ಜೂನ್‌ 21ರಿಂದ ರಂಗಭೂಮಿ ಸಂಘಕ್ಕೆ ರಜತ ಸಂಭ್ರಮ: ಎ.ಭದ್ರಪ್ಪ

KannadaprabhaNewsNetwork |  
Published : Jun 20, 2025, 12:35 AM IST
19ಕೆಡಿವಿಜಿ2, 3-ದಾವಣಗೆರೆಯಲ್ಲಿ ಗುರುವಾರ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಎ.ಭದ್ರಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಲೆ ಮತ್ತು ಕಲಾವಿದರ ತವರಾದ ದಾವಣಗೆರೆಯಲ್ಲಿ ಮೊದಲ ಬಾರಿಗೆ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ 25ನೇ ವರ್ಷದ ರಜತ ಸಂಭ್ರಮನ್ನು ಜೂ.21 ಮತ್ತು 22ರಂದು ನಗರದ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗ ಮಂದಿರದಲ್ಲಿ ವೈಶಿಷ್ಟ್ಯಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಭದ್ರಪ್ಪ ತಿಳಿಸಿದರು.

ಎರಡು ದಿನ ಸಮಾರಂಭ । ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ । ಸ್ಮರಣ ಸಂಚಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಲೆ ಮತ್ತು ಕಲಾವಿದರ ತವರಾದ ದಾವಣಗೆರೆಯಲ್ಲಿ ಮೊದಲ ಬಾರಿಗೆ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ 25ನೇ ವರ್ಷದ ರಜತ ಸಂಭ್ರಮನ್ನು ಜೂ.21 ಮತ್ತು 22ರಂದು ನಗರದ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗ ಮಂದಿರದಲ್ಲಿ ವೈಶಿಷ್ಟ್ಯಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಭದ್ರಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.21ರ ಸಂಜೆ 6.30ಕ್ಕೆ ಚಲನಚಿತ್ರ ಹಾಸ್ಯನಟ ಡಾ.ರಾಜು ತಾಳಿಕೋಟೆ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಘದ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಹಿರಿಯ ಪತ್ರಕರ್ತ ಅಜಿತ್ ಘೋರ್ಪಡೆ, ಹಿರಿಯ ಕಲಾವಿದೆ ಮಾಲತಿ ಸುಧೀರ್‌, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್‌, ಸಂಘದ ಉಪಾಧ್ಯಕ್ಷೆ ಜಿ.ನಾಗವೇಣಿ ಅಧ್ಯಕ್ಷತೆ ವಹಿಸುವರು. ದಾವಣಗೆರೆಯಲ್ಲಿ ರಾಜ್ಯಮಟ್ಟದ ರಂಗಭೂಮಿ ಕಲಾವಿದರ ಪ್ರಥಮ ಸಮ್ಮೇಳನ ಆಯೋಜಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಸಂಘದ ಬೆಳ್ಳಿ ಮಹೋತ್ಸವ ಇದಾಗಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ನಂತರ ಸಂಘದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಕಲಾವಿದರಿಂದ ಪಿ.ಬಿ.ಧುತ್ತರಗಿ ವಿರಚಿತ ಭಂಡ ಬಡ್ಡಿ ಮಗ ಹಾಸ್ಯಭರಿತ ನಾಟಕ ಪ್ರದರ್ಶನವಿದೆ. ಜೂ.22ರ ಸಂಜೆ 6.30ಕ್ಕೆ ಸಂಘದ ಅಧ್ಯಕ್ಷ ಎ.ಭದ್ರಪ್ಪ ಅಧ್ಯಕ್ಷತೆಯ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಬಿ.ಎ.ಸ್ವಾಮಿ ವಿರಚಿತ ‘ಕೆಚ್ಚೆದೆಯ ಕಂಪೇಗೌಡ’ ಮತ್ತು ‘ನಿಡುಗಲ್ ದುರಂತ’ ಎಂಬ ನಾಟಕ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಬಿಡುಗಡೆ ಮಾಡುವರು. ಇದೇ ವೇಳೆ ಸಂಘದ ಕಲಾವಿದರಿಗೆ ಸ್ಮರಣ ಸಂಚಿಕೆ ಪ್ರದಾನ ಮಾಡಲಾಗುವುದು. ವಿಪ ಮಾಜಿ ಮುಖ್ಯ ಸಚೇತೇಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ರಾಣೆಬೆನ್ನೂರಿನ ರಂಗಭೂಮಿ ಕಲಾವಿದ ನಾಗರಾಜ ಕುಡುಪಲಿ, ಕಲಾವಿದರ ಸಂಘದ ಗೌರವಾಧ್ಯಕ್ಷ ತಿಪ್ಪೇಶರಾವ್ ಚೌಹಾಣ್‌ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ನಂತರ ಸಂಘದ ಕಲಾವಿದರಿಂದ ರಂಗಗೀತೆಗಳು, ರಂಗ ದೃಶ್ಯಾವಳಿಗಳು, ಏಕಪಾತ್ರಾಭಿನಯ ಪ್ರದರ್ಶನವಿದೆ. ಎರಡೂ ದಿನದ ಸಮಾರಂಭ, ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ. ಸಮಸ್ತ ರಂಗಾಭಿಮಾನಿಗಳು, ಕಲಾ ಪ್ರೋತ್ಸಾಕರು, ಕಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭ‍ನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸಂಘದ ಜಿ.ನಾಗವೇಣಿ, ತಿಪ್ಪೇಶ ರಾವ್ ಚೌಹಾಣ್‌, ಡಿ.ಮಹೇಶ್ವರಪ್ಪ, ಹನುಮಂತರಾವ್ ಪವಾರ್ ಇದ್ದರು.

ವೃತ್ತಿ ರಂಗಭೂಮಿ ರಂಗಾಯಣದ ಹಾಲಿ ನಿರ್ದೇಶಕರು ಸ್ಥಳೀಯ ಕಲಾವಿದರಿಗೆ ಸ್ಪಂದಿಸುತ್ತಲೇ ಇಲ್ಲ. ವೃತ್ತಿ ರಂಗಭೂಮಿಗೆ ಸಂಬಂಧವೇ ಇಲ್ಲದಿರುವ ಇಂತಹ ಅಹಂಕಾರ, ಸ್ವಾರ್ಥ ತುಂಬಿರುವ ನೀಚ ಮನಸ್ಸಿನ ವ್ಯಕ್ತಿಯನ್ನು ವೃತ್ತಿ ರಂಗಾಯಣದ ನಿರ್ದೇಶಕರನ್ನಾಗಿ ಯಾಕೆ ನೇಮಕ ಮಾಡಿದ್ದಾರೋ ಗೊತ್ತಿಲ್ಲ.

ಎ.ಭದ್ರಪ್ಪ, ಅಧ್ಯಕ್ಷ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು