಘನಿಯ. ನಿರ್ದೇಶಕರು ಬ್ಯಾಂಕಿನ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರಿಂದಾಗಿ ಸಂಘ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಸಹಕಾರ ಕ್ಷೇತ್ರ ಸ್ವಾಯತ್ತತೆ, ಸ್ವಾವಲಂಬಿಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಕ್ಷೇತ್ರದ ಬ್ಯಾಂಕ್, ಸಂಘಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನರಿಗೆ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ ಎಂದರು.

ಸರ್ಕಾರಿ ಬ್ಯಾಂಕ್‌ ಗಳಿಂದ ತರಕಾರಿ, ಹಣ್ಣು ವ್ಯಾಪಾರ ಮಾಡುವವರು, ಗುಡಿ ಕೈಗಾರಿಕೆಗಳನ್ನು ಮಾಡುವವರಿಗೆ ಸಾಲ ಸೌಲಭ್ಯ ನೀಡುವುದಿಲ್ಲ. ಅಂತಹವರನ್ನು ಸದಸ್ಯರನ್ನಾಗಿ ಮಾಡಿಕೊಂಡು ಸಾಲಸೌಲಭ್ಯ ನೀಡಿದರೆ ಅವರ ಆರ್ಥಿಕ ಪ್ರಗತಿಗೆ ಅನುಕೂಲವಾಗಲಿದೆ. ಖಾಸಗಿ ಸಾಲದಿಂದ ಬಂಡವಾಳ ಹಾಕಿಸದೆ ಸಹಕಾರ ಸಂಘಗಳಿಂದ ಸಾಲ ಕೊಟ್ಟರೆ ಆರ್ಥಿಕವಾಗಿ ನೆರವಾಗಲಿದೆ ಎಂದು ತಿಳಿಸಿದರು.

ಸಹಕಾರ ಸಂಘಗಳಿಗೆ ಸರ್ಕಾರದಿಂದ ಸಾಲ ಕೊಡಲಾಗುತ್ತಿಲ್ಲ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವಾಗಲೀ ಸಹಕಾರ ಸಂಘಗಳಿಗೆ ಅನುದಾನ ಕೊಡುತ್ತಿಲ್ಲ. ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ಕೊಡಬಹುದು ಹೊರತು ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ. ಸಹಕಾರ ಕ್ಷೇತ್ರ ನಮ್ಮದೆಂದು ಸರ್ಕಾರ ಹೇಳಿಕೊಳ್ಳುತ್ತಿದೆಯೇ ಹೊರತು ಅನುದಾನ ಕೊಡಲು ಮುಂದಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಹಕಾರ ಕ್ಷೇತ್ರದಲ್ಲಿ ಮಾಡಿಕೊಂಡು ಬಂದಿರುವ ಕೆಲಸ, ಅನುಭವವನ್ನು ನೋಡಿದರೆ ಸಹಕಾರ ಕ್ಷೇತ್ರ ರಾಜಕೀಯ ಮತ್ತು ಸರ್ಕಾರದ ಹಸ್ತಕ್ಷೇಪದಿಂದ ದೂರ ಇರಬೇಕು. ಠೇವಣಿದಾರರು ಬ್ಯಾಂಕ್, ಸಂಘದ ಮೇಲೆ ವಿಶ್ವಾಸ ಇಟ್ಟು ಠೇವಣಿ ಇಡುತ್ತಾರೆ. ಸದಸ್ಯರಿಗೆ ಕಾಲಕಾಲಕ್ಕೆ ಸೌಲಭ್ಯಗಳನ್ನು ನೀಡಿದರೆ ಮತ್ತಷ್ಟು ಪ್ರಗತಿ ಹೊಂದಬಹುದು ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್, ಸಂಘದ ಅಧ್ಯಕ್ಷ ವಿ. ವೆಂಕಟೇಶ್, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಎ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಕೆ. ವೆಂಕಟಕೃಷ್ಣ ಭಟ್, ನಿರ್ದೇಶಕರಾದ ಎಸ್. ವೆಂಕಟೇಶ್, ಟಿ.ಎನ್. ರಾಮದಾಸ್, ಎಂ. ಮಹೇಂದ್ರ, ಜೆ.ಎಸ್. ಗೋಪಾಲಕೃಷ್ಣ, ಕೆ.ಆರ್. ನಟರಾಜು, ಎಚ್.ಎಸ್. ಲಲಿತಾ ನಾಗರಾಜ್, ವೈ.ಕೆ. ರೇವತಿ, ಎಂ.ಆರ್. ಯೋಗೀಶ್, ಎಂ. ಗೋಪಾಲ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಜಿ. ಕೃಷ್ಣಮೂರ್ತಿ ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