ಕನ್ನಡಪ್ರಭ ವಾರ್ತೆ ಪಾಂಡವಪುರ
ವೃತ್ತಿಪರ ಛಾಯಾಗ್ರಾಹಕರ ಅನುಕೂಲಕ್ಕಾಗಿ ಶ್ರಮಿಕ ಛಾಯಾಗ್ರಾಹಕರ ಸಂಘಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ನಿವೇಶನ ನೀಡುವ ಬಗ್ಗೆ ಗಮನಹರಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.ಪಟ್ಟಣದ ಕಸಾಪ ಭವನದಲ್ಲಿ ತಾಲೂಕು ಶ್ರಮಿಕ ಛಾಯಾಗ್ರಾಹಕರ ಸಂಘದ ವತಿಯಿಂದ ಅಧ್ಯಕ್ಷ ಬೀರಶೆಟ್ಟಹಳ್ಳಿ ಮಧು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ಛಾಯಾಗ್ರಾಹಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಛಾಯಾಗ್ರಾಹಕರು ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ವೃತ್ತಿಯಲ್ಲಿ ಬದಲಾವಣೆ ಆಗಬೇಕಿದೆ. ಎಲ್ಲರ ಕೈಯಲ್ಲೂ ಡಿಜಿಟಲ್ ಮೊಬೈಲ್ ಬಳಸುವುದರಿಂದ ವೃತ್ತಿಪರ ಛಾಯಾಗ್ರಾಹಕರೂ ಸಹ ಡಿಜಿಟಲ್ ವೃತ್ತಿಗೆ ಪರಿವರ್ತನೆಗೊಂಡು ಹೊಸ ಸ್ವರೂಪ ಪಡೆದುಕೊಳ್ಳಬೇಕು. ಛಾಯಾಗ್ರಾಹಕರ ಮನವಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದರು.ಪುರಸಭೆ ಮುಖ್ಯಾಧಿಕಾರಿ ಸತೀಶಕುಮಾರ್ ಮಾತನಾಡಿ, ಫೋಟೊಗ್ರಾಫರ್ ಬದುಕು ಕಟ್ಟಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಬಡ್ಡಿ ರಹಿತ ಸಾಲ ವಿತರಿಸಿದರೆ ಸಹಕಾರ ಆಗಲಿದೆ. ಛಾಯಾಗ್ರಾಹಕರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಪುರಸಭೆ ಆಡಳಿತದಿಂದ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಲಯನ್ ಟಿ.ಪಿ.ರೇವಣ್ಣ ಮಾತನಾಡಿ, ಒಂದು ಫೋಟೊ ಸಾವಿರಾರು ಪದಗಳ ಸಂದೇಶ ನೀಡುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಫೋಟೊಗ್ರಾಫರ್ ಚಿತ್ರೀಕರಿಸಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಛಾಯಾಗ್ರಾಹಕರು ತಮ್ಮದೇ ಆದ ಇತಿಹಾಸ ಹೊಂದಿದ್ದಾರೆ. ಒಂದೊಂದು ಫೋಟೊ ಇಡೀ ದೇಶವೇ ಮೆಚ್ಚುವಂತೆ ಇರುತ್ತದೆ ಎಂದರು.ಪುರಸಭೆ ಸದಸ್ಯ ಎಂ.ಗಿರೀಶ್ ಮಾತನಾಡಿದರು. ಇದೇ ವೇಳೆ ಶ್ರಮಿಕ ಛಾಯಾಗ್ರಾಹಕರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪೌರ ಕಾರ್ಮಿಕ ರಂಗ, ಹಿರಿಯ ಛಾಯಾಗ್ರಾಹಕರಾದ ಧನೇಶ್, ಸಿದ್ದಪ್ಪ ನ್ಯಾಮನಹಳ್ಳಿ ಹಾಗೂ ಡೋಲು ಕಲಾವಿದ ಆರ್.ಶಿವಕುಮಾರ್ ಅವರಿಗೆ ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಜಿಪಂ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಛಾಯಾಗ್ರಾಹಕರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಾಹಿತಿ ಚಂದ್ರಶೇಖರಯ್ಯ, ಪುರಸಭೆ ಸದಸ್ಯರಾದ ಸರಸ್ವತಿ ಜಯರಾಮ್, ಜ್ಯೋತಿಲಕ್ಷ್ಮೀ, ಬಿ.ವೈ.ಬಾಬು, ಚಂದ್ರು, ಪಾರ್ಥ, ಅಶೋಕ್, ದಿಲೀಪ್ , ಬಿಜೆಪಿ ಪಾಂಡವಪುರ ಟೌನ್ ಅಧ್ಯಕ್ಷ ಬೀರಶೆಟ್ಟಹಳ್ಳಿ ಎನ್, ಸೋಮಶೇಖರ್, ಹಿರಿಯ ಛಾಯಾಗ್ರಾಹಕ ಶಾಂತಿಪ್ರಸಾದ್ ಹಾಗೂ ತಾಲೂಕು ಶ್ರಮಿಕ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.