ಸಿಂಧನೂರು ಪಶು ಆಸ್ಪತ್ರೆ; ವೈದ್ಯರಿಲ್ಲದೆ ಬಲು ತಾಪತ್ರೆ

KannadaprabhaNewsNetwork | Published : Jun 25, 2024 12:31 AM

ಸಾರಾಂಶ

ಸಿಂಧನೂರಿನ ಸುಕಾಲಪೇಟೆ ರಸ್ತೆಯಲ್ಲಿರುವ ಪಶು ಆಸ್ಪತ್ರೆಯ ಹೊರನೋಟ ಪಶು ಆಸ್ಪತ್ರೆಯಲ್ಲಿರುವ ಗಣಕೀಕೃತ ಯಂತ್ರ ಮತ್ತಿತರ ಉಪಕರಣಗಳು

ಪ್ರಹ್ಲಾದ ಗುಡಿ

ಕನ್ನಡಪ್ರಭ ವಾರ್ತೆ ಸಿಂಧನೂರು

ರಾಯಚೂರು ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಕರ್ಯ ಹೊಂದಿದ ಸಿಂಧನೂರು ಪಶು ಆಸ್ಪತ್ರೆಗೆ ವೈದ್ಯರೇ ಇಲ್ಲ. ಹೀಗಾಗಿ ಈ ಆಸ್ಪತ್ರೆ ಗುರುಗಳಿಲ್ಲದ ಶಾಲೆಯಂತೆ ಗೋಚರವಾಗುತ್ತಿದೆ. ಹೌದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಪಶು ಸಂಗೋಪನಾ ಸಚಿವರಾಗಿದ್ದ ಅವಧಿಯಲ್ಲಿ ನಗರದ ಸುಕಾಲಪೇಟೆ ರಸ್ತೆಯಲ್ಲಿ ₹2.5 ಕೋಟಿಗೂ ಅಧಿಕ ಅನುದಾನದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ಇಲ್ಲಿ ಜಾನುವಾರುಗಳ ಶಸ್ತ್ರಚಿಕಿತ್ಸೆ, ಹೊರ ರೋಗಿಗಳ ಕೋಣೆ, ಚಿಕಿತ್ಸಾ ಉಪಕರಣಗಳು, ಸುಸಜ್ಜಿತ ಸಭಾಂಗಣ, ರಕ್ತ ಪರೀಕ್ಷಾ ಕೇಂದ್ರ, ಅಲ್ಟ್ರಾಸೌಂಡ್ ಸ್ಕಾಂನಿಂಗ್ ಮಷಿನ್ ಸೇರಿ ಹಲವು ಸೌಕರ್ಯಗಳಿವೆ. ಆದರೆ ಆಸ್ಪತ್ರೆಯಲ್ಲಿ ಒಬ್ಬರೂ ವೈದ್ಯರಿಲ್ಲದೆ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.ಕೆಕೆಆರ್‌ಡಿಬಿ(ಮ್ಯಾಕ್ರೋ) ಅನುದಾನದಲ್ಲಿ ನಿರ್ಮಾಣವಾದ ಸುಸಜ್ಜಿತ ಹೈಟೆಕ್ ಪಶು ಆಸ್ಪತ್ರೆ ನಾಡಗೌಡರು ಉದ್ಘಾಟಿಸಿದ್ದರು. ಆದರೆ ಆಸ್ಪತ್ರೆ ನಿರ್ಮಾಣ ಮಾಡಿದ ಬಳಿಕ ಸರ್ಕಾರ ವೈದ್ಯರನ್ನು ನೇಮಕ ಮಾಡದೆ ಇರುವುದರಿಂದ, ಆಸ್ಪತ್ರೆ ನಾಮಕೆವಾಸ್ತೆಗೆ ಎನ್ನುವಂತಾಗಿದೆ. ದಿನವೂ ಬೆಳಗ್ಗೆಯಿಂದ ಸಂಜೆವರೆಗೂ ಜಾನುವಾರು ತೆಗೆದುಕೊಂಡು ಆಸ್ಪತ್ರೆಗೆ ಬರುವ ಜನರಿಗೆ, ಶಸ್ತ್ರಚಿಕಿತ್ಸೆಯಂತಹ ಸೌಲಭ್ಯ ದೊರೆಯುತ್ತಿಲ್ಲ.

ಸಾಮಾನ್ಯವಾಗಿ ಯಾವುದೇ ಕಟ್ಟಡ ನಿರ್ಮಾಣಕ್ಕೂ ಮೊದಲು ಸಿಬ್ಬಂದಿ ಮಂಜೂರು ಮಾಡಲಾಗುತ್ತದೆ. ಆದರೆ ಪಶು ಆಸ್ಪತ್ರೆ ನಿರ್ಮಾಣದ ಬಳಿಕ 3 ಪಶು ವೈದ್ಯರು, ಆಡಳಿತ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ಸೇರಿ ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕಿತ್ತು. ಆದರೆ ಈ ಹಿಂದಿನಿಂದಲೂ ಇರುವ ಇಲಾಖೆ ಸಹಾಯಕ ನಿರ್ದೇಶಕರು (ಆಡಳಿತ ಅಧಿಕಾರಿ) ಬಿಟ್ಟರೆ, ಮೂರು ವೈದ್ಯರ ಹುದ್ದೆಗಳು ಖಾಲಿ ಇವೆ. ಜಾನುವಾರುಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವುದಕ್ಕಾಗಿ ಕೋಟಿಗಟ್ಟಲೆ ಅನುದಾನ ವ್ಯಯ ಮಾಡಿದ್ದರೂ, ಅದರ ಸದ್ಬಳಕೆಯಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.

