ಕನ್ನಡಪ್ರಭ ವಾರ್ತೆ ಸೊರಬ
ಭಾರತದ ಸಂಸ್ಕೃತಿಯ ಹಿರಿಮೆ, ಗರಿಮೆಗಳನ್ನು ಮಕ್ಕಳಲ್ಲಿ ಬಿತ್ತುವುದರ ಜೊತೆಗೆ ಮೌಲ್ಯಯುತ ಶಿಕ್ಷಣವನ್ನು ನೀಡುವ ದೃಷ್ಠಿಯಿಂದ ಆರಂಭಗೊಂಡ ಶ್ರೀ ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ 25 ವರ್ಷ ಕಂಡಿದ್ದು, ಬೆಳ್ಳಿಹಬ್ಬ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ದಿವಾಕರ ಭಾವೆ ಹೇಳಿದರು. ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1992- 93ರಲ್ಲಿ ಹಿಂದೂ ಪ್ರತಿಷ್ಠಾನದ ಪ್ರಮುಖರಾದ ಅಜಿತ್‌ಕುಮಾರ್ ಅವರು ಸ್ವಾಮಿ ವಿವೇಕಾನಂದ ಬೋಧನಾ ಸಂಸ್ಥೆಯನ್ನು ಉದ್ಘಾಟಿಸಿದ್ದರು. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಉತ್ತಮ ಶಿಕ್ಷಣದ ಅಡಿಪಾಯ ಹಾಕಬೇಕೆಂಬ ಉದ್ದೇಶದೊಂದಿಗೆ ಹಿಂದೂ ಸೇವಾ ಪ್ರತಿಷ್ಠಾನದ ಸಹೊಯೋಗದೊಂದಿಗೆ ಸೇವಾ ವೃತ್ತಿ ನಿರತ ಮಾತಾಜಿ ಅವರ ಮೂಲಕ ಅರುಣ ವರ್ಗ ಮತ್ತು ಉದಯ ವರ್ಗ ಎಂಬ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲಾಯಿತು. ಅಂದು ಕೇವಲ 20 ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದ ಶಾಲೆ ಪ್ರಸಕ್ತ 1ರಿಂದ 10ನೇ ತರಗತಿಯವರೆಗೆ 723 ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.ಕಳೆದ 7 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆಯುತ್ತಿದೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾಗುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಕ್ರೀಡೆ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪಾಲ್ಗೊಂಡಿದ್ದಾರೆ. 2017-18ನೇ ಸಾಲಿನಲ್ಲಿ 7ನೇ ತರಗತಿ ವಿದ್ಯಾರ್ಥಿಯು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿದ್ದ ಇನ್‌ಸ್ಪೈರ್ ಅವಾರ್ಡ್, ವಿಜ್ಞಾನ ಮಾದರಿ ರಚನೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಯು ಕೇವಲ ಶೈಕ್ಷಣಿಕ ಕ್ಷೇತ್ರವಲ್ಲದೇ, ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ವಿಶೇಷ ಸಾಧನೆ ತೋರಿದೆ ಎಂದರು.
2023-24ನೇ ಸಾಲಿನಲ್ಲಿ ತನ್ನ 25ನೇ ವರ್ಷದ ಹಿನ್ನೆಲೆ ಬೆಳ್ಳಿಮಹೋತ್ಸವ ಆಚರಿಸಿಕೊಳ್ಳುತ್ತಿದೆ. ನವೆಂಬರ್ 24 ಮತ್ತು 25ರಂದು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡಿಸೆಂಬರ್ 2 ಮತ್ತು 3ರಂದು ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ-ಗಣಿತ ಮಾದರಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹಾಗೆಯೇ, 2023ರ ಡಿಸೆಂಬರ್ ಮತ್ತು 2024ರ ಜನವರಿ ತಿಂಗಳುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಖಜಾಂಚಿ ದತ್ತಾತ್ರೇಯಮೂರ್ತಿ ಪುರಾಣಿಕ್, ಆಡಳಿತಾಧಿಕಾರಿ ಸಂದೀಪ್‌ಕುಮಾರ್, ಮುಖ್ಯೋಪಾಧ್ಯಾಯಿನಿ ಶಿಲ್ಪಾ ಇದ್ದರು.
- - - -23ಕೆಪಿಸೊರಬ01:ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ದಿವಾಕರ ಭಾವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.