ಕನ್ನಡಪ್ರಭ ವಾರ್ತೆ ಕೊಪ್ಪಳ
ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರವು ಸಹ ಪ್ರಮುಖವಾಗಿದ್ದು, ಜನರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಾಲ ಹೇಳಿದರು.ಜಿಲ್ಲಾ ವಕೀಲರ ಸಂಘದಿಂದ ಜಿಲ್ಲಾ ನ್ಯಾಯಾಲಯದ ಜಿಲ್ಲಾ ವಕೀಲರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಕೀಲ ವೃತ್ತಿ ಶ್ರೇಷ್ಠ ಸೇವೆಯಾಗಿದ್ದು, ನೊಂದವರಿಗೆ ನ್ಯಾಯ ಒದಗಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ. ನಾವು ನಮ್ಮ ವೃತ್ತಿಯೊಂದಿಗೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ. ಏನು ಸಹಾಯ ಮಾಡಿದ್ದೇವೆ ಎನ್ನುವುದನ್ನು ನೋಡಬೇಕು. ನೊಂದವರಿಗೆ, ಸಂತ್ರಸ್ತರಿಗೆ, ಬಡ ವರ್ಗದರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಶ್ರಮಿಸಬೇಕು. ನಿಮ್ಮ ವೃತ್ತಿಯೂ ಸಹ ಒಂದು ಸಮಾಜ ಸೇವೆಯಾಗಿದೆ. ಯಾವುದೇ ಒಂದು ಸಣ್ಣ ಸಮಸ್ಯೆ ಬಂದರೂ ಸಹ ವಕೀಲರು ಅದನ್ನು ಬಗೆಹರಿಸಲು ಸಿದ್ಧರಿರಬೇಕು. ನನ್ನಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂಬ ಭಾವನೆ ಬರದಿರಲಿ. ಹಿರಿಯ ವಕೀಲರಿಂದ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಿ, ಪ್ರಕರಣಗಳ ಇತ್ಯರ್ಥಕ್ಕೆ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಹಕರಿಸಬೇಕು ಎಂದು ಹೇಳಿದರು.ಕೊಪ್ಪಳದಲ್ಲಿ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ಹಾಗೂ ವಕೀಲರ ಸಂಘದ ಬೇಡಿಕೆಗಳಿಗೆ ನ್ಯಾಯಾಂಗದ ಪರವಾಗಿ ಏನು ಮಾಡಲು ಸಾಧ್ಯವಿದೆ. ಅದಕ್ಕೆ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಲೋಕ್ ಅದಾಲತ್‌ನಲ್ಲಿ ಸುಮಾರು 4,368 ಪ್ರಕರಣಗಳ ವಿಲೇವಾರಿ ಮಾಡಲಾಗಿದ್ದು, ಇದಕ್ಕೆ ಎಲ್ಲ ವಕೀಲರ ಸಹಕಾರ ಮುಖ್ಯವಾಗಿದೆ. ವಕೀಲರ ಮುಂದೆ ಸಮಸ್ಯೆಗಳಿದ್ದರೂ ಸಹ ನ್ಯಾಯಾಲಯದ ಕಲಾಪಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲೆಯ ಎಲ್ಲ ವಕೀಲರು ಸಹಕರಿಸಿದ್ದಾರೆ. ಇಂದು ಉದ್ಘಾಟನೆಗೊಂಡ ಆರೋಗ್ಯ ಕೇಂದ್ರದ ಸದುಪಯೋಗವಾಗಲಿ ಎಂದರು.ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ, ನಮ್ಮ ಸಂಘದಲ್ಲಿ 603 ವಕೀಲರಿದ್ದು, 300 ರಿಂದ 350 ವಕೀಲರು ದೈನಂದಿನ ವೃತ್ತಿಯಲ್ಲಿ ತೊಡಗಿದ್ದಾರೆ. ಈ ಸಂಘವು 100 ವರ್ಷಗಳ ಇತಿಹಾಸ ಹೊಂದಿದ್ದು, ಸಂಘದಿಂದ ಪ್ರತಿ ವರ್ಷ ವಕೀಲರಿಗೆ ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದ ಕಟ್ಟಡವು ಹಳೆಯದಾಗಿದ್ದರಿಂದ ವಕೀಲರಿಗೆ ಹಾಗೂ ನ್ಯಾಯಾಧೀಶರುಗಳಿಗೆ ಸರಿಯಾದ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಕೊಪ್ಪಳದಲ್ಲಿ ನ್ಯಾಯಾಲಯವು 1995ರಲ್ಲಿ ಸ್ಥಾಪನೆಯಾಗಿದ್ದು, 1998ರಲ್ಲಿ ಜಿಲ್ಲೆಯಾದ ಬಳಿಕ ಈ ನ್ಯಾಯಾಲಯವನ್ನೇ ಮೇಲ್ದರ್ಜೆಗೇರಿಸಿ ಜಿಲ್ಲಾ ನ್ಯಾಯಾಲಯವನ್ನಾಗಿ ಮಾಡಲಾಗಿದೆ. ಆ ಸಂದರ್ಭದಲ್ಲಿ ಹೊಸದಾಗಿ ಜಿಲ್ಲೆಗಳಾದ ಕಡೆ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣವಿದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಹೊಸ ನ್ಯಾಯಾಲಯ ನಿಮಾರ್ಣವಾಗಿಲ್ಲ. ಈಗಾಗಲೇ ಹೊಸ ಜಿಲ್ಲಾ ನ್ಯಾಯಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿದ್ದು, ನ್ಯಾಯಾಲಯಗಳ ಕಟ್ಟಡ ಸಂಕೀರ್ಣ, ನ್ಯಾಯಾಧೀಶರ ವಸತಿ ಗೃಹಗಳು, ವಕೀಲರ ಭವನ ನಿರ್ಮಾಣ ಹಾಗೂ ಇತರ ಕಾಮಗಾರಿಗೆ ಅವಶ್ಯವಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲು ನ್ಯಾಯಾಮೂರ್ತಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ತ್ವರಿತ (ಪೋಕ್ಸೋ) ನ್ಯಾಯಾಧೀಶ ಕುಮಾರ ಡಿ.ಕೆ., ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್. ಆಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಬಿ.ವಿ. ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಜಂಟಿ ಕಾರ್ಯದರ್ಶಿ ಸಂತೋಷ ಸಿ. ಕವಲೂರ, ಖಜಾಂಚಿ ರಾಜಾಸಾಬ ಬೆಳಗುರ್ಕಿ, ಕರ್ನಾಟಕ ಮಹಿಳಾ ವಕೀಲರ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರು, ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶೆ ಸರಸ್ವತಿದೇವಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆರ್. ಒಡೆಯರ್ ಸೇರಿದಂತೆ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.