ನಗರವಷ್ಟೇ ಅಲ್ಲದೆ ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಲ್ಲೂ ವೈದ್ಯರಿಲ್ಲ. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಇದ್ದಾರೆ. ಆದರೆ ಪಶು ಚಿಕಿತ್ಸಾ ಕೇಂದ್ರಗಳಾದ ಸಾಸಲಮರಿ, ತುರುವಿಹಾಳ, ರಾಗಲಪರ್ವಿ, ಅಲಬನೂರು, ಸಾಲಗುಂದಾ, ಸಿಂಧನೂರಿನಲ್ಲಿ ಎರಡು ಸೇರಿ ಒಟ್ಟು 8 ಪಶು ವೈದ್ಯ ಹುದ್ದೆಗಳು ಖಾಲಿ ಇವೆ. ಇನ್ನುಳಿದಂತೆ ಧಡೇಸೂಗೂರು, ಹಂಚಿನಾಳ ಕ್ಯಾಂಪ್, ಪಗಡದಿನ್ನಿ, ಜವಳಗೇರಾ, ಜಾಲಿಹಾಳ ಕ್ಯಾಂಪ್‌ ಗಳಲ್ಲಿ ವೈದ್ಯರಿದ್ದಾರೆ. ವೈದ್ಯರಿಲ್ಲದ ಹಳ್ಳಿಗಳಲ್ಲಿ ಜಾನುವಾರು ಅನಾರೋಗ್ಯಕ್ಕೆ ಈಡಾದರೆ ಚಿಕಿತ್ಸೆ ಕೊಡಿಸಲು ಹೆಣಗಾಡುವ ಸ್ಥಿತಿ ಇದೆ. ತಾಲೂಕಿನಲ್ಲಿರುವ ಪಶು ಆಸ್ಪತ್ರೆಗಳಿಗೆ, ವೆಂಕಟರಾವ್ ನಾಡಗೌಡರ ಅವಧಿಯಲ್ಲಿ ಹೊಸದಾಗಿ ಕಟ್ಟಡ ಸೌಕರ್ಯ ಒದಗಿಸಿದ್ದಾರೆ. ಆದರೆ ವೈದ್ಯರು ಇಲ್ಲದೆ ಇರುವುದು ಸಮಸ್ಯೆಗೆ ಕಾರಣವಾಗಿದೆ.

ಈ ಹಿಂದೆ ಪಶುಭಾಗ್ಯ ಯೋಜನೆಯಡಿ ಕುರಿ, ಆಕಳು, ಎಮ್ಮೆ ಖರೀದಿಗೆ ರೈತರಿಗೆ ಸಹಾಯಧನ ನೀಡಲಾಗುತ್ತಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾವುದೇ ಅನುದಾನವಿಲ್ಲದೆ ಯೋಜನೆಗಳು ಸ್ಥಗಿತಗೊಂಡಿವೆ. ಎಸ್ಇಪಿ, ಟಿಎಸ್‌ಪಿ ಯೋಜನೆಯಲ್ಲಿ 10 ಜನ ರೈತರಿಗೆ ಮಾತ್ರ ಜಾನುವಾರು ಖರೀದಿಗೆ ಸಹಾಯಧನ ನೀಡಲಾಗಿದೆ. ಉಳಿದಂತೆ ಪಶುಸಂಗೋಪನೆಗೆ ಪ್ರೋತ್ಸಾಹ ಕಡಿಮೆಯಾಗಿದೆ. ತಾಲೂಕಿನಲ್ಲಿ 66 ಸಾವಿರ ಆಕಳು, ಎಮ್ಮೆ, 1 ಲಕ್ಷಕ್ಕೂ ಅಧಿಕ ಕುರಿಗಳು ಇವೆ. ಬರಪೀಡಿತ ಪ್ರದೇಶವಾದ್ದರಿಂದ ಮೆಕ್ಕೆಜೋಳ, ಅಲಸಂದಿ, ಜೋಳದ ಬೀಜಗಳನ್ನು ಪಶು ಚಿಕಿತ್ಸಾ ಕೇಂದ್ರಗಳ ಮೂಲಕ ರೈತರಿಗೆ ಉಚಿತವಾಗಿ ವಿತರಿಸಲಾಗಿದೆ. ಒಟ್ಟಿನಲ್ಲಿ ಪಶು ವೈದ್ಯರನ್ನು ನೇಮಿಸುವುದು ಮತ್ತು ಆಸ್ಪತ್ರೆಗಳ ಸದ್ಬಳಕೆಗೆ ಸರ್ಕಾರ ಮುಂದಾಗಬೇಕು ಎಂಬುದು ಜನಾಭಿಪ್ರಾಯವಾಗಿದೆ.

ಹೈಟೆಕ್ ಪಶು ಆಸ್ಪತ್ರೆಯಲ್ಲಿ ಮೂವರು ವೈದ್ಯರು ಇರಬೇಕಿದ್ದು, ಸದ್ಯ ಎಲ್ಲ ಹುದ್ದೆಗಳು ಖಾಲಿ ಇವೆ. ಅಗತ್ಯ ವೈದ್ಯ, ಸಿಬ್ಬಂದಿ ನೇಮಕವಾದರೆ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲೂ 8 ಕಡೆ ವೈದ್ಯರು ಇಲ್ಲ. ಇರುವ ವೈದ್ಯರಿಂದಲೇ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ.

-ಡಾ. ಶರಣೇಗೌಡ, ಮುಖ್ಯ ಪಶು ವೈದ್ಯಾಧಿಕಾರಿ, ಸಿಂಧನೂರು

Share this article