ಸಮೀರ್‌ಗೆ 5 ತಾಸು ಪೊಲೀಸರಿಂದ ಗ್ರಿಲ್‌

KannadaprabhaNewsNetwork |  
Published : Aug 25, 2025, 02:00 AM ISTUpdated : Aug 25, 2025, 05:32 AM IST
ಸಮೀರ್‌ ಎಂಡಿ | Kannada Prabha

ಸಾರಾಂಶ

ಎಐ ಟೂಲ್ (ಕೃತಕ ಬುದ್ಧಿಮತ್ತೆ) ಬಳಸಿ ಧರ್ಮಸ್ಥಳ ಕ್ಷೇತ್ರ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಸಮೀರ್‌ ಎಂ.ಡಿ., ಭಾನುವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದು, ತನಿಖಾಧಿಕಾರಿ ನಾಗೇಶ್‌ ಕದ್ರಿ ತೀವ್ರ ವಿಚಾರಣೆಗೆ ಒಳಪಡಿಸಿದರು.

 ಮಂಗಳೂರು :  ಎಐ ಟೂಲ್ (ಕೃತಕ ಬುದ್ಧಿಮತ್ತೆ) ಬಳಸಿ ಧರ್ಮಸ್ಥಳ ಕ್ಷೇತ್ರ ನಿಂದನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಸಮೀರ್‌ ಎಂ.ಡಿ., ಭಾನುವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದು, ತನಿಖಾಧಿಕಾರಿ ನಾಗೇಶ್‌ ಕದ್ರಿ ತೀವ್ರ ವಿಚಾರಣೆಗೆ ಒಳಪಡಿಸಿದರು.

ಎಐ ಟೂಲ್‌ ಬಳಸಿ ಸಮೀರ್‌, ‘ದೂತ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದ. ಬುರುಡೆ ಪ್ರಕರಣದ ಅನಾಮಿಕನ ಪರವಾಗಿ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಪ್ರಚಾರ ನಡೆಸಿದ್ದ. ಈ ಸಂಬಂಧ ಸಮೀರ್‌ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿತ್ತು. ಇದರಿಂದಾಗಿ ಬಂಧನದ ಭೀತಿ ಎದುರಾಗಿದ್ದ ಸಮೀರ್‌ಗೆ, ಮಂಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು. ಕರೆದಾಗ ವಿಚಾರಣೆಗೆ ಹಾಜರಾಗಿ, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಷರತ್ತು ವಿಧಿಸಿತ್ತು. ಪೊಲೀಸರು ಭಾನುವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಸಮೀರ್‌, ಸೌಜನ್ಯ ಕೇಸ್‌ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಕಾರಿನಲ್ಲಿ ನಾಲ್ವರು ವಕೀಲರ ಜೊತೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಸಮೀರ್‌ ವಿರುದ್ಧ ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ ಮತ್ತಿತರ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಕೇಸ್‌ಗಳು ದಾಖಲಾಗಿವೆ. ಆದರೆ, ಭದ್ರತೆ ಸಲುವಾಗಿ ಸಮೀರ್‌, ಧರ್ಮಸ್ಥಳ ಬದಲು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾಗಿ ತಿಳಿದು ಬಂದಿದೆ.

ವಾಯ್ಸ್ ಓವರ್ ಪಡೆದ ಅಧಿಕಾರಿಗಳು:

ಭಾನುವಾರ ಮಧ್ಯಾಹ್ನ ಒಂದು ಗಂಟೆಯಿಂದ ಸುಮಾರು ಐದು ಗಂಟೆಗಳ ಕಾಲ ಸಮೀರ್‌ನ ವಿಚಾರಣೆಯನ್ನು ತನಿಖಾ ತಂಡ ನಡೆಸಿತು. ಒಟ್ಟು ಮೂರು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಎಐ ವಿಡಿಯೋ ಪ್ರಕರಣ, ಖಾಸಗಿ ಚಾನೆಲ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಹಾಗೂ ಉಜಿರೆ ಖಾಸಗಿ ಆಸ್ಪತ್ರೆ ಬಳಿ ಗಲಾಟೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ.

