ಮೈಸೂರು ದಸರಾಗೆ ಶಿವಗಂಗೆ, ಮಣ್ಣೆ, ಮುಕ್ತಿನಾಥೇಶ್ವರ

KannadaprabhaNewsNetwork | Published : Oct 10, 2024 2:27 AM

ಸಾರಾಂಶ

ದಾಬಸ್‌ಪೇಟೆ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನೆಲಮಂಗಲ ತಾಲೂಕಿನ ಶಿವಗಂಗೆ, ಮಣ್ಣೆ, ಮುಕ್ತಿನಾಥೇಶ್ವರ, ಕಪಿಲೇಶ್ವರ ದೇಗುಲ, ದೇವನಹಳ್ಳಿ ಕೋಟೆ ಆಯ್ಕೆಯಾಗಿವೆ.

ದಾಬಸ್‌ಪೇಟೆ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನೆಲಮಂಗಲ ತಾಲೂಕಿನ ಶಿವಗಂಗೆ, ಮಣ್ಣೆ, ಮುಕ್ತಿನಾಥೇಶ್ವರ, ಕಪಿಲೇಶ್ವರ ದೇಗುಲ, ದೇವನಹಳ್ಳಿ ಕೋಟೆ ಆಯ್ಕೆಯಾಗಿವೆ.

ಈ ಐತಿಹಾಸಿಕ ಸ್ಥಳಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಜಂಬೂ ಸವಾರಿಯಲ್ಲಿ ಪ್ರದರ್ಶನವಾಗಲಿದೆ. ಕಳೆದ ಬಾರಿ ಶಿವಗಂಗೆ ಬೆಟ್ಟದ ಮಾದರಿ, ಅದಕ್ಕೂ ಮುಂಚೆ ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಮದ ಸ್ತಬ್ಧಚಿತ್ರ ಪ್ರದರ್ಶಿಸಲಾಗಿತ್ತು.

ಈ ಬಾರಿ ನೆಲಮಂಗಲದ ಶ್ರೀ ಮುಕ್ತಿನಾಥೇಶ್ವರ ದೇವಾಲಯ ಆಯ್ಕೆಯಾಗಿದೆ.

ಶ್ರೀ ಮುಕ್ತಿನಾಥೇಶ್ವರ ದೇವಾಲಯ 900ಕ್ಕೂ ಹೆಚ್ಚು ವರ್ಷಗಳ ಪುರಾತನವಾದದು. ಇದು ದ್ರಾವಿಡ ಶೈಲಿಗೆ ಸೇರಿದೆ. ಇಲ್ಲಿ ದ್ವಾರ ಮಂಟಪ, ಸುಖನಾಸಿ, ನವರಂಗ, ಗರ್ಭಗೃಹಗಳಿರುವ ದೇವಾಲಯದ ಹೊರಭಿತ್ತಿಯ ಮೇಲೆ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಅವುಗಳಲ್ಲಿ ತಾಂಡೇಶ್ವರ, ಗಣಪತಿ, ಶಿವ ವೆಂಕಟೇಶ್ವರ, ಬ್ರಹ್ಮ, ಮಹಿಷಾಸುರ ಮರ್ಧಿನಿ, ಕಾಳಿಂಗ ಮರ್ಧನ ಎಲ್ಲವೂ ಪ್ರಮಾಣಬದ್ದ ಶಿಲ್ಪಗಳಾದರೆ ಗರ್ಭಗೃಹದ ಹಿಂಭಾಗದ ಭಿತ್ತಿಯಲ್ಲಿರುವ ಶಿಲ್ಪದಲ್ಲಿ ಶಿವ- ವಿಷ್ಣುವಿನ ಲಕ್ಷಗಳೆಲ್ಲವೂ ಸೇರಿವೆ. ಸದರಿ ದೇವಾಲಯವನ್ನು ಚೋಳರಾಜರ ಕೊನೆಯ ಸಂತತಿ ರಾಜರಾಜೇಂದ್ರ ಚೋಳರಿಂದ ನಿರ್ಮಿಸಲಾಗಿದೆ.

ಮಣ್ಣೆ ಗ್ರಾಮದ ಕಪಿಲೇಶ್ವರಸ್ವಾಮಿ ದೇವಸ್ಥಾನ:

ತ್ಯಾಮಗೊಂಡ್ಲು ಹೋಬಳಿಯಲ್ಲಿರುವ ಮಣ್ಣೆ ಗಂಗರ ರಾಜಧಾನಿಯಾಗಿತ್ತು. ನಂತರ ರಾಷ್ಟ್ರಕೂಟರ ಆಡಳಿತಕ್ಕೆ ಸೇರಿದ್ದ ಮಾನ್ಯ ಖೇಟವಾಗಿ 7ನೇ ಶತಮಾನದ ವೇಳೆಗೆ ರಾಜಕೀಯವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿಯೂ ಪ್ರಸಿದ್ಧಿ ಪಡೆದಿತ್ತು ಎನ್ನಲಾಗಿದೆ. ಗಂಗರಸರ ಕಾಲದಲ್ಲಿ ನಿರ್ಮಾಣವಾದ ಶ್ರೀಕಪಿಲೇಶ್ವರ ಸ್ವಾಮಿ ದೇವಸ್ಥಾನ ಐತಿಹಾಸಿಕ ಕುರುಹಾಗಿದೆ. ಸದರಿ ದೇವಾಲಯವನ್ನು ಗಂಗರಾಜ ಮಾರನರಸಿಂಹನ ದಳಪತಿ ಶ್ರೀ ವಿಜಯ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ.

