ಕನ್ನಡಪ್ರಭ ವಾರ್ತೆ ಮೈಸೂರು
ಬೌದ್ಧಿಕ ಆಸ್ತಿ ಎನ್ನುವುದು ಅತ್ಯಂತ ಅಮೂಲ್ಯವಾಗಿದ್ದು, ವಜ್ರಕ್ಕಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ವಿ.ಎಂ. ಶ್ಯಾಮ್ ಕುಮಾರ್ ತಿಳಿಸಿದರು.ಕುವೆಂಪು ನಗರದಲ್ಲಿರುವ ಜೆಎಸ್ಎಸ್ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ಸಮಕಾಲಿನ ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ, ಕೌಶಲ, ಸಂಶೋಧನೆ, ತಂತ್ರಜ್ಞಾನ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲೂ ಬೌದ್ಧಿಕ ಆಸ್ತಿ ಹಕ್ಕು ಪಡೆಯಬಹುದಾಗಿದೆ. ಪೇಟೆಂಟ್, ಕಾಪಿರೈಟ್, ಟ್ರೇಡ್ ಮಾರ್ಕ್, ಫ್ಯಾಕ್ಟರಿ ಡಿಸೈನ್ ಸೇರಿದಂತೆ ವಿವಿಧ ಹೆಸರಿನಲ್ಲಿ ಬೌದ್ಧಿಕ ಆಸ್ತಿ ಹಕ್ಕು ಜಾರಿಯಲ್ಲಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿರುವ ನವೋದ್ಯಮಿಗಳು ಕೂಡ ಬೌದ್ಧಿಕ ಆಸ್ತಿ ಹಕ್ಕು ಪಡೆಯಲು ಅವಕಾಶ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಯಾವುದೇ ವ್ಯಕ್ತಿಯೂ ಅನ್ವೇಷಣೆ ಕಾರ್ಯದಲ್ಲಿ ತೊಡಗಿದಾಗ ಹಾಗೂ ಹೊಸ ಉದ್ಯಮವನ್ನು ಆರಂಭಿಸುವಾಗ ತನ್ನ ಬುದ್ಧಿವಂತಿಕೆಯಿಂದ ರೂಪಿಸಲಾಗಿರುವ ಬೌದ್ಧಿಕ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕು. ಇದಕ್ಕಾಗಿ ಆತನು ಸಂರಕ್ಷಣಾ ಕಾಯಿದೆಗಳ ಬಗ್ಗೆ ಅರಿವು ಹೊಂದಿರಬೇಕು. ಸರ್ಕಾರಗಳು ಕೂಡಾ ವ್ಯಕ್ತಿಗಳ ಬೌದ್ಧಿಕ ಆಸ್ತಿ ರಕ್ಷಣೆಯ ಹೊಣೆಗಾರಿಕೆಯನ್ನು ಹೊಂದಿವೆ ಎಂದರು.
ಬೌದ್ಧಿಕ ಆಸ್ತಿಯ ಹಕ್ಕುಗಳ ರಕ್ಷಣೆಯ ಉಲ್ಲೇಖವೂ ಶತಮಾನಗಳ ಹಿಂದೆಯೇ ಸಿಗುತ್ತದೆ. ಆದರೆ, ವಿಶ್ವದಲ್ಲಿ ಕೈಗಾರಿಕಾ ಕ್ರಾಂತಿಯಾದ ನಂತರ ನವೋದ್ಯಮಗಳು ಹೆಚ್ಚು ಹೆಚ್ಚಾಗಿ ಸ್ಥಾಪನೆಯಾಗಲು ಶುರುವಾದವು. ಆಗ ನೂತನ ಅನ್ವೇಷಣೆಗಳ ರಕ್ಷಣೆಗಾಗಿ ಬೌದ್ಧಿಕ ಆಸ್ತಿಯ ಹಕ್ಕುಗಳ ಕಾಯ್ದೆಗೆ ಹೆಚ್ಚಿನ ಮಹತ್ವ ದೊರೆಯಿತು. ಬೌದ್ಧಿಕ ಆಸ್ತಿ ವಿಶೇಷ, ವ್ಯಾಪಕವೂ ಆಗಿದೆ. ಇದರ ಉಲ್ಲಂಘನೆ ತಡೆಯಲು ಪ್ರಸ್ತುತ ಕಾಲಘಟ್ಟದಲ್ಲಿ ವಕೀಲರ ಅಗತ್ಯ ಹೆಚ್ಚಾಗಿದೆ. ಹೀಗಾಗಿ, ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಯಲ್ಲಿ ವಕೀಲರಿಗೆ ಅಪಾರ ಅವಕಾಶಗಳು ಲಭ್ಯವಾಗುತ್ತಿವೆ ಎಂದು ಅವರು ತಿಳಿಸಿದರು.ಜೆಎಸ್ಎಸ್ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಎನ್. ವಾಣಿಶ್ರೀ ಇದ್ದರು.