ವಿಚಾರಣೆ ವೇಳೆ ಸಮೀರ್‌ನ ಧ್ವನಿಯ ಸ್ಯಾಂಪಲ್‌ ಪಡೆದ ತನಿಖಾಧಿಕಾರಿಗಳು, ಆತನಿಗೆ ವಿಡಿಯೋದ ಸ್ಕ್ರಿಪ್ಟ್ ನೀಡಿ ಮತ್ತೆ ವಾಯ್ಸ್ ಓವರ್ ಕೊಡಲು ಹೇಳಿದರು. ಅದನ್ನು ಓದಿಸಿ, ವಾಯ್ಸ್ ರೆಕಾರ್ಡ್ ಮಾಡಿಕೊಂಡರು. ಒಂದೇ ಸ್ಕ್ರಿಪ್ಟ್‌ನ್ನು ಮೂರು ಬಾರಿ ಓದಿಸಿ, ದಾಖಲಿಸಿದರು. ಬಳಿಕ, ಅದನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಿದ್ದಾರೆ. ಅವರ ವಿಡಿಯೋ ಮತ್ತು ಈಗ ರೆಕಾರ್ಡ್‌ ಮಾಡಿಕೊಂಡ ಅವರ ಧ್ವನಿಯನ್ನು ದೃಢಪಡಿಸಲು ಎಫ್ಎಸ್ಎಲ್‌ ಪರೀಕ್ಷೆ ನೆರವಾಗಲಿದೆ.

ಇಂದು ಕೂಡ ವಿಚಾರಣೆ:

ಇನ್ನೂ ಹೆಚ್ಚಿನ ವಿಚಾರಣೆಗೆ ಸೋಮವಾರ ಮತ್ತೆ ಠಾಣೆಗೆ ಬರಲು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಭಾನುವಾರದ ವಿಚಾರಣೆ ವೇಳೆ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದುಕೊಂಡಿದೆ. ಸೋಮವಾರ, ವಿಡಿಯೋ ಎಡಿಟಿಂಗ್ ಗೆ ಬಳಸಿದ ಕಂಪ್ಯೂಟರ್, ಮೊಬೈಲ್‌ನ್ನು ತನಿಖಾ ತಂಡ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಜೊತೆಗೆ, ಸೋಮವಾರ ನಡೆಯುವ ವಿಚಾರಣೆಯಲ್ಲಿ ಸುವರ್ಣ ನ್ಯೂಸ್ ವರದಿಗಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆ ಕೂಡ ನಡೆಯಲಿದೆ. ಅಂದು ಸಮೀರ್ ಕೂಡ ಹಲ್ಲೆಗೆ ಯತ್ನಿಸಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಬೆಳ್ತಂಗಡಿ ಠಾಣಾ ಸಬ್ ಇನ್‌ಸ್ಪೆಕ್ಟರ್‌ ಸುಬ್ಬಾಪುರ್ ಮಠ್ ನಡೆಸಲಿದ್ದಾರೆ.

ಸಮೀರ್‌ಗೆ ಪ್ರಶ್ನೆಗಳ ಸುರಿಮಳೆ:

ಭಾನುವಾರದ ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಮೀರ್‌ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ‘ದೂತ’ ಯೂಟ್ಯೂಬ್ ಚಾನೆಲ್ ಹಾಗೂ ವಿಡಿಯೋ ಬಗ್ಗೆ ಪ್ರಶ್ನಿಸಲಾಗಿದೆ. ವಿಡಿಯೋ ತಯಾರಿಕೆ, ಅಪ್ಲೋಡ್ ಹಾಗೂ ದೂತ ಯೂಟ್ಯೂಬ್‌ ಚಾನಲ್‌ ಜೊತೆ ನಿಮ್ಮ ಸಂಬಂಧ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಧರ್ಮಸ್ಥಳ ಕುರಿತ ವಿಡಿಯೋವನ್ನು ಯಾರು ಚಿತ್ರೀಕರಿಸಿದರು?, ಯಾರು ಎಡಿಟ್‌ ಮಾಡಿದ್ದಾರೆ?. ಎಐ ವಿಡಿಯೋ ಮಾಡಿದ ಉದ್ದೇಶ ಏನು?. ಸಾರ್ವಜನಿಕರಲ್ಲಿ ಗೊಂದಲ ಅಥವಾ ದ್ವೇಷ ಹುಟ್ಟಿಸಲು ನೀವು ಉದ್ದೇಶಿಸಿದ್ದೀರಾ?. ವಿಡಿಯೋದಲ್ಲಿ ಹೇಳಿದ ವಿಷಯಗಳ ಸತ್ಯಾಸತ್ಯತೆಯನ್ನು ನೀವು ಹೇಗೆ ದೃಢಪಡಿಸಿದಿರಿ?. ಅದಕ್ಕೆ ದಾಖಲೆ ಇದೆಯೇ?. ವಿಡಿಯೋ ಅಪ್ಲೋಡ್ ಮಾಡಲು ಬಳಸಿದ ಉಪಕರಣ (ಮೊಬೈಲ್/ಕಂಪ್ಯೂಟರ್) ಎಲ್ಲಿದೆ?. ಯೂಟ್ಯೂಬ್‌ಗೆ ಆ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದು ಯಾರು?.