ದಕ್ಷಿಣಕಾಶಿ ಶಿವಗಂಗೆ ಬೆಟ್ಟ:

ಪ್ರವಾಸಿಗರ ಕಣ್ಮನ ಸೆಳೆಯುವ ಸೋಂಪುರ ಹೋಬಳಿಯ ಶಿವಗಂಗೆಯನ್ನು ದಕ್ಷಿಣಕಾಶಿ ಎಂದೇ ಕರೆಯುತ್ತಾರೆ. ಶಿವಗಂಗೆ ಬೆಟ್ಟ ಉತ್ತರ ದಿಕ್ಕಿನಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣ ದಿಕ್ಕಿನಿಂದ ನೋಡಿದರೆ ಗಣೇಶನ ಆಕಾರದಿಂದಲೂ, ಪೂರ್ತಿ ದಿಕ್ಕಿನಿಂದ ನೋಡಿದರೆ ನಂದಿ ಆಕಾರದಿಂದಲೂ ಹಾಗೂ ಪಶ್ಚಿಮ ದಿಕ್ಕಿನಿಂದ ನೋಡಿದರೆ ಅಂಗದ ಆಕಾರದಿಂದ ಕಾಣುತ್ತದೆ. ಇಲ್ಲಿನ ಬೆಟ್ಟದ ತುದಿಯಲ್ಲಿ ಒಂದು ದೈತ್ಯ ನಂದಿ ಪ್ರತಿಮೆ ಬಂಡೆಗಳಿಂದ ಕೆತ್ತಲಾಗಿದೆ.

ದೇವನಹಳ್ಳಿ ಕೋಟೆ:

ಕ್ರಿಶ 1501ರಲ್ಲಿ ದೇವನಹಳ್ಳಿ ಕೋಟೆಯನ್ನು ದೇವನದೊಡ್ಡಿಯಲ್ಲಿ ದೇವರಾಯನ ಒಪ್ಪಿಗೆಯೊಂದಿಗೆ ಮಣ್ಣಿನ ಕೋಟೆಯನ್ನು ನಿರ್ಮಿಸಿದರು. ಪ್ರಸ್ತುತ ದೇವನಹಳ್ಳಿ ಕೋಟೆಯು ಟಿಪ್ಪು ಸುಲ್ತಾನ್ ಹಾಗೂ ಅವನ ತಂದೆ ಹೈದರಾಲಿಯಿಂದ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಈ ಕೋಟೆ 20 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಗೋಡೆಗಳನ್ನು ಸುಣ್ಣ ಹಾಗೂ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

ಐದರಲ್ಲಿ ಮೂರು ಸ್ಥಳ ಆಯ್ಕೆ:

ಸಾಹಿತಿ ಎನ್.ಜಿ.ಗೋಪಾಲ್ ನೆಲಮಂಗಲ ತಾಲೂಕಿನ ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ ಸಿದ್ದರಬೆಟ್ಟ ಸೇರಿದಂತೆ ಬಿನ್ನಮಂಗಲ ಮುಕ್ತಿನಾಥೇಶ್ವರ ದೇವಾಲಯ, ಮಣ್ಣೆ ಗ್ರಾಮದ ಕಪಿಲೇಶ್ವರ ಸ್ವಾಮಿ ದೇವಸ್ಥಾನ, ದಕ್ಷಿಣಕಾಶಿ ಶಿವಗಂಗೆ ಬೆಟ್ಟವನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. ಅದರಲ್ಲಿ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.

ಕೋಟ್..................

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೋಟೆ, ಮುಕ್ತಿನಾಥೇಶ್ವರ ದೇವಾಲಯ, ಕಪಿಲೇಶ್ವರ ಸ್ವಾಮಿ ದೇವಸ್ಥಾನ, ಮಣ್ಣೆ, ಶಿವಗಂಗೆ ಬೆಟ್ಟ ಮೈಸೂರು ದಸರಾ ಸ್ತಬ್ದಚಿತ್ರಗಳ ಮೆರವಣಿಗೆಗೆ ಅನುಮೋದನೆ ಸಿಕ್ಕಿದೆ. ಈಗಾಗಲೇ ಮೈಸೂರಿನಲ್ಲಿ ನಿರ್ಮಾಣ ಸಿದ್ಧತೆ ನಡೆಯುತ್ತಿದೆ.

-ಉಮಾ, ಸಹಾಯಕ ನಿರ್ದೇಶಕಿ,

ಖಾದಿ ಮತ್ತು ಗ್ರಾಮ ಉದ್ಯೋಗ ಇಲಾಖೆ, ಬೆಂ.ಗ್ರಾ. ಜಿಲ್ಲೆ

ಕೋಟ್ ...................

ಕಳೆದ ಮೂರು ವರ್ಷಗಳಿಂದ ನೆಲಮಂಗಲ ತಾಲೂಕಿನ ಐತಿಹಾಸಿಕ ಸ್ಥಳಗಳ ಸ್ತಬ್ಧಚಿತ್ರ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನವಾಗುತ್ತಿರುವುದು ಹೆಮ್ಮೆಯ ವಿಷಯ. ನನ್ನ ಕೋರಿಕೆಯನ್ನು ಸ್ವೀಕರಿಸಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸುತ್ತೇನೆ.

-ಎನ್.ಜಿ.ಗೋಪಾಲ್,

ಸಾಹಿತಿಗಳು, ಲೇಖಕರು, ನೆಲಮಂಗಲ

Share this article