ಯೂಟ್ಯೂಬ್‌ ಚಾನಲ್‌ನ ಲಾಗಿನ್‌ ವಿವರಗಳು ಯಾರ ಬಳಿ ಇವೆ?. ‘ದೂತ’ ಚಾನಲ್‌ ಜೊತೆ ಇನ್ನು ಯಾರು, ಯಾರು ಭಾಗಿಯಾಗಿದ್ದಾರೆ?. ಯಾರು ಈ ವಿಷಯವನ್ನು ನಿಮಗೆ ಹೇಳಿಕೊಟ್ಟರು ಅಥವಾ ವಿಡಿಯೋ ಮಾಡಲು ಪ್ರೇರೇಪಿಸಿದರು?. 2018ರ ಸಾಕ್ಷ್ಯ ಸಂರಕ್ಷಣಾ ಕಾಯಿದೆ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಬುರುಡೆ ಕೇಸಿನ ಅನಾಮಿಕ ಚಿನ್ನಯ್ಯ ಜೊತೆಗಿನ ನಂಟಿನ ಬಗ್ಗೆಯೂ ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ಸಾಕ್ಷಿದಾರನ ಮಾಹಿತಿ, ವಿಡಿಯೋದಲ್ಲಿ ಬಳಸಿದ ಬೇರೆ, ಬೇರೆ ಸುದ್ದಿಮೂಲಗಳ ಬಗ್ಗೆಯೂ ಸಮೀರ್‌ರನ್ನು ಪ್ರಶ್ನಿಸಲಾಗಿದೆ.

ಬುರುಡೆ ಪ್ರಕರಣದ ಬಗ್ಗೆ ಎಐ ಟೂಲ್‌ ಬಳಸಿ ಧರ್ಮಕ್ಷೇತ್ರ ನಿಂದನೆ ಕೇಸಲ್ಲಿ ಪೊಲೀಸರ ವಿಚಾರಣೆಗೆ ಸಮೀರ್‌ ಹಾಜರ್‌

ಈ ವೇಳೆ 5 ತಾಸು ವಿಚಾರಣೆ. ಸಮೀರ್‌ನ ಧ್ವನಿ ಮಾದರಿ, ವಿಡಿಯೋ ತುಣುಕು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ರವಾನೆ

‘ದೂತ’ ಯೂಟ್ಯೂಬ್ ಚಾನೆಲ್, ವಿಡಿಯೋ ತಯಾರಿಕೆ, ಯೂಟ್ಯೂಬ್‌ ಚಾನಲ್‌ ಜೊತೆ ನಿಮ್ಮ ಸಂಬಂಧ ಏನು ಎಂದು ಪ್ರಶ್ನೆ

ವಿಡಿಯೋ ಚಿತ್ರೀಕರಿಸಿದ್ದು ಯಾರು? ಯಾರು ಎಡಿಟ್‌ ಮಾಡಿದ್ದು? ವಿಡಿಯೋ ಉದ್ದೇಶ ಏನು? ಎಂಬ ಮಾಹಿತಿ ಸಂಗ್ರಹ

ಬುರುಡೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಪ್ರಮುಖ ವ್ಯಕ್ತಿ ಚಿನ್ನಯ್ಯನ ಜೊತೆಗಿನ ನಂಟಿನ ಬಗ್ಗೆಯೂ ಸಮೀರ್‌ಗೆ ಹಲವು ಪ್ರಶ್ನೆ

PREV
Read more Articles on

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